ಆದಾಯ ಮೀರಿ ಆಸ್ತಿ ಗಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧದ ಪ್ರಕರಣದ ವಿಚಾರಣೆ ವೇಳೆ ಕೇಂದ್ರೀಯ ತನಿಖಾ ದಳದ (ಸಿಬಿಐ) ನಿಲುವಿಗೆ ಕರ್ನಾಟಕ ಹೈಕೋರ್ಟ್ ಕಿಡಿಕಾರಿತು. ಈ ವೇಳೆ ಸಿಬಿಐ ಅಷ್ಟೇ ಬಲವಾಗಿ ತನ್ನ ನಿಲುವು ಸಮರ್ಥಿಸಿಕೊಂಡಿತು.
ಸಿಬಿಐ ತನಿಖೆ ಪ್ರಶ್ನಿಸಿ ಡಿ ಕೆ ಶಿವಕುಮಾರ್ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಶುಕ್ರವಾರ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಎಚ್ ಜಾಧವ್ ಅವರು “ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಮಾಡಿರುವ ಆದೇಶವನ್ನು ಪ್ರಶ್ನಿಸಲಾದ ಮತ್ತೊಂದು ಅರ್ಜಿ ಇನ್ನೊಂದು ಪೀಠದಲ್ಲಿದೆ. ಅದನ್ನೂ ಇದೇ ಪೀಠಕ್ಕೆ ತರಿಸಿಕೊಂಡು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು” ಎಂದು ಕೋರಿದರು. ಈ ಮನವಿಗೆ ನ್ಯಾಯಾಲಯವು ಸಹಮತ ವ್ಯಕ್ತಪಡಿಸಿತು.
ವಿಚಾರಣೆ ವೇಳೆ ಬೇರೊಂದು ಪೀಠದಲ್ಲಿನ ಅರ್ಜಿಯ ಪರವಾಗಿ ಹಾಜರಿದ್ದ ಹಿರಿಯ ವಕೀಲ ಉದಯ ಹೊಳ್ಳ ಅವರು ಇನ್ನೂ ಆ ಪೀಠದಿಂದ ಅರ್ಜಿಯು ಇಲ್ಲಿಗೆ ವರ್ಗಾವಣೆ ಮಾಡಿಲ್ಲ ಎಂಬ ಅಂಶವನ್ನು ನ್ಯಾಯಮೂರ್ತಿಗಳ ಗಮನಕ್ಕೆ ತಂದರು.
ಇದಕ್ಕೆ ಸಿಬಿಐ ಪರ ವಕೀಲ ಪಿ ಪ್ರಸನ್ನ ಕುಮಾರ್ ಅವರನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ‘ಯಾಕೆ ನೀವು ಅದನ್ನು ಇಲ್ಲಿಗೆ ವರ್ಗಾಯಿಸಲು ಮೆಮೊ ಸಲ್ಲಿಸಿಲ್ಲ’ ಎಂದು ಕೇಳಿದರು.
ಇದಕ್ಕೆ ಪ್ರಸನ್ನಕುಮಾರ್ ಅವರು “ಅದು ಸಿಬಿಐ ಕೆಲಸವಲ್ಲ. ಅರ್ಜಿದಾರರ ಕೋರಿಕೆ. ಅಷ್ಟಕ್ಕೂ, ಇದೇ ಪೀಠಕ್ಕೆ ಬರಬೇಕು ಎಂಬ ಬಗ್ಗೆ ಯಾವುದೇ ನ್ಯಾಯಾಂಗ ಆದೇಶವಿಲ್ಲ. ಅಂತೆಯೇ, ವಿಭಾಗೀಯ ಪೀಠವು ಅರ್ಜಿದಾರರ ಸಂಬಂಧಿಯೊಬ್ಬರು ಸಲ್ಲಿಸಿದ್ದ ಇದೇ ತಳಹದಿಯ ಮನವಿಯನ್ನು ತಳ್ಳಿ ಹಾಕಿತ್ತು. ಹೀಗಿರುವಾಗ ಶಿವಕುಮಾರ್ ಪುನಃ ಇದೇ ಪ್ರಾರ್ಥನೆ ಅಡಿಯಲ್ಲಿ ಸಲ್ಲಿರುವ ಅರ್ಜಿ ಇದೇ ಪೀಠಕ್ಕೆ ಬರಬೇಕು ಎಂದು ತಾವು ಹೇಗೆ ಹೇಳುತ್ತೀರಿ. ಇದನ್ನು ನಿರ್ಧರಿಸುವವರು ರೋಸ್ಟರ್‌ನ ಮಾಸ್ಟರ್ ಆದ ಚೀಫ್ ಜಸ್ಟೀಸ್” ಎಂದರು.
ಇದಕ್ಕೆ ಪೀಠವು “ಏನು ನೀವು ಹೇಳುತ್ತಿರುವುದು, ನಾನು ಆವತ್ತು ಮೌಖಿಕವಾಗಿ ನೀಡಿದ ನಿರ್ದೇಶನವನ್ನು ನೀವು ಪಾಲಿಸುವುದಿಲ್ಲವೇ, ಅದೇನು ಆದೇಶವಲ್ಲವೇ’ ಎಂದು ತರಾಟೆಗೆ ತೆಗೆದುಕೊಂಡಿತು. ಇದಕ್ಕೆ ಸಿಬಿಐ ವಕೀಲ ಪ್ರಸನ್ನಕುಮಾರ್ ಅವರು “ಸ್ವಾಮಿ, ಈ ಪೀಠಕ್ಕೆ ಆ ಅರ್ಜಿ ಬರಬಾರದು ಎಂಬ ಬಗ್ಗೆ ಸಿಬಿಐ ಅಭ್ಯಂತರವೇನೂ ಇಲ್ಲ. ಬೇಕಾದರೆ ತಾವು ಲಿಖಿತವಾದ ನ್ಯಾಯಾಂಗ ಆದೇಶ ಮಾಡಿ” ಎಂದರು. ಈ ಮಧ್ಯೆ, ಮಧ್ಯಂತರ ತಡೆಯಾಜ್ಞೆ ಮುಂದುವರಿಸಬೇಕು ಎಂಬ ಅರ್ಜಿದಾರರ ಕೋರಿಕೆಯನ್ನು ಮನ್ನಿಸಿ, ವಿಚಾರಣೆಯನ್ನು ಪೀಠವು ಮಾರ್ಚ್ 31ಕ್ಕೆ ಮುಂದೂಡಿತು.