ಬಾಂಬೆ ಹೈಕೋರ್ಟ್ 
ಸುದ್ದಿಗಳು

ವಿಚ್ಛೇದಿತ ಮುಸ್ಲಿಂ ಮಹಿಳೆ ಮರುಮದುವೆಯಾದರೂ ಮಾಜಿ ಪತಿಯಿಂದ ಮಹರ್ ಪಡೆಯಲು ಅರ್ಹರು: ಬಾಂಬೆ ಹೈಕೋರ್ಟ್

ಮಹರ್ ಎಂಬುದು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ವಿಚ್ಛೇದನದ ಸಮಯದಲ್ಲಿ ಪತಿ ನೀಡಬೇಕಾದ ಒಟ್ಟು ಮೊತ್ತವಾಗಿದೆ.

Bar & Bench

ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯಿದೆ- 1986ರ ಸೆಕ್ಷನ್ 3ರ ಪ್ರಕಾರ ವಿಚ್ಛೇದಿತ ಮುಸ್ಲಿಂ ಮಹಿಳೆ ಮರುಮದುವೆಯಾದರೂ ಪತಿಯಿಂದ ಮಹರ್ (ವಿಚ್ಛೇದನದ ನಂತರ ಪತ್ನಿಗೆ ಪತಿ ಪಾವತಿಸಬೇಕಾದ ಒಟ್ಟಾರೆ ಜೀವನಾಂಶ ಮೊತ್ತ) ಪಡೆಯಲು ಅರ್ಹಳು ಎಂದು ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.

ಎಂಡಬ್ಲ್ಯೂಪಿಎಯ ಸೆಕ್ಷನ್ 3 (1) (ಎ)ಯಲ್ಲಿ 'ಮರುವಿವಾಹ' ಎಂಬ ಪದ ಇಲ್ಲವಾದ್ದರಿಂದ ಆ ಜೀವನಾಂಶದ ರಕ್ಷಣೆ (ಅಥವಾ ಮಹರ್) ಬೇಷರತ್ತಾಗಿದ್ದು ಮಹಿಳೆ (ಪ್ರತಿವಾದಿ) ಮರುಮದುವೆಯಾದ ನಂತರವೂ ಅನ್ವಯಿಸುತ್ತದೆ ಎಂದು ನ್ಯಾಯಮೂರ್ತಿ ರಾಜೇಶ್ ಪಾಟೀಲ್ ಅಭಿಪ್ರಾಯಪಟ್ಟರು.

"ಮಾಜಿ ಹೆಂಡತಿಯ ಮರುವಿವಾಹದ ಆಧಾರದ ಮೇಲೆ ಮಾಜಿ ಹೆಂಡತಿಗೆ ನೀಡಬೇಕಾದ ರಕ್ಷಣೆಯನ್ನು ಸೀಮಿತಗೊಳಿಸುವ ಉದ್ದೇಶ ಈ ಕಾಯಿದೆಯಲ್ಲಿ ಎಲ್ಲಿಯೂ ಇಲ್ಲ. ವಿಚ್ಛೇದಿತ ಮಹಿಳೆಯ ಮರುವಿವಾಹವನ್ನು ಲೆಕ್ಕಿಸದೆ ಸಮಂಜಸವಾದ ಮತ್ತು ನ್ಯಾಯಯುತ ಸೌಲಭ್ಯ ಮತ್ತು ಜೀವನಾಂಶಕ್ಕೆ ಅರ್ಹಳಾಗಿಸುವುದು ಕಾಯಿದೆಯ ಸಾರವಾಗಿದೆ. ಹೆಂಡತಿ ಜೀವನಾಂಶ ಪಡೆಯಲು ಗಂಡ ಮತ್ತು ಹೆಂಡತಿಯ ನಡುವಿನ ವಿಚ್ಛೇದನದ ಅಂಶವು ಸೆಕ್ಷನ್ 3 (1) (ಎ) ಅಡಿಯಲ್ಲಿ ಸಾಕಾಗುತ್ತದೆ. ಸೆಕ್ಷನ್ 3 ಪತಿಯ ಕರ್ತವ್ಯವನ್ನು ಸೂಕ್ತ ಮತ್ತು ನ್ಯಾಯಯುತವಾಗಿ ಪಾವತಿಸುವ ಕರ್ತವ್ಯದಿಂದ ಮುಕ್ತಗೊಳಿಸುವುದಿಲ್ಲ" ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.

'ಹೆಂಡತಿ ಮರುಮದುವೆಯಾದಾಗ ಪತಿ ತನ್ನ ಕರ್ತವ್ಯದಿಂದ ಮುಕ್ತನಾಗುತ್ತಾನೆ' ಎಂಬ ಷರತ್ತನ್ನು ಕಾಯಿದೆಯಲ್ಲಿ ಸೇರಿಸಿದರೆ, ಪತಿ ಉದ್ದೇಶಪೂರ್ವಕವಾಗಿ ತನ್ನ ವಿಚ್ಛೇದಿತ ಹೆಂಡತಿಯ ಮರು ಮದುವೆಗಾಗಿ ಕಾಯುತ್ತಾನೆ ಎಂದು ನ್ಯಾಯಾಲಯ ವಿವರಿಸಿದೆ.

ಸೆಕ್ಷನ್ 3 'ಮಹರ್' ಅಥವಾ ವರದಕ್ಷಿಣೆ ಎಂದರೇನು ಎಂದು ವ್ಯಾಖ್ಯಾನಿಸುತ್ತದೆ, ಇದು ವಿಚ್ಛೇದಿತ ಮುಸ್ಲಿಂ ಮಹಿಳೆಗೆ ಜೀವನಾಂಶವಾಗಿ ನೀಡಲಾಗುವ ಒಟ್ಟು ಮೊತ್ತವಾಗಿದೆ.

ಮಹಿಳೆ ಇದ್ದತ್‌ (ಮದುವೆ ಮುಗಿದ ನಂತರ 2-3 ತಿಂಗಳ ಅಲ್ಪಾವಧಿ) ಅವಧಿಯೊಳಗೆ ಪಡೆಯಲು ಅರ್ಹವಾದ ನ್ಯಾಯಯುತ ಮತ್ತು ಸಮಂಜಸವಾದ ಜೀವನಾಂಶವನ್ನು ಉಪ-ಕಲಂ (1) (ಎ) ಸೂಚಿಸುತ್ತದೆ.

ಮಹಾರಾಷ್ಟ್ರದ ಚಿಪ್ಲುನ್ ಮ್ಯಾಜಿಸ್ಟ್ರೇಟ್ ಹೊರಡಿಸಿದ ಜೀವನಾಂಶ ಆದೇಶವನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ ಪರಿಶೀಲನಾ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ತೀರ್ಪು ಬಂದಿದ್ದು ರತ್ನಗಿರಿಯ ಸೆಷನ್ಸ್ ನ್ಯಾಯಾಲಯ ಪ್ರಕರಣ ಎತ್ತಿಹಿಡಿದಿತ್ತು.

2005ರಲ್ಲಿ ವಿವಾಹವಾಗಿದ್ದ ದಂಪತಿಗೆ ಒಬ್ಬ ಮಗಳಿದ್ದಳು. 2008ರಲ್ಲಿ, ಅರ್ಜಿದಾರರು ಪತ್ನಿಗೆ ವಿಚ್ಛೇದನ ನೀಡಿದರು. ಪತ್ನಿ 2012ರಲ್ಲಿ ಸೆಕ್ಷನ್ 3 (1) (ಎ) ಅಡಿಯಲ್ಲಿ ಜೀವನಾಂಶಕ್ಕಾಗಿ ಅರ್ಜಿ ಸಲ್ಲಿಸಿದರು.

ಅರ್ಜಿದಾರರು ತಮ್ಮ ಮಾಜಿ ಪತ್ನಿಗೆ 2 ತಿಂಗಳಲ್ಲಿ ಒಟ್ಟು 4,32,000 ರೂ.ಗಳನ್ನು ಜೀವನಾಂಶವಾಗಿ ಪಾವತಿಸಬೇಕೆಂದು 2014 ರಲ್ಲಿ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸೂಚಿಸಿತು. ಅರ್ಜಿದಾರರು ಈ ಆದೇಶವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಮೇಲ್ಮನವಿಯನ್ನು 2017ರಲ್ಲಿ ವಜಾಗೊಳಿಸಿದ ಸೆಷನ್ಸ್ ನ್ಯಾಯಾಲಯ ಜೀವನಾಂಶ ಮೊತ್ತವನ್ನು 2 ತಿಂಗಳಲ್ಲಿ 9 ಲಕ್ಷ ರೂ.ಗೆ ಹೆಚ್ಚಿಸಿತು. ಪಾವತಿಸಲು ವಿಫಲವಾದರೆ, ಮೊತ್ತವನ್ನು ಸಂಪೂರ್ಣವಾಗಿ ಪಾವತಿಸುವವರೆಗೆ ವರ್ಷಕ್ಕೆ 8% ಬಡ್ಡಿ ನೀಡಬೇಕಿತ್ತು.

ಈ ಆದೇಶವನ್ನು ಅರ್ಜಿದಾರರು ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಅವರು ಪ್ರತಿವಾದಿಗೆ ಮಧ್ಯಂತರದಲ್ಲಿ ₹ 1,50,000 ಪಾವತಿಸಿದ್ದರು. ಮಹಿಳೆ 2018ರಲ್ಲಿ ಮರುಮದುವೆಯಾದರು.

ಪ್ರತಿವಾದಿ ಮರುಮದುವೆಯಾಗಿದ್ದಾರೆ ಎಂಬ ಆಧಾರದ ಮೇಲೆ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವಂತೆ ಅರ್ಜಿದಾರರು ಕೋರಿದ್ದರು..

ನ್ಯಾಯಮೂರ್ತಿ ಪಾಟೀಲ್ ಈ ವಾದವನ್ನು ಒಪ್ಪಲಿಲ್ಲ. ವಿಚ್ಛೇದಿತ ಹೆಂಡತಿ ನ್ಯಾಯಯುತ ಮತ್ತು ಸಮಂಜಸವಾದ ಜೀವನಾಂಶ ಪಡೆಯುವ ಅರ್ಹತೆಯನ್ನು ವಿಚ್ಛೇದನದ ದಿನಾಂಕದಂದು ಅಖೈರುಗೊಳಿಸಲಾಗಿದ್ದು ಮಾಜಿ ಹೆಂಡತಿಯ ಮರುವಿವಾಹ ಜೀವನಾಂಶ ನೀಡುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Khalil Abbas Fakir v. Tabbasum Khalil Fakir.pdf
Preview