“ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆದಾಯವು ಗೊತ್ತಿರುವ ಮೂಲಗಳಿಂದ ಶೇ 2031ರಷ್ಟಿದೆ ಎಂಬುದಕ್ಕಾದರೂ ತನಿಖೆ ಅಗತ್ಯವಿದೆ” ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ಹೇಳಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಸಂಬಂಧ ತಮ್ಮ ವಿರುದ್ಧ ಭ್ರಷ್ಟಾಚಾರ ನಿಯಂತ್ರಣಾ ದಳ (ಎಸಿಬಿ) ಪ್ರಸ್ತುತ ಲೋಕಾಯುಕ್ತ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಚಿವ ಜಮೀರ್ ಅಹ್ಮದ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ವಜಾಗೊಳಿಸಿದೆ.
“ತನಿಖೆಗೆ ಮಧ್ಯಂತರ ತಡೆ ನೀಡಬೇಕು ಎಂದು ಜಮೀರ್ ಅಹ್ಮದ್ ಖಾನ್ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿ ಜಮೀರ್ ಅಹ್ಮದ್ ಖಾನ್ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ 2023ರ ಏಪ್ರಿಲ್ 6 ರಂದು ಪ್ರಕರಣದ ತನಿಖೆಗೆ ತಡೆ ನೀಡಿದೆ. ಹಾಗಾಗಿ, ಈ ಆದೇಶವನ್ನು ಮುಂದಿನ 30 ದಿನಗಳ ಕಾಲ ಅಮಾನತ್ತಿನಲ್ಲಿಡಲಾಗಿದೆ” ಹೈಕೋರ್ಟ್ ಆದೇಶದಲ್ಲಿ ವಿವರಿಸಿದೆ.
“ಜಾರಿ ನಿರ್ದೇಶನಾಲಯದ (ಇ ಡಿ) ಮಾಹಿತಿ ಆಧರಿಸಿ ಜಮೀರ್ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿದೆ. ಇ ಡಿ ಮಾಹಿತಿ ನೀಡಿದ್ದು, ಆನಂತರ ಮೂಲ ವರದಿ ಆಧರಿಸಿ ಅರ್ಜಿದಾರರ ವಿರುದ್ಧದ ಪ್ರಕ್ರಿಯೆ ಆರಂಭಿಸಿದೆ. ಇದೆಲ್ಲದಕ್ಕೂ ಕಾನೂನಿನ ಬಲವಿದೆ. ಹೀಗಾಗಿ, ಅರ್ಜಿದಾರರ ಪರ ಹಿರಿಯ ವಕೀಲರ ವಾದದ ಬತ್ತಳಿಕೆಯಲ್ಲಿನ ಯಾವುದೇ ಅಸ್ತ್ರ ಸಹಾಯ ಮಾಡುವುದಿಲ್ಲ. ಈ ನೆಲೆಯಲ್ಲಿ ಅರ್ಜಿಗೆ ಯಾವುದೇ ಮಾನ್ಯತೆ ಇಲ್ಲದಿರುವುದರಿಂದ ಅದು ವಜಾಕ್ಕೆ ಅರ್ಹವಾಗಿದೆ. ಪ್ರಕರಣವು ತನಿಖೆಯ ಹಂತದಲ್ಲಿದ್ದು, ಹಿಂದಿನ ವಿಶ್ಲೇಷಣೆಯು ತನಿಖೆಗೆ ಅಗತ್ಯವಾಗಿದೆ. ಕನಿಷ್ಠ ಪಕ್ಷ ಅರ್ಜಿದಾರರ ಆದಾಯವು ಗೊತ್ತಿರುವ ಮೂಲಗಳಿಂದ ಶೇ 2031ರಷ್ಟಿದೆ ಎಂಬುದಕ್ಕಾದರೂ ತನಿಖೆ ಅಗತ್ಯವಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.
“ಐಎಂಎ (ಐ-ಮಾನಿಟರಿ ಅಡ್ವೈಸರಿ) ಹಗರಣದ ಆರೋಪಿ ಮನ್ಸೂರ್ ಅಲಿ ಖಾನ್ ವಿರುದ್ಧ ಇ ಡಿ ಈಗಾಗಲೇ ಪ್ರಕರಣ ದಾಖಲಿಸಿದ್ದು, ಜಮೀರ್ ಅಹ್ಮದ್ ಖಾನ್ ಮನೆ ಮೇಲೆಯೂ ದಾಳಿ ನಡೆಸಿದೆ. ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಸೆಕ್ಷನ್ 66ರ ಅಡಿ ಎಸಿಬಿ ಜೊತೆಗೆ ಮಾಹಿತಿ ನೀಡಿದೆ. ಎಸಿಬಿ ಪ್ರಕರಣ ದಾಖಲಿಸುವುದಕ್ಕೂ ಮುನ್ನ ಜಾರಿ ನಿರ್ದೇಶನಾಲಯ ಪ್ರಕ್ರಿಯೆ ಪ್ರಾರಂಭಿಸಿತ್ತು. ಆದ್ದರಿಂದ, ಇ ಡಿ ವರದಿಯ ಆಧಾರದಲ್ಲಿ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿರುವುದು ತಪ್ಪಾಗುವುದಿಲ್ಲ” ಎಂದು ಪೀಠ ತಿಳಿಸಿದೆ.
“ಎಸಿಬಿಯು ಮೂಲ ವರದಿಯನ್ನು ಸಕ್ಷಮ ಪ್ರಾಧಿಕಾರವಾದ ಪೊಲೀಸ್ ವರಿಷ್ಠಾಧಿಕಾರಿಯ ಮುಂದೆ ಮಂಡಿಸಲಾಗಿದ್ದು, 2022ರ ಮೇ 5ರಂದು ಡಿವೈಎಸ್‌ಪಿಗೆ ಪ್ರಕರಣ ದಾಖಲಿಸಲು ಅನುಮತಿಸಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
“ಪಿಎಂಎಲ್‌ಎ ಸೆಕ್ಷನ್ 66ರ ಅಡಿ ಜಾರಿ ನಿರ್ದೇಶನಾಲಯದಿಂದ ಪಡೆದ ಮಾಹಿತಿಯನ್ನು ಕಾನೂನಿನಲ್ಲಿ ಏನೇನೂ ಅಲ್ಲ ಎಂದು ಹೇಳಲಾಗದು. ಇದು ಹಾಲಿ ಪ್ರಕರಣ ದಾಖಲಿಸಲು ಆಧಾರವಾಗಿದೆ. ಪಿಎಂಎಲ್‌ಎ ಸೆಕ್ಷನ್ 66(2) ಅಡಿ ಇ ಡಿ ಮಾಹಿತಿ ನೀಡಿದ್ದರೆ ಅದು ಬೇರೆಯದೆ ಕತೆಯಾಗುತ್ತಿತ್ತು. ಎಸಿಬಿಯು ಪ್ರಾಥಮಿಕ ತನಿಖೆ ನಡೆಸಿ, ಮೂಲ ವರದಿ ಸಿದ್ಧಪಡಿಸಿದ ಬಳಿಕ ಪ್ರಕರಣ ದಾಖಲಿಸಿದೆ” ಎಂದು ಪೀಠ ಸ್ಪಷ್ಟಪಡಿಸಿದೆ.
ಜಮೀರ್ ಪ್ರತಿನಿಧಿಸಿದ್ದ ಹಿರಿಯ ವಕೀಲ ವಿ ಲಕ್ಷ್ಮಿನಾರಾಯಣ ಅವರು “ಅಗತ್ಯವಾಗಿ ಪ್ರಾಥಮಿಕ ತನಿಖೆ ನಡೆಸದೇ ಪ್ರಕರಣ ದಾಖಲಿಸಲಾಗಿದೆ. ಮೂಲ ವರದಿಯನ್ನು (ಸೋರ್ಸ್ ರಿಪೋರ್ಟ್) ಸಿದ್ಧಪಡಿಸಲಾಗಿಲ್ಲ. ಅಲ್ಲದೇ, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆಯಲಾಗಿಲ್ಲ. ಕಾಯಿದೆಯ ಪ್ರಕಾರ ಜಾರಿ ನಿರ್ದೇಶನಾಯದ ವರದಿ ಆಧರಿಸಿ ಪ್ರಕರಣ ದಾಖಿಸಲಾಗದು” ಎಂದು ಆಕ್ಷೇಪಿಸಿದ್ದರು.
“2022ರ ಫೆಬ್ರವರಿ 28ರಂದು ಇ ಡಿಯು ಎಸಿಬಿಗೆ ಮಾಹಿತಿ ನೀಡಿದ್ದು, ಮೂರು ತಿಂಗಳ ಬಳಿಕ ಅಂದರೆ 2022ರ ಮೇ 5ರಂದು ಎಸಿಬಿಯು ಮೂಲ ವರದಿ ಸಿದ್ಧಪಡಿಸಿದೆ” ಎಂದು ವಾದಿಸಿದ್ದರು.
ಎಸಿಬಿ ಪರ ವಕೀಲ ಬಿ ಬಿ ಪಾಟೀಲ್ ಅವರು “ತನಿಖೆಯಲ್ಲಿ ಏನೆಲ್ಲಾ ಮಾಹಿತಿ ದೊರೆತಿದೆ ಎಂಬುದನ್ನು ಇ ಡಿ ಲೋಕಾಯುಕ್ತದ ಜೊತೆ ಹಂಚಿಕೊಳ್ಳಲು ಯಾವಾಗಲು ಮುಕ್ತವಾಗಿದೆ. ಮನ್ಸೂರ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಅರ್ಜಿದಾರರ ಪಾತ್ರ ಹಲವು ಕೋಟಿಗಳಿಗೆ ವ್ಯಾಪಿಸಿತ್ತು. ಇದರಿಂದ ಎಲ್ಲಾ ಪ್ರಕ್ರಿಯೆ ಆರಂಭವಾಗಿದ್ದು, ಎಸಿಬಿಯು ಮೂರು ತಿಂಗಳ ಕಾಲ ಪ್ರಾಥಮಿಕ ತನಿಖೆ ನಡೆಸಿ ಸರಿಯಾಗಿ ಮೂಲ ವರದಿ ಸಿದ್ಧಪಡಿಸಿದೆ. ಮೂಲ ವರದಿಯಲ್ಲಿ ಅರ್ಜಿದಾರರ ಅಕ್ರಮ ಆಸ್ತಿಯು ಗೊತ್ತಿರುವ ಮೂಲಗಳಿಗಿಂತ ಶೇ 2031ರಷ್ಟಿದೆ. ಹೀಗಾಗಿ, ಪ್ರಕರಣ ದಾಖಲಿಸಿರುವುದನ್ನು ಅಕ್ರಮ ಎನ್ನಲಾಗದು” ಎಂದು ಸಮರ್ಥಿಸಿದ್ದರು.
ಪ್ರಕರಣದ ಹಿನ್ನೆಲೆ: ಐಎಂಎ ಪ್ರವರ್ತಕ ಮನ್ಸೂರ್ ಅಲಿಖಾನ್ ಅವರೊಂದಿಗಿನ ವಹಿವಾಟಿಗೆ ಸಂಬಂಧಿಸಿದಂತೆ ಇ ಡಿ ಯಿಂದ ಪಡೆದಿದ್ದ ವರದಿಯನ್ನು ಆಧರಿಸಿ ಎಸಿಬಿ ಪ್ರಕರಣ ದಾಖಲಿಸಿತ್ತು. ಜಮೀರ್ ಅಹ್ಮದ್ ಖಾನ್ ಮತ್ತು ಮನ್ಸೂರ್ ಅಲಿಖಾನ್ ನಡುವೆ 9.38 ಕೋಟಿ ರೂಪಾಯಿ ಚೆಕ್ ವಹಿವಾಟು ನಡೆದಿತ್ತು. 25 ಕೋಟಿ ರೂಪಾಯಿ ಸಾಲ ಹಾಗೂ 29.38 ಕೋಟಿ ರೂಪಾಯಿ ನಗದನ್ನು ಮನ್ಸೂರ್ ಜಮೀರ್‌ಗೆ ನೀಡಿದ್ದು, ಅದನ್ನು ಜಮೀರ್ ಮರಳಿಸಿಲ್ಲ ಎಂದು ಮನ್ಸೂರ್ ನೀಡಿದ್ದ ಹೇಳಿಕೆಯನ್ನು ಇ ಡಿ ಅಧಿಕಾರಿಗಳು ಎಸಿಬಿಯೊಂದಿಗೆ ಹಂಚಿಕೊಂಡಿದ್ದರು. ಇದರ ಆಧಾರದಲ್ಲಿ ಎಸಿಬಿ ಅಧಿಕಾರಿಗಳು ಜಮೀರ್ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 13(1)(b) ಜೊತೆಗೆ 13(2) ಅಡಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಜಮೀರ್ ಅಹ್ಮದ್ ಖಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.