High Court of Jammu & Kashmir and Ladakh, Jammu wing
High Court of Jammu & Kashmir and Ladakh, Jammu wing  
ಸುದ್ದಿಗಳು

ಸರ್ಕಾರದ ಅನುಮೋದನೆಗೂ ಮುನ್ನ ಜಿಲ್ಲಾಧಿಕಾರಿ ಬಂಧನ ಆದೇಶ ಹಿಂಪಡೆಯಬಹುದು: ಕಾಶ್ಮೀರ ಹೈಕೋರ್ಟ್‌

Bar & Bench

ಸರ್ಕಾರ ಅನುಮೋದನೆ ನೀಡದಿದ್ದರೂ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿಯಲ್ಲಿ ಬಂಧನ ಅಧಿಕಾರಿ ವ್ಯಕ್ತಿಯ ಬಂಧನ ಆದೇಶ ಹಿಂಪಡೆಯಬಹುದು ಎಂದು ಜಮ್ಮು, ಕಾಶ್ಮೀರ ಹಾಗೂ ಲಡಾಖ್‌ ಹೈಕೋರ್ಟ್‌ ಈಚೆಗೆ ಸ್ಪಷ್ಟಪಡಿಸಿದೆ. [ಬಶೀರ್ ಅಹ್ಮದ್ ನಾಯಕ್ ಮತ್ತು ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ]

 ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿಯಲ್ಲಿ ಒಬ್ಬ ವ್ಯಕ್ತಿಯ ವಿರುದ್ಧ ಮುಂಜಾಗ್ರತಾ ಬಂಧನ ಆದೇಶವನ್ನು ಜಾರಿಗೊಳಿಸಿದ ನಂತರ ಜಿಲ್ಲಾಧಿಕಾರಿಗಳು ಅದನ್ನು ಅನುಮೋದನೆಗಾಗಿ ತಕ್ಷಣವೇ ಸರ್ಕಾರಕ್ಕೆ ಕಳುಹಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಸಂಜಯ್ ಧರ್ ಹೇಳಿದರು.

ಸರ್ಕಾರ ಅಂಗೀಕರಿಸದೆ ಇದ್ದರೆ ಅಂತಹ ಆದೇಶ ಹನ್ನೆರಡು ದಿನ ಮೀರಿ ಜಾರಿಯಲ್ಲಿರುವಂತಿಲ್ಲ ಎಂದು ಕಾಯಿದೆ ಹೇಳುತ್ತದೆ. ಆದ್ದರಿಂದ, ಜಿಲ್ಲಾಧಿಕಾರಿ ಹೊರಡಿಸಿದ ಬಂಧನ ಆದೇಶವನ್ನು ಆ ಆದೇಶ ಪ್ರಕಟವಾದ ದಿನದಿಂದ 12 ದಿನಗಳ ನಂತರ ಸರ್ಕಾರ ಅನುಮೋದಿಸುವಂತಿಲ್ಲ ಎಂಬುದಾಗಿ ಪೀಠ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಸಾಮಾನ್ಯ ಷರತ್ತುಗಳ ಕಾಯಿದೆಯನ್ನು ಅವಲಂಬಿಸಿದ ನ್ಯಾಯಾಲಯ ಬಂಧನ ಅಧಿಕಾರಿ ಸರ್ಕಾರದ ಅನುಮೋದನೆಗೂ ಮುನ್ನ ತನ್ನ ಆದೇಶ ಹಿಂಪಡೆಯಬಹುದು ಎಂದರು.

ಆದೇಶ ಹೊರಡಿಸಲು ಅಧಿಕಾರ ವ್ಯಾಪ್ತಿ ಹೊಂದಿರುವ ಅಧಿಕಾರಿ ಅಂತಹ ಆದೇಶವನ್ನು ಸೇರಿಸಲು, ತಿದ್ದುಪಡಿ ಮಾಡಲು, ಬದಲಾಯಿಸಲು ಅಥವಾ ರದ್ದುಗೊಳಿಸಲು ಅಧಿಕಾರ ಹೊಂದಿರುತ್ತಾರೆ ಎಂದು ನ್ಯಾಯಾಲಯ ವಿವರಿಸಿದೆ.

“ಹೀಗಾಗಿ ಬಂಧನ ಆದೇಶ ಹೊರಡಿಸುವ ಅಧಿಕಾರ ಹೊಂದಿರುವ ಜಿಲ್ಲಾಧಿಕಾರಿ ಆ ಅವಧಿಯಲ್ಲಿ ಸರ್ಕಾರ ಅನುಮೋದನೆ ನೀಡಿದಿದ್ದರೂ ಅದನ್ನು ಹಿಂಪಡೆಯುವ ಅಧಿಕಾರವನ್ನು ಕೂಡ ಪಡೆದಿರುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.

ದೇಶವಿರೋಧಿ ಚಟುವಟಿಕೆಗಳ ಆರೋಪ ಹೊತ್ತಿರುವ ವ್ಯಕ್ತಿಯ ವಿರುದ್ಧ ರಾಂಬನ್‌ನ ಜಿಲ್ಲಾಧಿಕಾರಿ ನೀಡಿದ ಬಂಧನದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಂಶಗಳನ್ನು ವಿವರಿಸಿದೆ.

ಅರ್ಜಿದಾರರಾದ ಬಶೀರ್ ಅಹ್ಮದ್ ನಾಯ್ಕ್ ಬಂಧನ ಅಧಿಕಾರಿ ಮುಂದೆ ಪ್ರಾತಿನಿಧ್ಯ ನೀಡುವ ಹಕ್ಕಿನ ಬಗ್ಗೆ ತನಗೆ ತಿಳಿಸಿಲ್ಲ ಎಂಬ ಕಾರಣಕ್ಕಾಗಿ ಹೈಕೋರ್ಟ್‌ನಲ್ಲಿ ಬಂಧನ ಆದೇಶ  ಪ್ರಶ್ನಿಸಿದ್ದರು.

"ಹೀಗೆ ತಿಳಿಸದೆ ಇರುವುದು ಬಂಧನದ ಆದೇಶವನ್ನು ಅಮಾನ್ಯಗೊಳಿಸುತ್ತದೆ" ಎಂದ ಏಕ- ಸದಸ್ಯ ಪೀಠ  ಬಂಧನ ಆದೇಶ ರದ್ದುಗೊಳಿಸುವುದು ಸೂಕ್ತ ಎಂದು ಪರಿಗಣಿಸಿತು.

ಬೇರೆ ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಅಗತ್ಯವಿಲ್ಲದಿದ್ದಲ್ಲಿ ಅರ್ಜಿದಾರರನ್ನು ಮುಂಜಾಗ್ರತಾ ಸೆರೆವಾಸದಿಂದ ಬಿಡುಗಡೆ ಮಾಡುವಂತೆ  ಅದು ಸೂಚಿಸಿತು.