Allahabad HC (Lucknow Bench), Religious conversion 
ಸುದ್ದಿಗಳು

ಬೈಬಲ್ ಹಂಚುವಿಕೆ, ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ಮತಾಂತರಕ್ಕೆ ಆಮಿಷವಾಗದು: ಅಲಾಹಾಬಾದ್ ಹೈಕೋರ್ಟ್

Bar & Bench

ಬೈಬಲ್ ನ ಪ್ರತಿಗಳನ್ನು ವಿತರಿಸುವುದು, ಮಕ್ಕಳಿಗೆ ಶಿಕ್ಷಣ ಪಡೆಯಲು ಪ್ರೋತ್ಸಾಹಿಸುವುದು ಹಾಗೂ ಜಗಳಕ್ಕೆ ಇಳಿಯದಂತೆ ಗ್ರಾಮಸ್ಥರಿಗೆ ಸೂಚನೆ ನೀಡುವುದು ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆ ಕಾಯಿದೆ 2021ರ ಅಡಿ ಧಾರ್ಮಿಕ ಮತಾಂತರಕ್ಕೆ ಒಡ್ಡುವ ಆಮಿಷ ಆಗುವುದಿಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಜೋಸ್ ಪಪಾಚೆನ್ ಮತ್ತಿತರರು ಹಾಗೂ ಸರ್ಕಾರ ನಡುವಣ ಪ್ರಕರಣ].

ಹೀಗಾಗಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳಿಗೆ (ಎಸ್‌ಸಿ/ಎಸ್‌ಟಿ) ಆಮಿಷ ಒಡ್ಡುವ ಮೂಲಕ ಮತಾಂತರ ನಡೆಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಕಾಯಿದೆಯಡಿ ಬಂಧಿತರಾಗಿದ್ದ ಇಬ್ಬರು ವ್ಯಕ್ತಿಗಳಿಗೆ ನ್ಯಾ. ಶಮೀಮ್‌ ಅಹ್ಮದ್‌ ಅವರಿದ್ದ ಏಕಸದಸ್ಯ ಪೀಠ ಜಾಮೀನು ನೀಡಿತು.

“ಮಕ್ಕಳಿಗೆ ಶಿಕ್ಷಣ ಪಡೆಯಲು ಉತ್ತೇಜನ ನೀಡುವುದು, ಗ್ರಾಮಸ್ಥರ ಸಭೆ ಆಯೋಜಿಸುವುದು, ʼಭಂಡಾರʼದಲ್ಲಿ (ದಾಸೋಹ) ತೊಡಗುವುದು, ಜಗಳಕ್ಕೆ ಇಳಿಯದಂತೆ ಗ್ರಾಮಸ್ಥರಿಗೆ ಸೂಚನೆ ನೀಡುವುದು ಹಾಗೂ ಮದ್ಯಸೇವನೆ ಮಾಡದಂತೆ ಹೇಳುವುದು ಕೂಡ ಕಾಯಿದೆಯಡಿ ಅಪರಾಧವಾಗುವುದಿಲ್ಲ” ಎಂದು ನ್ಯಾಯಾಲಯ ನುಡಿದಿದೆ.

ಕಾಯಿದೆಯ ಪ್ರಕಾರ ಘಟನೆಯ ಸಂತ್ರಸ್ತರು ಅಥವಾ ಅವರ ಕುಟುಂಬದ ಸದಸ್ಯರು ಮಾತ್ರ ಎಫ್‌ಐಆರ್‌ ದಾಖಲಿಸಬಹುದಾಗಿದ್ದರೂ ಪ್ರಕರಣದಲ್ಲಿ ಆಡಳಿತ ಪಕ್ಷದ ಜಿಲ್ಲಾ ಸಚಿವರು ದೂರು ದಾಖಲಿಸಿದ್ದಾರೆ ಎಂದು ನ್ಯಾಯಾಲಯ ಬೆರಳು ಮಾಡಿತು.  

"ಜಿಲ್ಲಾ ಮಂತ್ರಿಯು ಪ್ರಕರಣದಲ್ಲಿ ನೊಂದ ವ್ಯಕ್ತಿಯಲ್ಲ ಅಥವಾ ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯಿದೆ, 2021ರ ಸೆಕ್ಷನ್ 4ರ ಅಡಿ ತಿಳಿಸಿರುವಂತೆ ಅವರ ತಂದೆ, ತಾಯಿ, ಸಹೋದರ, ಸಹೋದರಿ ಇಲ್ಲವೇ ಅವರಿಗೆ ರಕ್ತ ಸಂಬಂಧವಿರುವವರು, ಮದುವೆಯಾಗಿರುವವರು, ದತ್ತು ಪಡೆದವರು ಈ ಯಾರೂ ಪ್ರಕರಣದಲ್ಲಿ ನೊಂದ ವ್ಯಕ್ತಿಯಾಗಿಲ್ಲ ಎನ್ನುವುದನನ್ನು ಪರಿಗಣಿಸಿದ ನ್ಯಾಯಾಲಯ ಹೀಗಾಗಿ ದೂರುದಾರರು ಪ್ರಸ್ತುತ ಎಫ್‌ಐಆರ್ ದಾಖಲಿಸಲು ಅರ್ಹರಲ್ಲ, ”ಎಂದು ಅಭಿಪ್ರಾಯಪಟ್ಟಿತು.

ಹೀಗಾಗಿ ತಮಗೆ ಜಾಮೀನು ನಿರಾಕರಿಸಿದ್ದನ್ನು ಪ್ರಶ್ನಿಸಿ ಜೋಸ್ ಪಾಪಚೆನ್ ಮತ್ತು ಶೀಜಾ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Jose_Papachen___Anr_v_State.pdf
Preview