Deputy CM D K Shivakumar and Supreme Court 
ಸುದ್ದಿಗಳು

ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ಹೈಕೋರ್ಟ್‌ ನೀಡಿರುವ ತಡೆ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ನಕಾರ

“ಮಧ್ಯಪ್ರವೇಶ ಆದೇಶವನ್ನು ಆಧರಿಸಿ ಹಾಲಿ ವಿಶೇಷ ಮೇಲ್ಮನವಿ ಸಲ್ಲಿಸಲಾಗಿದೆ. ಹೀಗಾಗಿ, ಈ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ. ಪಕ್ಷಕಾರರ ಎಲ್ಲಾ ಪ್ರಶ್ನೆಗಳನ್ನು ಹೈಕೋರ್ಟ್‌ ನಿರ್ಧರಿಸಲಿದೆ” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

Bar & Bench

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ವಿರುದ್ಧದ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ತಡೆಯಾಜ್ಞೆ ನೀಡಿರುವ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.

ತನಿಖೆಗೆ ತಡೆ ನೀಡಿ 2023ರ ಫೆಬ್ರವರಿ 10ರಂದು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠ ಮಾಡಿರುವ ಮಧ್ಯಂತರ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ ಆರ್‌ ಗವಾಯಿ, ಸಿ ಟಿ ರವಿಕುಮಾರ್‌ ಮತ್ತು ಸಂಜಯ್‌ ಕುಮಾರ್‌ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಜಾ ಮಾಡಿದೆ.

ಸಿಬಿಐ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು “ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿಸಿರುವುದಕ್ಕೆ ಹೈಕೋರ್ಟ್‌ನ ವಿಭಾಗೀಯ ಪೀಠ ತಡೆ ನೀಡಿದೆ. ಅಕ್ರಮ ಆಸ್ತಿ ಗಳಿಕೆಯ ತನಿಖೆ ನಡೆಸಲು ಸಿಬಿಐಗೆ ಹೈಕೋರ್ಟ್‌ನ ಏಕಸದಸ್ಯ ಪೀಠ ತಡೆಯಾಜ್ಞೆ ವಿಧಿಸಿರುವನ್ನೂ ಒಳಗೊಂಡ ಎರಡೂ ಅರ್ಜಿಗಳನ್ನು ಒಟ್ಟಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು. ವಿಭಾಗೀಯ ಪೀಠದಲ್ಲಿ ತಡೆಯಾಜ್ಞೆಯಾಗಿರುವ ಅರ್ಜಿಯಲ್ಲಿನ ಆದೇಶ ನಮ್ಮ ಪರವಾಗಿ ಆದರೆ ಏಕಸದಸ್ಯ ಪೀಠದಲ್ಲಿರುವ ಅರ್ಜಿ ಅಸ್ತಿತ್ವ ಕಳೆದುಕೊಳ್ಳಲಿದೆ” ಎಂದರು.

ಡಿ ಕೆ ಶಿವಕುಮಾರ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು “ಹೈಕೋರ್ಟ್‌ನ ಏಕಸದಸ್ಯ ಪೀಠವು ಈಗಾಗಲೇ ಐದು ಬಾರಿ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿದೆ. ಇದ್ಯಾವುದನ್ನೂ ಸಿಬಿಐ ಪ್ರಶ್ನಿಸಿಲ್ಲ. ಈ ಮಧ್ಯೆ, ಡಿ ಕೆ ಶಿವಕುಮಾರ್‌ ಅವರು ಸಿಬಿಐ ತನಿಖೆ ಪ್ರಶ್ನಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಏಕಸದಸ್ಯ ಪೀಠದ ಮುಂದೆ ವಾದ-ಪ್ರತಿವಾದ ಪೂರ್ಣಗೊಂಡಿದೆ. ಇಂದು ಸಿಬಿಐ ವಕೀಲರ ಪ್ರತಿವಾದಕ್ಕೆ ಕಾಲ ನಿಗದಿಯಾಗಿದೆ. ಇನ್ನೇನು ಆದೇಶ ಕಾಯ್ದಿರಿಸಿ, ತೀರ್ಪು ಪ್ರಕಟವಾಗುವುದರಿಂದ ಹಾಲಿ ಪ್ರಶ್ನಾರ್ಹವಾದ ಮಧ್ಯಂತರ ತಡೆಯಾಜ್ಞೆಯನ್ನು ತೆರವು ಮಾಡುವ ಅಗತ್ಯ ಕಾಣುವುದಿಲ್ಲ” ಎಂದರು.

“ಸಿಬಿಐ ತನಿಖೆಗೆ ಕರ್ನಾಟಕ ಸರ್ಕಾರ ಅನುಮತಿಸಿರುವ ಆದೇಶವನ್ನು ಶಿವಕುಮಾರ್‌ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಇದನ್ನು ಏಕಸದಸ್ಯ ಪೀಠ ವಜಾ ಮಾಡಿದ್ದು, ವಿಭಾಗೀಯ ಪೀಠದಲ್ಲಿ ಪ್ರಶ್ನಿಸಲಾಗಿ ಶಿವಕುಮಾರ್‌ ಅವರ ಪರವಾಗಿ ಮಧ್ಯಂತರ ತಡೆಯಾಜ್ಞೆ ಆಗಿದೆ. ಈಗ ಅದನ್ನೂ ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದೆ. ಪ್ರತಿಯೊಂದು ಮಧ್ಯಂತರ ಆದೇಶಕ್ಕೂ ಸಿಬಿಐ ವಿಶೇಷ ಮೇಲ್ಮನವಿ ಸಲ್ಲಿಸುತ್ತಿದೆ” ಎಂದರು.

ಆಗ ಪೀಠವು “ಮಧ್ಯಪ್ರವೇಶ ಆದೇಶವನ್ನು ಆಧರಿಸಿ ಹಾಲಿ ವಿಶೇಷ ಮೇಲ್ಮನವಿ ಸಲ್ಲಿಸಲಾಗಿದೆ. ಹೀಗಾಗಿ, ಈ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ. ಪಕ್ಷಕಾರರ ಎಲ್ಲಾ ಪ್ರಶ್ನೆಗಳನ್ನು ಹೈಕೋರ್ಟ್‌ ನಿರ್ಧರಿಸಲಿದೆ. ತುರ್ತಾಗಿ ಅರ್ಜಿ ಇತ್ಯರ್ಥಪಡಿಸಲು ಅರ್ಜಿದಾರರು ಹೈಕೋರ್ಟ್‌ ಅನ್ನು ಕೋರಬಹುದು. ಹೈಕೋರ್ಟ್‌ ಅರ್ಜಿಯ ಮೆರಿಟ್‌ ಮೇಲೆ ಅದನ್ನು ನಿರ್ಧರಿಸಬಹುದು” ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.