ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾ. ಸಿದ್ಧಾರ್ಥ ಮೃದುಲ್
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾ. ಸಿದ್ಧಾರ್ಥ ಮೃದುಲ್ 
ಸುದ್ದಿಗಳು

ಮಣಿಪುರದಲ್ಲಿ ನ್ಯಾಯದಾನ ಪ್ರಕ್ರಿಯೆಗೆ ಭೌಗೋಳಿಕ ಅಂತರ, ಸಂಪರ್ಕರಾಹಿತ್ಯತೆ ಅಡ್ಡಿಯಾಗಿಲ್ಲ: ಸಿಜೆ ಸಿದ್ಧಾರ್ಥ ಮೃದುಲ್

Bar & Bench

ಮಣಿಪುರ ಸಣ್ಣ ರಾಜ್ಯವಾಗಿದ್ದರೂ, ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಇಡೀ ದೇಶಕ್ಕೆ ಮಾದರಿಯಾಗುವ ಸಾಮರ್ಥ್ಯ ಅದಕ್ಕೆ ಇದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿದ್ಧಾರ್ಥ ಮೃದುಲ್ ಹೇಳಿದ್ದಾರೆ.

ಹೈಕೋರ್ಟ್‌ನ ಹನ್ನೊಂದನೇ ಸಂಸ್ಥಾಪನಾ ವರ್ಷಾಚರಣೆ ಅಂಗವಾಗಿ ಮಾರ್ಚ್ 23ರಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ವಿವಿಧ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ನ್ಯಾಯಾಲಯಗಳಿಗೆ ಭೌತಿಕ ಪ್ರವೇಶವಿಲ್ಲವೆಂದು ಮಣಿಪುರದಲ್ಲಿ ನ್ಯಾಯ ವಿತರಣೆಗೆ ತೊಂದರೆಯಾಗಿಲ್ಲ. ಜಿಲ್ಲಾ ನ್ಯಾಯಾಲಯಗಳಲ್ಲಿ ಇ ಫೈಲಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವ್ಯವಸ್ಥೆಯು ಕಕ್ಷಿದಾರರು ಮತ್ತು ವಕೀಲರಿಗೆ ವಿದ್ಯುನ್ಮಾನವಾಗಿ ದಾಖಲೆಗಳನ್ನು ಸಲ್ಲಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ತಿಳಿಸಿದರು.

ಭೌಗೋಳಿಕ ಅಂತರ, ಸಂಪರ್ಕರಾಹಿತ್ಯತೆ ಮಣಿಪುರದಲ್ಲಿ ನ್ಯಾಯದಾನಕ್ಕೆ ಅಡ್ಡಿಯಾಗಿಲ್ಲ. ಜಿಲ್ಲಾ ನ್ಯಾಯಾಂಗಕ್ಕೆ ಉತ್ತಮ ಮೂಲಸೌಕರ್ಯ ಒದಗಿಸುವುದಷ್ಟೇ ಅಲ್ಲದೆ ಇ-ಫೈಲಿಂಗ್, ಹೈಬ್ರಿಡ್ ವಿಚಾರಣೆ, ಕಾಗದರಹಿತ ನ್ಯಾಯಾಲಯಗಳನ್ನು ಒದಗಿಸುವ ಆಧುನಿಕತೆಯನ್ನು ತರುವುದು ಮಣಿಪುರ ಹೈಕೋರ್ಟ್‌ನ ಮುಂದಿನ ಗುರಿ ಎಂದರು.

ಮಣಿಪುರದಲ್ಲಿ ಚಾಲನೆ ನೀಡಲಾದ ವಿವಿಧ ನ್ಯಾಯಾಂಗ ಯೋಜನೆಗಳ ವಿವರ ಇಂತಿದೆ:

  • ಟ್ರಾಫಿಕ್‌ ಅಪರಾಧಗಳ ವಿಚಾರಣೆಗಾಗಿ ವರ್ಚುವಲ್‌ ನ್ಯಾಯಾಲಯ

    ಸಂಚಾರ ನಿಯಮಗಳ ಉಲ್ಲಂಘನೆಯ ವಿಚಾರಣೆಗಾಗಿ ಸ್ಥಾಪಿಸುವ ಇ ನ್ಯಾಯಾಲಯದ ಯೋಜನೆ ಇದಾಗಿದೆ. ಇದರಿಂದ ಆನ್‌ಲೈನ್‌ ವ್ಯವಸ್ಥೆಯ ಮೂಲಕ, ದೂರು ಸಲ್ಲಿಸಲು, ವರ್ಚುವಲ್ ವಿಚಾರಣೆಗಳಿಗೆ ಹಾಜರಾಗಲು ಹಾಗೂ ನ್ಯಾಯಾಲಯದಲ್ಲಿ ಭೌತಿಕವಾಗಿ ಹಾಜರಾಗುವ ಅಗತ್ಯವಿಲ್ಲದೆ ತೀರ್ಪು ಪಡೆಯಲು ಸಹಕಾರಿಯಾಗಲಿದೆ.

  • ಜಿಲ್ಲಾ ನ್ಯಾಯಾಲಯಗಳಲ್ಲಿ 3ನೇ ಆವೃತ್ತಿಯ ಇ-ಫೈಲಿಂಗ್ ವ್ಯವಸ್ಥೆ

    ಈ ಯೋಜನೆಯು ಪ್ರಕರಣ ದಾಖಲಿಸುವ ವ್ಯವಸ್ಥೆಯ ದಕ್ಷತೆ ಮತ್ತು ನ್ಯಾಯಿಕ ಪ್ರಕ್ರಿಯೆಯನ್ನು ಸುಗಮಗೊಳಿಸುವ ಗುರಿ ಹೊಂದಿದೆ.

  • ಮಣಿಪುರ ಹೈಕೋರ್ಟ್ ಇಂಗ್ಲಿಷ್, ಮೈತೇಯಿ ಮಾಯೆಕ್ ಮತ್ತು ರೋಮನ್ ಆಲ್ಫಾಬೆಟ್ (ಮಣಿಪುರಿ) ಭಾಷೆಗಳಲ್ಲಿ ಡಿಜಿಟಲ್ ಹೈಕೋರ್ಟ್ ವರದಿಗಳನ್ನು ಪ್ರಕಟಿಸಲಿದೆ. ವಕೀಲರು ಮತ್ತು ಕಾನೂನು ವಿದ್ಯಾರ್ಥಿಗಳಿಗೆ ಉಚಿತವಾಗಿ ಈ ವರದಿಗಳು ದೊರೆಯುವಂತೆ ಮಾಡಿ ಕಾನೂನು ಸಂಪನ್ಮೂಲ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ.

  • ಡಿಜಿಟಲೀಕರಣ ಮತ್ತು ಇ-ಸೇವಾ ಕೇಂದ್ರ ಯೋಜನೆ

    ಈ ಯೋಜನೆಯು ಡಿಜಿಟೀಕರಣದ ಪ್ರಗತಿಯನ್ನು ಗಮನಿಸಲಿದ್ದು, ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಲಿದೆ. ಅಲ್ಲದೆ, ಪ್ರಕರಣದ ಅಧ್ಯಯನ ದೃಷ್ಟಿಯಿಂದ ಯೋಜನೆಯನ್ನು ದಾಖಲಿಸುವ ಸಲುವಾಗಿ ಕಾರ್ಯ ನಿರ್ವಹಣಾ ವ್ಯವಸ್ಥೆಗೆ ಸಂಬಂಧಿಸಿದ ಸಾಫ್ಟ್‌ವೇರ್‌ ರೂಪಿಸಲಿದೆ.

  • ಎಐ ಆಧಾರಿತ ಅನುವಾದ ಯೋಜನೆಗಾಗಿ ಕೆಲಸ ನಿರ್ವಹಣಾ ವ್ಯವಸ್ಥೆ

    ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳು ಮತ್ತು ಆದೇಶಗಳನ್ನು ಭಾಷಾಂತರಿಸುವ ಕೆಲಸವನ್ನು ನಿರ್ವಹಿಸುವ ಅನುವಾದಕರಿಗಾಗಿ ಕೆಲಸ ಹಂಚಿಕೆ ಮಾಡಲು ಹೈಕೋರ್ಟ್ ಜಾಲತಾಣ ಆಧಾರಿತ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದೆ. ಹೊಸದಾಗಿ ಪ್ರಾರಂಭಿಸಲಾದ ವ್ಯವಸ್ಥೆಯು ಅನುವಾದ ಯೋಜನೆಯನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ.

ಮುಖ್ಯ ನ್ಯಾಯಮೂರ್ತಿ ಮೃದುಲ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಣಿಪುರ ರಾಜ್ಯಪಾಲರಾದ ಅನುಸೂಯಾ ಉಕೆ ಮುಖ್ಯ ಅತಿಥಿಯಾಗಿದ್ದರು ಮತ್ತು ನ್ಯಾಯಮೂರ್ತಿಗಳಾದ ಎ ಬಿಮೋಲ್ ಸಿಂಗ್, ಎ ಗುಣೇಶ್ವರ್ ಶರ್ಮಾ ಮತ್ತು ಗೋಲ್ಮಿ ಗೈಫುಲ್ಶಿಲು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಡ್ವೊಕೇಟ್ ಜನರಲ್ ಲೆನಿನ್ ಹಿಜಾಮ್, ಮಣಿಪುರ ವಕೀಲರ ಪರಿಷತ್‌ ಅಧ್ಯಕ್ಷರಾದ ಎಸ್ ಬ್ರಜಬಿಹಾರಿ ಸಿಂಗ್, ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾದ ವೈ ನಿರ್ಮೋಲ್ಚಂದ್ ಸಿಂಗ್ ಮತ್ತು ಅಖಿಲ ಮಣಿಪುರ ವಕೀಲರ ಸಂಘದ ಅಧ್ಯಕ್ಷರಾದ ತೋಮ್ಚಾ ಮೈತೇಯಿ ಪಾಲ್ಗೊಂಡಿದ್ದರು.