ಯಾವುದೇ ವ್ಯಕ್ತಿಗೆ ʼಜಾತಿ ರಹಿತ - ಧರ್ಮ ರಹಿತ ಪ್ರಜೆʼ ಎಂಬ ಪ್ರಮಾಣಪತ್ರ ನೀಡುವ ಶಾಸನಬದ್ಧ ಅಧಿಕಾರ ರಾಜ್ಯದ ಕಂದಾಯ ಅಧಿಕಾರಿಗಳಿಗೆ ಇಲ್ಲ ಮತ್ತು ಹೈಕೋರ್ಟ್ ಕೂಡ ಕಂದಾಯ ಅಧಿಕಾರಿಗಳಿಗೆ ಹಾಗೆ ನಿರ್ದೇಶನ ನೀಡಲು ವಿಧಿ 226ರ ಅಡಿಯಲ್ಲಿ ತನ್ನ ಅಸಾಧಾರಣ ಅಧಿಕಾರ ವ್ಯಾಪ್ತಿ ಚಲಾಯಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ತಮಗೆ ʼಜಾತಿ ರಹಿತ- ಧರ್ಮ ರಹಿತ ಪ್ರಜೆʼ ಪ್ರಮಾಣಪತ್ರ ನೀಡುವಂತೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡಿನ ತಿರುಪತ್ತೂರು ಜಿಲ್ಲೆಯ ನಿವಾಸಿ ಎಚ್ ಸಂತೋಷ್ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಎಂ ಸುಬ್ರಮಣ್ಯಂ ಅವರು ಜನವರಿ 22ರಂದು ವಜಾಗೊಳಿಸಿದರು.
ಆದರೂ, ಅಂತಹ ಪ್ರಮಾಣಪತ್ರ ಪಡೆಯಲು ಯತ್ನಿಸಿದ್ದಕ್ಕಾಗಿ ನ್ಯಾಯಾಲಯ ಅರ್ಜಿದಾರರನ್ನು ಶ್ಲಾಘಿಸಿತು. "ನಮ್ಮ ದೇಶದ ಅಭಿವೃದ್ಧಿಗೆ ಉತ್ತಮ ನಾಗರಿಕನಾಗಿರುವುದು ದೊಡ್ಡ ಕೊಡುಗೆಯಾಗಿದೆ. ಇದು ಸಂವಿಧಾನದ 51 ಎ ವಿಧಿಯಡಿ ಸೂಚಿಸಲಾದ ಮೂಲಭೂತ ಕರ್ತವ್ಯವಾಗಿದೆ. ʼಜಾತಿ ರಹಿತ- ಧರ್ಮ ರಹಿತ ಪ್ರಜೆʼ ಎಂದು ಪ್ರಮಾಣಪತ್ರ ಪಡೆಯುವ ಅರ್ಜಿದಾರರ ಬಯಕೆ ಪ್ರಶಂಸನೀಯವಾಗಿದೆಯಾದರೂ ಆ ಪ್ರಮಾಣಪತ್ರ ನೀಡಲು ಸರ್ಕಾರ ಯಾವುದೇ ಅಧಿಕಾರ ನೀಡದಿರುವಾಗ ತಹಶೀಲ್ದಾರ್ ಹಾಗೆ ಪ್ರಮಾಣಪತ್ರ ನೀಡಬಹುದೇ ಎಂಬ ಪ್ರಶ್ನೆ ಉದ್ಭವಿಸುತ್ತದೆ" ಎಂದು ಹೈಕೋರ್ಟ್ ಹೇಳಿದೆ.
ಅಂತಹ ಪ್ರಮಾಣಪತ್ರ ನೀಡುವ ಯಾವುದೇ ಅಧಿಕಾರ ತಹಶೀಲ್ದಾರ್ ಅಥವಾ ಇತರ ಕಂದಾಯ ಅಧಿಕಾರಿಗಳಿಗೆ ಇಲ್ಲ ಎಂಬ ತಮಿಳುನಾಡು ಸರ್ಕಾರದ ಮಾಹಿತಿಯನ್ನು ನ್ಯಾಯಾಲಯ ದಾಖಲಿಸಿಕೊಂಡಿತು.
ಇದಲ್ಲದೆ, ತಮಿಳುನಾಡು ಸರ್ಕಾರ 1973 ಮತ್ತು 2000ರಲ್ಲಿ ಹೊರಡಿಸಿದ ಎರಡು ಸರ್ಕಾರಿ ಆದೇಶಗಳ ಮೂಲಕ ಜನತೆ ತಮ್ಮ ಶಾಲೆ ಮತ್ತಿತರ ಶೈಕ್ಷಣಿಕ ಪ್ರಮಾಣಪತ್ರಗಳಲ್ಲಿ ಜಾತಿ, ಧರ್ಮದ ಕಾಲಂಗಳನ್ನು "ಖಾಲಿ" ಬಿಡಲು ಈಗಾಗಲೇ ಅನುಮತಿ ನೀಡಿದೆ ಎಂಬ ಅಂಶವನ್ನು ಗಮನಿಸಿದ ನ್ಯಾಯಾಲಯ ಹೀಗೆ ಸಾಮಾನ್ಯ ನಿರ್ದೇಶನ ನೀಡುವುದರಿಂದ ಕೆಲ ಹಕ್ಕುಗಳನ್ನು ಜಾರಿಗೊಳಿಸುವಾಗ ತೊಡಕುಂಟಾಗಬಹುದು ಎಂದಿತು.
ʼಜಾತಿ ರಹಿತ - ಧರ್ಮ ರಹಿತ ಪ್ರಜೆʼ ಪ್ರಮಾಣಪತ್ರ ವಿತರಣೆ ಕೆಲವೊಂದು ಪರಿಣಾಮಗಳನ್ನು ಬೀರಲಿದ್ದು ಉತ್ತರಾಧಿಕಾರ ಇಲ್ಲವೇ ಉತ್ತರಾಧಿಕಾರಕ್ಕಾಗಿ ವೈಯಕ್ತಿಕ ಕಾನೂನುಗಳನ್ನು ಅನ್ವಯ ಮಾಡಬೇಕಾಗುತ್ತದೆ. ಹೀಗಾಗಿ ವ್ಯಕ್ತಿಯ ನಿರ್ಧಾರ ಮತ್ತು ಅದರ ಪರಿಣಾಮಗಳನ್ನು ಪರಿಶೀಲಿಸಬೇಕು. ಮೀಸಲಾತಿ ನಿಯಮಗಳು ಪ್ರಜೆಗಳಿಗೆ ಅನ್ವಯವಾಗುವುದರಿಂದ ಅದರ ಪರಿಣಾಮಗಳನ್ನು ಅರ್ಥ ಮಾಡಿಕೊಳ್ಳದೆ ನಿರ್ಧಾರ ತೆಗೆದುಕೊಂಡರೆ ಅದು ಭವಿಷ್ಯದ ಪೀಳಿಗೆ ಮೇಲೆ ಪರಿಣಾಮ ಬೀರುತ್ತದೆ" ಎಂದು ಹೈಕೋರ್ಟ್ ಹೇಳಿದೆ.
ಶಾಲಾ ದಾಖಲೆಗಳಲ್ಲಿ ಜಾತಿ ಮತ್ತು ಧರ್ಮಕ್ಕೆ ಒದಗಿಸಲಾದ ಕಾಲಂ ಅನ್ನು ಖಾಲಿ ಬಿಡಲು ಅರ್ಜಿದಾರರಿಗೆ ಸ್ವಾತಂತ್ರ್ಯವಿದ್ದು ಅದನ್ನು ಅಧಿಕಾರಿಗಳು ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಇದೇ ವೇಳೆ ನ್ಯಾಯಾಲಯ ಹೇಳಿದೆ.
ಆದರೆ, 'ಜಾತಿ ರಹಿತ - ಧರ್ಮ ರಹಿತ' ಎನ್ನುವ ಅಂತಹ ಪ್ರಮಾಣಪತ್ರವನ್ನು ನೀಡಲು ಕಂದಾಯ ಪ್ರಾಧಿಕಾರಕ್ಕೆ ಯಾವುದೇ ಅಧಿಕಾರ ನೀಡದ ಕಾರಣ, ತಾನು ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿ ಅರ್ಜಿ ವಜಾಗೊಳಿಸಿತು.
[ಆದೇಶದ ಪ್ರತಿಯನ್ನು ಇಲ್ಲಿ ಓದಿ]