Senior Advocate P Wilson

 
ಸುದ್ದಿಗಳು

ರಾಜ್ಯವಾರು ಮೀಸಲಾತಿ ಜಾರಿಗೊಳಿಸಲು ಕೋರಿ ಎನ್ಎಲ್‌ಯುಗಳಿಗೆ ಪತ್ರ ಬರೆದ ಡಿಎಂಕೆ ಸಂಸದ ಪಿ ವಿಲ್ಸನ್

ಹಿಂದೆಂದಿಗಿಂತಲೂ ಈಗ ಕಾನೂನು ಶಾಲೆಗಳಲ್ಲಿ ಮೀಸಲಾತಿಯ ಅವಶ್ಯಕತೆಯಿದೆ ಎಂದು ವಕೀಲರೂ ಆಗಿರುವ ಪಿ ವಿಲ್ಸನ್ ತಮ್ಮ ಹಿಂದಿನ ಪತ್ರದಲ್ಲಿ ನೆನಪಿಸಿದ್ದರು.

Bar & Bench

ದೇಶದೆಲ್ಲೆಡೆ ಇರುವ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ (ಎನ್‌ಎಲ್‌ಯು) ಕುಲಪತಿಗಳಿಗೆ ಪತ್ರ ಬರೆದಿರುವ ಹಿರಿಯ ವಕೀಲ ಮತ್ತು ಡಿಎಂಕೆ ಸಂಸದ ಪಿ ವಿಲ್ಸನ್, “ವಿವಿಗಳು ತಾವು ಒದಗಿಸುವ ಕೋರ್ಸ್‌ಗಳಿಗೆ ನಿಖರವಾದ ರಾಜ್ಯವಾರು ಮೀಸಲಾತಿ ಜಾರಿಗೊಳಿಸಬೇಕು” ಎಂದು ಕೋರಿದ್ದಾರೆ.

ಈ ಪತ್ರ ಡಿಸೆಂಬರ್ 25, 2021 ರಂದು ಬರೆದಿದ್ದ ಪತ್ರದ ಜ್ಞಾಪನಾ ಪತ್ರವಾಗಿದ್ದು ಎಲ್ಲಾ ಎನ್‌ಎಲ್‌ಯುಗಳು ಮೀಸಲಾತಿಯ ಸಾಂವಿಧಾನಿಕ ಆದೇಶವನ್ನು ಅನುಸರಿಸಲು ಮನವಿ ಮಾಡುತ್ತದೆ. ಲಖನೌದ ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (RMLNLU) ಮತ್ತು ಕೊಚ್ಚಿಯ ನ್ಯಾಷನಲ್ ಯೂನಿವರ್ಸಿಟಿ ಫಾರ್ ಅಡ್ವಾನ್ಸ್ಡ್ ಲೀಗಲ್ ಸ್ಟಡೀಸ್ (NUALS) ಹೊರತುಪಡಿಸಿ ಯಾವುದೇ ವಿಶ್ವವಿದ್ಯಾಲಯಗಳು ತಮ್ಮ ಹಿಂದಿನ ಪತ್ರಕ್ಕೆ ಪ್ರತಿಕ್ರಿಯಿಸಿಲ್ಲ ಅಥವಾ ಕ್ರಮ ಕೈಗೊಂಡಿಲ್ಲಎಂದು ಅವರು ವಿವರಿಸಿದ್ದಾರೆ.

ಅಖಿಲ ಭಾರತ ಕೋಟಾದ (ಎಐಕ್ಯು) ಸೀಟುಗಳಿಗೆ ರಾಜ್ಯದ ಸೀಟುಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27ರಷ್ಟು ಮೀಸಲಾತಿ ಒದಗಿಸುವ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ಹಿರಿಯ ವಕೀಲರು ಪ್ರಸ್ತಾಪಿಸಿದ್ದು “ಸುಪ್ರೀಂ ಕೋರ್ಟ್ ವೈದ್ಯಕೀಯ ಮತ್ತು ದಂತ ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸೇರ್ಪಡೆಯನ್ನು ಎತ್ತಿಹಿಡಿದಿದೆ ಎಂದು ಸೂಚಿಸಲು ನಾನು ಈ ತೀರ್ಪನ್ನು ಉಲ್ಲೇಖಿಸುತ್ತಿದ್ದೇನೆ” ಎಂದಿದ್ದಾರೆ.

ಹಿಂದೆಂದಿಗಿಂತಲೂ ಈಗ ಕಾನೂನು ಶಾಲೆಗಳಲ್ಲಿ ಮೀಸಲಾತಿಯ ಅವಶ್ಯಕತೆಯಿದ್ದು ನಿಖರವಾದ ಮೀಸಲಾತಿ ಒದಗಿಸದಿರುವುದು ಸಂವಿಧಾನದ 15 ಮತ್ತು 46 ನೇ ವಿಧಿಗಳ ಉಲ್ಲಂಘನೆಯಾಗುತ್ತದೆ. ಇದನ್ನು ಜಾರಿಗೊಳಿಸಲು ವಿಫಲವಾದರೆ ಅನಿವಾರ್ಯವಾಗಿ ಕಾನೂನು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎನ್‌ಎಲ್‌ಯುಗಳು ಸಮಸ್ಯೆಯತ್ತ ತಮ್ಮ ಗಮನ ಹರಿಸಬೇಕಿದ್ದು ಮೀಸಲಾತಿಯನ್ನು ಜಾರಿಗಳಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದಿದ್ದಾರೆ.