ರಾಷ್ಟ್ರಗೀತೆಗೆ ಅಗೌರವ ತೋರಿದ್ದಾಗಿ ಆರೋಪಿಸಿ ಬಿಜೆಪಿ ನಾಯಕರೊಬ್ಬರು ತಮ್ಮ ವಿರುದ್ಧ ನೀಡಿದ್ದ ಕ್ರಿಮಿನಲ್ ದೂರನ್ನು ರದ್ದುಗೊಳಿಸುವಂತೆ ಕೋರಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ (ಸಿಎಂ) ಮಮತಾ ಬ್ಯಾನರ್ಜಿ ಅವರು ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಆದೇಶ ನೀಡಿದ ನ್ಯಾ. ಅಮಿತ್ ಬೋರ್ಕರ್ ಅವರು ಸೆಷನ್ಸ್ ನ್ಯಾಯಾಧೀಶರು ಮೆರಿಟ್‌ಗಳ ಮೇಲೆ ದೂರನ್ನು ನಿರ್ಧರಿಸದೆ ಅಥವಾ ಅರ್ಹತೆಗಳ ಮೇಲೆ ನಿರ್ಣಾಯಕವಾಗಿ ದಾಖಲಿಸಿಕೊಳ್ಳದೆ ಪ್ರಕರಣವನ್ನು ಮರಳಿಸಿರುವುದು 2013ರ ನ್ಯಾಷನಲ್ ಬ್ಯಾಂಕ್ ಆಫ್ ಒಮನ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಅನುಗುಣವಾಗಿಲ್ಲ ಎಂದರು.
"ನನ್ನ ಅಭಿಪ್ರಾಯದಲ್ಲಿ ಪ್ರಸ್ತುತ ಪ್ರಕರಣದಲ್ಲಿ ನ್ಯಾಯವ್ಯಾಪ್ತಿಯ ದೋಷ ಅಥವಾ ಪೇಟೆಂಟ್ ಅಕ್ರಮ ಇಲ್ಲ. ಕ್ರಿಮಿನಲ್ ಅರ್ಜಿಯನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಧೀಶರು ಹೇಳಿದರು.
ಬಿಜೆಪಿ ಮುಂಬೈ ಕಾರ್ಯದರ್ಶಿ ವಿವೇಕಾನಂದ ಗುಪ್ತಾ ಅವರು ತಮ್ಮ ವಿರುದ್ಧ ದೂರು ಸಲ್ಲಿಸಿದ ನಂತರ ಮುಂಬೈನ ಸೆವ್ರಿಯಲ್ಲಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರು ನೀಡಿದ ಸಮನ್ಸ್ ಅನ್ನು ರದ್ದುಗೊಳಿಸುವಂತೆಯೂ ಬ್ಯಾನರ್ಜಿ ತಮ್ಮ ಮನವಿಯಲ್ಲಿ ಕೋರಿದ್ದರು.
ಕಾರ್ಯವಿಧಾನದ ಆಧಾರದ ಮೇಲೆ ಮ್ಯಾಜಿಸ್ಟ್ರೇಟ್ ನೀಡಿದ ಸಮನ್ಸ್ ರದ್ದುಗೊಳಿಸಿ ವಿಶೇಷ ಸೆಷನ್ಸ್ ನ್ಯಾಯಾಧೀಶ ಆರ್‌ಎನ್ ರೋಕಡೆ ಅವರು ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ಮಮತಾ, ದೂರನ್ನು ಹೊಸದಾಗಿ ಪರಿಗಣಿಸುವಂತೆ ಸೂಚಿಸಿ ಪ್ರಕರಣವನ್ನು ಮ್ಯಾಜಿಸ್ಟ್ರೇಟ್ ಅವರಿಗೆ ಹಿಂತಿರುಗಿಸುವಂತೆ ಕೋರಿದ್ದರು.