Calcutta High Court 
ಸುದ್ದಿಗಳು

ಕ್ಯೂಆರ್ ಕೋಡ್ ಇರುವ ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ: ಕಲ್ಕತ್ತಾ ಹೈಕೋರ್ಟ್

Bar & Bench

ದೀಪಾವಳಿ ಹತ್ತಿರವಿರುವಂತೆಯೇ ಕ್ಯೂ ಆರ್‌ ಕೋಡ್ ಇರುವ ಹಸಿರು ಪಟಾಕಿಗಳನ್ನು ಮಾತ್ರವೇ ಮಾರಾಟ ಮಾಡುವಂತೆ ನೋಡಿಕೊಳ್ಳಬೇಕು ಎಂದು ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಲ್ಕತ್ತಾ ಹೈಕೋರ್ಟ್‌ ಸೂಚಿಸಿದೆ [ಸಾಬುಜ್‌ ಮಂಚ್‌ ಮತ್ತು ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].

ಅಲ್ಲದೆ ಹಬ್ಬಗಳ ಋತುವಿನಲ್ಲಿ ಪಟಾಕಿಗಳ ಮಾರಾಟ ಮತ್ತು ಬಳಕೆ ಮೇಲೆ ಇರುವ ನಿರ್ಬಂಧಗಳ ಕುರಿತು ಜನ ಜಾಗೃತಿ ಮೂಡಿಸಲು ಜಾಹೀರಾತು ಮತ್ತು ಪ್ರಕಟಣೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಅಪೂರ್ಬ ಸಿನ್ಹಾ ರೇ ಮತ್ತು ಜಾಯ್‌ಮಾಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿದೆ.  

"ದೀಪಗಳ ಹಬ್ಬವು ಕಳವಳಕ್ಕೆ ಕಾರಣವಾಗಬಾರದು ಎಂಬುದು ನಮ್ಮ ಭಾವನೆ ಮತ್ತು ನಂಬಿಕೆಯಾಗಿದೆ. ಮಾಲಿನ್ಯ ರಾಕ್ಷಸ ನಮ್ಮ ಗಾಳಿಯನ್ನು ವಿಷಪೂರಿತಗೊಳಿಸಿ ಜನರ ಆರೋಗ್ಯಕ್ಕೆ ಸರಿಪಡಿಸಲಾಗದ ಹಾನಿ ಉಂಟುಮಾಡುವಂತಾಗಬಾರದು" ಎಂದು ನ್ಯಾಯಾಲಯ ಹೇಳಿದೆ. ಅರ್ಜುನ್ ಗೋಪಾಲ್  ಮತ್ತು ಭಾರತ ಒಕ್ಕೂಟ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ನಿರ್ದೇಶನಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ಪ್ರತಿಪಾದಿಸಿ ರಾಜ್ಯದಲ್ಲಿ ಪಟಾಕಿ ಮಾರಾಟವನ್ನು ಸಂಪೂರ್ಣ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ  ನೀಡಿತು.