D K Shivakumar, CBI and Karnataka HC
D K Shivakumar, CBI and Karnataka HC 
ಸುದ್ದಿಗಳು

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಕುಟುಂಬ ಸದಸ್ಯರ ಆದಾಯವನ್ನು ಶಿವಕುಮಾರ್‌ ಲೆಕ್ಕಕ್ಕೆ ಸೇರಿಸಲಾಗದು; ಹಿರಿಯ ವಕೀಲ ಚೌಟ

Bar & Bench

ಕುಟುಂಬ ಸದಸ್ಯರ ಆದಾಯ, ಖರ್ಚು-ವೆಚ್ಚಗಳನ್ನು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರ ಲೆಕ್ಕಕ್ಕೆ ಸೇರಿಸುವ ಮೂಲಕ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಹೇಳಲಾಗದು ಎಂದು ಹಿರಿಯ ವಕೀಲ ಸಂದೇಶ್‌ ಚೌಟ ಅವರು ಕರ್ನಾಟಕ ಹೈಕೋರ್ಟ್‌ ಎದುರು ಗುರುವಾರ ಬಲವಾಗಿ ವಾದಿಸಿದರು.

ಆದಾಯ ಮೀರಿ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ ಕೆ ಶಿವಕುಮಾರ್ ವಿರುದ್ಧದ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿರುವ ಎಫ್‌ಐಆರ್‌ ವಜಾ ಮಾಡುವಂತೆ ಕೋರಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಡಿ ಕೆ ಶಿವಕುಮಾರ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಭ್ರಷ್ಟಾಚಾರ ನಿಷೇಧ ಕಾಯಿದೆಯ ಸೆಕ್ಷನ್‌ 17 ಗಳಿಕೆ ಮೀರಿದ ಆಸ್ತಿಗೆ ಸಂಬಂಧಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿಗಿಂತ ಕೆಳಗಿನವರಲ್ಲದ ಅಧಿಕಾರಿ ಆದೇಶ ಮಾಡಬೇಕು. ಈ ಆದೇಶ ಎಫ್‌ಐಆರ್‌ನಲ್ಲಿ ಪ್ರತಿಫಲಿತವಾಗುತ್ತಿಲ್ಲ” ಎಂದರು.

ಇದಕ್ಕೆ ಸಿಬಿಐ ಪ್ರತಿನಿಧಿಸಿದ್ದ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ್‌ ಅವರು “ಆ ಆದೇಶ ಇದೆ” ಎಂದು ಪೀಠದ ಗಮನಸೆಳೆದರು.

ಆನಂತರ ವಾದ ಮುಂದುವರಿಸಿದ ಚೌಟ ಅವರು “ಸಾರ್ವಜನಿಕ ಸೇವಕ (ಇಲ್ಲಿ ಡಿ ಕೆ ಶಿವಕುಮಾರ್‌) ಆದಾಯ ಮೀರಿದ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಪ್ರಯತ್ನಿಸುವಾಗ ಅವರ ಕುಟುಂಬ ಸದಸ್ಯರ ಆದಾಯವನ್ನು ಸೇರಿಸಲಾಗದು. ಇದು ಬೇನಾಮಿ ಪ್ರಕರಣವಲ್ಲ. ಆದರೆ, ಸಿಬಿಐ ಕುಟುಂಬ ಸದಸ್ಯರ ಆದಾಯ ಮತ್ತು ಖರ್ಚನ್ನು ಸಾರ್ವಜನಿಕ ಸೇವಕನ ಲೆಕ್ಕಕ್ಕೆ ಹಾಕುವ ಮೂಲಕ ಇಷ್ಟು ಮೌಲ್ಯದ ಅಕ್ರಮ ಆಸ್ತಿ ಗಳಿಕೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ಸುದೀರ್ಘವಾಗಿ ವಾದಿಸಿದರು.

“ಎರಡು ವರ್ಷ ನಾಲ್ಕು ತಿಂಗಳಿಂದ ಡಿ ಕೆ ಶಿವಕುಮಾರ್‌ ಅವರ ವಿರುದ್ಧ ತನಿಖೆ ನಡೆಸಲಾಗುತ್ತಿದೆ. ಸಿಬಿಐಗೆ ಸಾಕಷ್ಟು ವಕೀಲರ ಮಾರ್ಗದರ್ಶನವಿದ್ದರೂ ದೋಷಪೂರಿತವಾಗಿ ಎಫ್‌ಐಆರ್‌ ದಾಖಲಿಸಲಾಗಿದೆ. ಆರೋಪಕ್ಕೆ ಹೊಂದದ ಸೆಕ್ಷನ್‌ಗಳನ್ನು ಎಫ್‌ಐಆರ್‌ನಲ್ಲಿ ಅಳವಡಿಸಲಾಗಿದೆ. ಶಿವಕುಮಾರ್‌ ಅವರ ಕುಟುಂಬ ಸದಸ್ಯರು ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿದ್ದಾರೆ ಎಂದು ಆಕ್ಷೇಪಣೆಯಲ್ಲಿ ಸಿಬಿಐ ಹೇಳಿದೆ. ಆದರೆ, ಈ ಅಂಶ ಎಫ್‌ಐಆರ್‌ನಲ್ಲಿ ಇಲ್ಲ” ಎಂದು ಪೀಠಕ್ಕೆ ವಿವರಿಸಿದರು.

ನಿನ್ನೆ ಚೌಟ ಅವರು ಡಿ ಕೆ ಶಿವಕುಮಾರ್‌ ಅವರ ವಿರುದ್ಧ ರಾಜಕೀಯ ದುರುದ್ದೇಶ ಇಟ್ಟುಕೊಂಡು ಪ್ರಕರಣ ದಾಖಲಿಸಲಾಗಿದೆ. ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ 17ಎ ಅಡಿ ಪ್ರಕರಣ ದಾಖಲಿಸುವಾಗ ಸಕ್ಷಮ ಪ್ರಾಧಿಕಾರದ ಒಪ್ಪಿಗೆ ಪಡೆಯಲಾಗಿಲ್ಲ ಎಂದು ವಾದಿಸಿದ್ದರು. ನಾಳೆಯೂ ವಿಚಾರಣೆ ಮುಂದುವರಿಯಲಿದೆ.