MLA Mamta Banerjee, CM West Bengal 
ಸುದ್ದಿಗಳು

ರಾಷ್ಟ್ರಗೀತೆಗೆ ಅಗೌರವ: ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ನಾಯಕ ಸಲ್ಲಿಸಿದ್ದ ದೂರು ವಜಾಗೊಳಿಸಿದ ಮುಂಬೈ ನ್ಯಾಯಾಲಯ

ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಮತಾ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ದೂರಿನ ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಸೋಮವಾರ ಆದೇಶ ಹೊರಡಿಸಿದರು.

Bar & Bench

ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಲ್ಲಿಸಲಾಗಿದ್ದ ದೂರನ್ನು ಮುಂಬೈ ನ್ಯಾಯಾಲಯವೊಂದು ಸೋಮವಾರ ವಜಾಗೊಳಿಸಿದೆ.

ಮುಂಬೈನ ಕಫ್ ಪರೇಡ್‌ನಲ್ಲಿರುವ ಯಶವಂತರಾವ್ ಚವಾಣ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಕುಳಿತೇ ರಾಷ್ಟ್ರಗೀತೆ ಹಾಡಲು ಆರಂಭಿಸಿದ ಬ್ಯಾನರ್ಜಿ ಅವರು ನಂತರ ಎದ್ದು ನಿಂತು ಹಾಡಿದರು. ಬಳಿಕ ಧಿಡೀರನೆ ಗೀತೆಯನ್ನು ಅರ್ಧಕ್ಕೇ ನಿಲ್ಲಿಸಿ ಅಲ್ಲಿಂದ ತೆರಳಿದರು ಎಂದು ಆರೋಪಿಸಿ ಬಿಜೆಪಿಯ ಮುಂಬೈ ಕಾರ್ಯದರ್ಶಿ ವಿವೇಕಾನಂದ ಗುಪ್ತಾ ಅವರು ದೂರು ದಾಖಲಿಸಿದ್ದರು.

ಪ್ರಕರಣವನ್ನು ಆಲಿಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಸ್‌ ಬಿ ಕಾಳೆ ಅವರು "ದೂರನ್ನು ವಜಾಗೊಳಿಸಲಾಗಿದೆ" ಎಂದು ಆದೇಶಿಸಿದರು. ವಿವರವಾದ ಆದೇಶದ ಪ್ರತಿ ಇನ್ನಷ್ಟೇ ದೊರೆಯಬೇಕಿದೆ.

ದೂರುದಾರರು ಮಮತಾ ಅವರ ನಡೆ ರಾಷ್ಟ್ರಗೀತೆಗೆ ಅವಮಾನ ಮಾಡುವಂತಹುದಾಗಿದ್ದು, ರಾಷ್ಟ್ರಗೌರವ ಅಪಮಾನ ತಡೆ ಅಧಿನಿಯಮ, 1971ರ ಅಡಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಅರ್ಜಿದಾರರು ದೂರಿದ್ದರು.

ಮಜಗಾಂವ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ತಮಗೆ ಸಮನ್ಸ್‌ ನೀಡಿದ್ದನ್ನು ಮಮತಾ ಸೆಷನ್ಸ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಸಮನ್ಸ್‌ ರದ್ದುಗೊಳಿಸಿದ್ದ ಸೆಷನ್ಸ್‌ ನ್ಯಾಯಾಲಯ ಹೊಸದಾಗಿ ಪ್ರಕರಣದ ವಿಚಾರಣೆ ನಡೆಸುವಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ಮಮತಾ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್‌ ಮಮತಾ ಅರ್ಜಿಯನ್ನು ವಜಾಗೊಳಿಸಿತ್ತು.

ಬಳಿಕ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ 1971ರ ರಾಷ್ಟ್ರಗೌರವ ಅಪಮಾನ ತಡೆ ಅಧಿನಿಯಮ ಸೆಕ್ಷನ್‌ 3ರ ಅಡಿ ಘಟನೆಯ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು. ವರದಿ ಬರುವವರೆಗೆ ಮಮತಾ ವಿರುದ್ಧ ಪ್ರಕ್ರಿಯೆ ಆರಂಭಿಸದಂತೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆ ಸಂದರ್ಭದಲ್ಲಿ ಆದೇಶಿಸಿತ್ತು. ಇದೀಗ ನ್ಯಾಯಾಲಯ ದೂರನ್ನು ವಜಾಗೊಳಿಸಿದೆ.