High Court of Karnataka 
ಸುದ್ದಿಗಳು

ಸಚಿವ ಜಮೀರ್‌ ಆಪ್ತ ಕಾರ್ಯದರ್ಶಿ ಸರ್ಫರಾಜ್‌ ಖಾನ್‌ ವಿರುದ್ಧದ ಲೋಕಾಯುಕ್ತ ತನಿಖೆಗೆ ಹೈಕೋರ್ಟ್‌ ತಡೆ

ಲೋಕಾಯುಕ್ತ ಪೊಲೀಸರು ಅನುಮಾನ ವ್ಯಕ್ತಪಡಿಸಿರುವ 2.84 ಕೋಟಿ ರೂಪಾಯಿ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಫರಾಜ್ ಖಾನ್ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿದ ನ್ಯಾಯಾಲಯ.

Bar & Bench

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಸಂಬಂಧ ವಸತಿ ಸಚಿವ ಜಮೀರ್ ಅಹಮದ್‌ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ವಿರುದ್ಧದ ಲೋಕಾಯುಕ್ತ ತನಿಖೆಗೆ ಕರ್ನಾಟಕ ಹೈಕೋರ್ಟ್ ಗುರುವಾರ ತಡೆ ನೀಡಿದ

ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್ಐಆರ್ ಹಾಗೂ ಅಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸರ್ಫರಾಜ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರು ಸಲ್ಲಿಸಿರುವ ಮಾಹಿತಿಗಳನ್ನು ಗಮನಿಸಿದಾಗ ಎಲ್ಲವೂ ಆದಾಯ ತೆರಿಗೆ ಇಲಾಖೆಯಲ್ಲಿ ಘೋಷಿಸಿಕೊಂಡ ವಿವರಗಳು ಆಗಿವೆ. ಮೇಲಾಗಿ ಜಫ್ತಿ ಮತ್ತು ಮಹಜರು ವೇಳೆ ಯಾವುದೇ ನಗದು ಜಫ್ತಿಪಡಿಸಿಕೊಂಡಿರುವ ಬಗ್ಗೆ ನಿಖರ ಮಾಹಿತಿ ಲೋಕಾಯುಕ್ತ ಬಳಿ ಇಲ್ಲ. ದಾಖಲೆಗಳನ್ನು ಮಾತ್ರ ಜಫ್ತಿ ಮಾಡಲಾಗಿದೆ. ಹೀಗಾಗಿ, ಈ ಪ್ರಕರಣವನ್ನು ಭ್ರಷ್ಟಾಚಾರ ನಿಗ್ರಹ ಕಾಯಿದೆ ಅಥವಾ ಆದಾಯ ಮೀರಿ ಆಸ್ತಿ ಗಳ ಆರೋಪದಡಿ ಪರಿಗಣನೆಗೆ ಬರುವುದಿಲ್ಲ ಎಂದು ಹೇಳಿ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿತು.

ಅಲ್ಲದೆ, ಲೋಕಾಯುಕ್ತ ಪೊಲೀಸರು ಅನುಮಾನ ವ್ಯಕ್ತಪಡಿಸಿರುವ 2.84 ಕೋಟಿ ರೂಪಾಯಿ ಬಗ್ಗೆ ಸ್ಪಷ್ಟನೆ ನೀಡುವಂತೆ ಸರ್ಫರಾಜ್ ಖಾನ್ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 27ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲರು, ದಾಳಿ ವೇಳೆ ನಡೆಸಿದ ಜಫ್ತಿ ಹಾಗೂ ಮಹಜರಿನ ವೇಳೆ ಅಲ್ಪ ಪ್ರಮಾಣದ ನಗದು ಸಿಕ್ಕಿದೆ ಎಂಬ ಮಾಹಿತಿ ಇದೆ. ವಶಪಡಿಸಿಕೊಂಡ ದಾಖಲೆಗಳ ಪ್ರಾಥಮಿಕ ಪರಿಶೀಲನೆ ನಡೆಸಿದಾಗ ಘೋಷಿತ ಆದಾಯಕ್ಕಿಂತ ಶೇ.131ರಷ್ಟು ಅಧಿಕ ಆಸ್ತಿ ಹೊಂದಿರುವುದು ಅಂದಾಜಿಸಲಾಗಿದೆ. 2.84 ಕೋಟಿ ರೂಪಾಯಿ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ ಎಂದು ಪೀಠಕ್ಕೆ ತಿಳಿಸಿದರು.