ಪಿತೃತ್ವ ಖಚಿತಪಡಿಸಿಕೊಳ್ಳಲು ವಂಶವಾಹಿ (ಡಿಎನ್‌ಎ) ಪರೀಕ್ಷೆಯ ಉದ್ದೇಶಕ್ಕಾಗಿ ಅತ್ಯಾಚಾರ ಆರೋಪಿಯ ರಕ್ತದ ಮಾದರಿ ಪಡೆಯುವುದು ಸಂವಿಧಾನದ 20 (3)ನೇ ವಿಧಿ ಅಡಿ ಸ್ವಯಂ ದೋಷಾರೋಪಣೆಯ ವಿರುದ್ಧದ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ನ ಕಲಬುರ್ಗಿ ಪೀಠವು ಅಭಿಪ್ರಾಯಪಟ್ಟಿದೆ.
ಮಗುವಿನ ಪಿತೃತ್ವ ನಿರ್ಧರಿಸಲು ಮ್ಯಾಜಿಸ್ಟ್ರೇಟ್ ಆದೇಶಿಸಿದ್ದನ್ನು ನಾಲ್ಕು ವರ್ಷಗಳ ನಂತರ ಪ್ರಶ್ನಿಸಿ ಮಲ್ಲಪ್ಪ ಅಲಿಯಾಸ್ ಮಾಲಿಂಗರಾಯ ಸಲ್ಲಿಸಿದ್ದ ಮನವಿಯನ್ನು ಈಚೆಗೆ ನ್ಯಾಯಮೂರ್ತಿ ಎಚ್ ಪಿ ಸಂದೇಶ್ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
“ಡಿಎನ್‌ಎ ಪರೀಕ್ಷೆಯಲ್ಲಿ ಅರ್ಜಿದಾರರು ಮಗುವಿನ ತಂದೆ ಎಂಬುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಆದೇಶ ಮತ್ತು ಡಿಎನ್‌ಎ ವರದಿಯನ್ನು ವಜಾ ಮಾಡುವಂತೆ ಕೋರಿ ಮನವಿ ಸಲ್ಲಿಸಲಾಗಿದೆ. ಅಲ್ಲದೇ, ಭಾರತ ಸಂವಿಧಾನದ 20(3)ನೇ ವಿಧಿ ಮತ್ತು ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ಪರಿಗಣಿಸಲಾದ ಕಾರ್ಯವಿಧಾನದ ಉಲ್ಲಂಘನೆಯಾಗಿದೆ ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಡಿಎನ್‌ಎ ವರದಿಗೆ ಸಂಬಂಧಿಸಿದಂತೆ ಅನುಸರಿಸಲಾಗಿರುವ ಪ್ರಕ್ರಿಯೆಯು ಸ್ವಾಭಾವಿಕ ನ್ಯಾಯಕ್ಕೆ ವಿರುದ್ಧವಾಗಿದ್ದು, ಸಂವಿಧಾನದ 20(3)ನೇ ವಿಧಿಯ ಉಲ್ಲಂಘನೆಯಾಗಿದೆ. ಡಿಎನ್‌ಎ ಪರೀಕ್ಷೆಗೆ ಅರ್ಜಿದಾರರು ಸ್ವಯಂಪ್ರೇರಿತವಾಗಿ ಒಪ್ಪಿಗೆ ನೀಡುವುದಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯವು ಪರಿಶೀಲನೆ ನಡೆಸಿಲ್ಲ ಎಂದು ಅರ್ಜಿದಾರರು ಮನವಿಯಲ್ಲಿ ಆಕ್ಷೇಪಿಸಿದ್ದರು.
ಡಿಎನ್‌ಎ ಪರೀಕ್ಷೆಗೆ ಸಂಬಂಧಿಸಿದ ಪ್ರಕ್ರಿಯೆಯನ್ನು ಮ್ಯಾಜಿಸ್ಟ್ರೇಟ್ ಅರ್ಜಿದಾರರಿಗೆ ಅಂದು ವಿವರಿಸಿದ್ದರು. ಅರ್ಜಿದಾರರಿಂದ ಒಪ್ಪಿಗೆ ಪಡೆದಿರುವುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದ್ದು, ಅಂದು ಅರ್ಜಿದಾರರು ಡಿಎನ್‌ಎ ಪರೀಕ್ಷೆಗೆ ಆಕ್ಷೇಪಿಸಿರಲಿಲ್ಲ ಎಂದು ಪ್ರಾಸಿಕ್ಯೂಷನ್ ಒತ್ತಿ ಹೇಳಿದೆ. ಹೀಗಾಗಿ, ನಾಲ್ಕು ವರ್ಷಗಳು ಕಳೆದ ಬಳಿಕ ಯಾವುದೇ ಆಕ್ಷೇಪ ಎತ್ತಲು ಅವರಿಗೆ ಅವಕಾಶ ಮಾಡಿಕೊಡಬಾರದು ಎಂದು ವಾದಿಸಿತ್ತು.
2005ಕ್ಕೂ ಮುನ್ನ ಡಿಎನ್‌ಎ ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ನಿಯಮಗಳು ಇರಲಿಲ್ಲ ಎಂಬುದನ್ನು ನ್ಯಾಯಾಲಯ ಉಲ್ಲೇಖಿಸಿದ್ದು, ಆರೋಪಿಯ ವಾದವನ್ನು ಅಲ್ಲಗಳೆದಿದೆ. ಡಿಎನ್‌ಎ ಪರೀಕ್ಷೆಗೆ ಆದೇಶಿಸುವ ಮೂಲಕ ಮ್ಯಾಜಿಸ್ಟ್ರೇಟ್ ಅವರು ಯಾವುದೇ ತಪ್ಪು ಎಸಗಿಲ್ಲ ಎಂದಿರುವ ನ್ಯಾಯಾಲಯವು ಆರೋಪಿಯ ಮನವಿಯನ್ನು ವಜಾ ಮಾಡಿದೆ.
ಪ್ರಕರಣದ ಹಿನ್ನೆಲೆ: ಸಂತ್ರಸ್ತೆಯನ್ನು ಕೂಲಿ ಕೆಲಸಕ್ಕೆ ಕರೆದೊಯ್ದಿದ್ದ ಆರೋಪಿ ಮಲ್ಲಪ್ಪ ವಿವಾಹವಾಗುವುದಾಗಿ ನಂಬಿಸಿ, ಬಲವಂತವಾಗಿ ಆಕೆಯ ಜೊತೆ ಸಂಭೋಗ ನಡೆಸಿದ್ದರು. ಇದರಿಂದ ಆಕೆ ಗರ್ಭಿಣಿಯಾಗಿದ್ದು, ಆನಂತರ ವಿವಾಹವಾಗಲು ಆರೋಪಿ ನಿರಾಕರಿಸಿದ್ದರು. ಹೀಗಾಗಿ, ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 504 (ಶಾಂತಿ ಕದಡಲು ಉದ್ದೇಶಪೂರ್ವಕವಾಗಿ ಅವಮಾನ), 506 (ಕ್ರಿಮಿನಲ್ ಬೆದರಿಕೆ), 417 (ವಂಚನೆ) ಮತ್ತು 376ರ (ಅತ್ಯಾಚಾರ) ಅಡಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ ಬಳಿಕ ಅತ್ಯಾಚಾರದ ನಂತರ ಹುಟ್ಟಿದ ಮಗುವಿನ ತಂದೆಯನ್ನು ಗುರುತಿಸುವ ಸಂಬಂಧ ಆರೋಪಿಯ ರಕ್ತದ ಮಾದರಿ ಪರೀಕ್ಷೆ ನಡೆಸಲು ಮ್ಯಾಜಿಸ್ಟ್ರೇಟ್ ಬಳಿ ಮನವಿ ಸಲ್ಲಿಸಲಾಗಿತ್ತು. ಡಿಎನ್‌ಎ ಪರೀಕ್ಷೆಯಲ್ಲಿ ಆರೋಪಿಯು ಮಗುವಿನ ತಂದೆ ಎಂಬುದು ರುಜುವಾತಾಗಿತ್ತು.