K S Eshwarappa and Karnataka HC 
ಸುದ್ದಿಗಳು

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಈಶ್ವರಪ್ಪ, ಪುತ್ರ ಕಾಂತೇಶ್‌, ಸೊಸೆ ಶಾಲಿನಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿ 12 ವರ್ಷಗಳು ಕಳೆಯುತ್ತಿದೆ. ದೂರು ದಾಖಲಾದ ಸಂದರ್ಭದಲ್ಲಿ ಬಿಎನ್ಎಸ್ಎಸ್ ಜಾರಿಯಲ್ಲಿರಲಿಲ್ಲ ಎಂದಿರುವ ನ್ಯಾಯಾಲಯ.

Bar & Bench

ಅಕ್ರಮ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಮತ್ತು ಅವರ ಕುಟುಂಬದ ಸದಸ್ಯರು, ತಮ್ಮ ವಿರುದ್ಧ ಶಿವಮೊಗ್ಗ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಮಾಜಿ ಸಚಿವರೂ ಆದ ಕೆ ಎಸ್‌ ಈಶ್ವರಪ್ಪ, ಪುತ್ರ ಕೆ ಇ ಕಾಂತೇಶ್‌ ಮತ್ತು ಸೊಸೆ ಶಾಲಿನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿ 12 ವರ್ಷಗಳು ಕಳೆಯುತ್ತಿದೆ. ದೂರು ದಾಖಲಾದ ಸಂದರ್ಭದಲ್ಲಿ ಬಿಎನ್ಎಸ್ಎಸ್ ಜಾರಿಯಲ್ಲಿರಲಿಲ್ಲ. ಹೀಗಾಗಿ, ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ತನಿಖೆ ನಡೆಸಲು ನಿರ್ದೇಶನ ನೀಡಿರುವುದರಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ಉಲ್ಲಂಘನೆ ಆಗಿಲ್ಲ” ಎಂದು ಪೀಠ ಸ್ಪಷ್ಟಪಡಿಸಿದೆ.

ಇದೇ ವೇಳೆ, “ತನಿಖೆಗೆ ಸಹಕರಿಸಿದರೆ ಬಂಧಿಸುವುದಿಲ್ಲ” ಎಂಬ ಲೋಕಾಯುಕ್ತ ಪರ ವಕೀಲರ ವಾಗ್ದಾನವನ್ನು ಪರಿಗಣಿಸಿದ ಪೀಠವು “ಅರ್ಜಿದಾರರು ತನಿಖೆಗೆ ಸಹಕರಿಸಿದರೆ ಬಂಧಿಸಬಾರದು” ಎಂದು ನಿರ್ದೇಶಿಸಿತು.

“ಎಫ್‌ಐಆರ್‌ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದಲ್ಲಿನ ನ್ಯಾಯಿಕ ಪ್ರಕ್ರಿಯೆ ರದ್ದುಪಡಿಸಬೇಕು” ಎಂದು ಅರ್ಜಿದಾರರು ಕೋರಿದ್ದರು. ‌

ಪ್ರಕರಣ ವಜಾ ಮಾಡಿದ ನ್ಯಾಯಾಲಯವು 80 ವರ್ಷ ಸಮೀಪದಲ್ಲಿರುವ ಈಶ್ವರಪ್ಪ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳಬಾರದು ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಈಶ್ವರಪ್ಪ 2006ರಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವರಾದ ನಂತರ ಶಿವಮೊಗ್ಗದಲ್ಲಿ ತಮ್ಮ ಪುತ್ರ ಕೆ ಇ ಕಾಂತೇಶ್‌ ಮತ್ತು ಸೊಸೆ ಶಾಲಿನಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರಾಸ್ತಿ ಖರೀದಿಸಿದ್ದಾರೆ. ಈ ಮೂವರೂ ಜಂಟಿಯಾಗಿ ಹಲವು ಶೈಕ್ಷಣಿಕ ಸಂಸ್ಥೆಗಳು, ಕೈಗಾರಿಕೆಗಳು, ಆಟೋಮೊಬೈಲ್‌ ಷೋರೂಂಗಳ ಒಡೆತನ ಹೊಂದಿದ್ದಾರೆ. ಕೇವಲ ಮೂರೂವರೆ ವರ್ಷದಲ್ಲಿ ಇವರ ಆಸ್ತಿ ಶೇ 100 ಪಟ್ಟು ಅಧಿಕವಾಗಿದೆ ಎಂದು ಆರೋಪಿಸಿ ಶಿವಮೊಗ್ಗದ ವಕೀಲ ಬಿ ವಿನೋದ್‌ 2021ರಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಇದರನ್ವಯ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಭ್ರಷ್ಟಾಚಾರ ನಿಗ್ರಹ ಕಾಯಿದೆ-1988ರ ಸೆಕ್ಷನ್‌ 13(1)(ಡಿ) (ಅಕ್ರಮ ಸಂಪಾದನೆಗೆ ಅಧಿಕಾರ ದುರ್ಬಳಕೆ), 13(1)(ಇ), ಭಾರತೀಯ ದಂಡ ಸಂಹಿತೆ–1860ರ ಸೆಕ್ಷನ್ 420ರ (ವಂಚನೆ) ಮತ್ತು ಕಲಂ 120-ಬಿ (ಅಪರಾಧಿಕ ಒಳಸಂಚು) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ಸಲ್ಲಿಸುವಂತೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿಗೆ 2025ರ ಏಪ್ರಿಲ್ 5ರಂದು ಆದೇಶಿಸಿತ್ತು.