ಮಗುವಿನ ಪಿತೃತ್ವ ನಿರ್ಧರಿಸಲು ವಂಶವಾಹಿ ಪರೀಕ್ಷೆ ನಡೆಸಲು ಅನುಮತಿ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಈಚೆಗೆ ವಜಾಗೊಳಿಸಿರುವ ಕರ್ನಾಟಕ ಹೈಕೋರ್ಟ್ನ ಕಲಬುರ್ಗಿ ಪೀಠವು ಅತ್ಯಂತ ಅಗತ್ಯದ ಸಂದರ್ಭಗಳಲ್ಲಿ ಮಾತ್ರ ಡಿಎನ್ಎ ಪರೀಕ್ಷೆಗೆ ಒಳಪಡಿಸಬೇಕಾಗುತ್ತದೆ ಎಂದಿದೆ.
ತನ್ನಿಂದ ದೂರವಾಗಿದ್ದೂ ಮಗು ಮತ್ತು ತನಗೆ ಜೀವನಾಂಶ ನೀಡುವಂತೆ ಪತ್ನಿ ಸಲ್ಲಿಸಿದ್ದ ಅರ್ಜಿ ಎತ್ತಿಹಿಡಿದಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಬಿ ಎಸ್ ಶ್ರೀನಿವಾಸ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ರಾಜೇಶ್ ರೈ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.
“ಅರ್ಜಿದಾರರು ಪ್ರತಿವಾದಿಯವನ್ನು ವಿವಾಹವಾಗಿ ಕೆಲವು ದಿನಗಳ ಕಾಲ ಜೊತೆಯಲ್ಲಿದ್ದರು ಎಂಬ ಅಂಶ ನಿರಾಕರಿಸಿಲ್ಲ. ಹೀಗಾಗಿ, ಪಿತೃತ್ವ ಪ್ರಶ್ನಿಸಿ ಡಿಎನ್ಎ ಪ್ರಶ್ನಿಸುವುದಕ್ಕೆ ಅವಕಾಶವಿಲ್ಲ” ಎಂದು ಪೀಠ ಅಭಿಪ್ರಾಯಪಟ್ಟಿದೆ. “ಮಗುವಿನ ಪಿತೃತ್ವಕ್ಕೆ ಸಂಬಂಧಿಸಿದ ಡಿಎನ್‌ಎ ಪರೀಕ್ಷೆ ಕೋರಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗುವ ಅರ್ಜಿಗಳನ್ನು ಪರಿಗಣಿಸಬಾರದು. ಡಿಎನ್ಎ ಪರೀಕ್ಷೆಯನ್ನು ಪ್ರಮಾಣಿತ ಅಭ್ಯಾಸವನ್ನಾಗಿಸಬಾರದು. ಆ ರೀತಿಯ ಆದೇಶಗಳನ್ನು ಹೊರಡಿಸುವುದರಿಂದ ಎದುರಾಗಬಹುದಾದ ಅನುಕೂಲ ಮತ್ತು ಅನನುಕೂಲಗಳನ್ನು ಪರಿಗಣಿಸಬೇಕು” ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
“ಡಿಎನ್ಎ ಪರೀಕ್ಷೆಗೆ ಒಳಪಡಿಸದೆ ಸತ್ಯಾಂಶ ಕಂಡುಹಿಡಿಯುವುದು ಅಸಾಧ್ಯವಾದಂತಹ ಸಂದರ್ಭಗಳಿದ್ದಲ್ಲಿ ಡಿಎನ್ಎ ಪರೀಕ್ಷೆ ಅತ್ಯಗತ್ಯ ಎಂದಾಗ ಮಾತ್ರ ಈ ರೀತಿಯ ಮನವಿ ಪರಿಗಣಿಸಬೇಕು. ಪತ್ನಿಗೆ ಜೀವನಾಂಶ ನೀಡುವುದರಿಂದ ನುಣುಚಿಕೊಳ್ಳಲು ಡಿಎನ್ಎ ಕೋರಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗದು. ಈ ಸಂಬಂಧ ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶದಲ್ಲಿ ಯಾವುದೇ ದೋಷವಿಲ್ಲ. ಆದ್ದರಿಂದ, ಹಸ್ತಕ್ಷೇಪ ಮಾಡಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ: ರಾಯಚೂರು ಮೂಲದ ಅರ್ಜಿದಾರರು 2022ರ ಮೇ 25ರಂದು ಪ್ರತಿವಾದಿಯನ್ನು (ಪತ್ನಿ) ವಿವಾಹವಾಗಿದ್ದರು. ದಂಪತಿಗೆ ಒಂದು ಮಗು ಜನಿಸಿದ್ದು, ಇದೀಗ ಅದಕ್ಕೆ ಒಂದು ವರ್ಷವಾಗಿದೆ. ಈ ಮಧ್ಯೆ ದಂಪತಿಯು ದೂರಾಗಿದ್ದರು. ಹೀಗಾಗಿ, ತಾನು ಮತ್ತು ತನ್ನ ಒಂದು ವರ್ಷದ ಮಗಳಿಗೆ ಜೀವನಾಂಶ ಕೋರಿ ಸಿಆರ್‌ಪಿಸಿ ಸೆಕ್ಷನ್ 125ರ ಅಡಿಯಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಗೆ ಆಕ್ಷೇಪಿಸಿದ್ದ ಅರ್ಜಿದಾರ ಶ್ರೀನಿವಾಸ್ “ಪ್ರತಿವಾದಿಯನ್ನು ವಿವಾಹವಾಗಿರುವ ಅಂಶ ನಿಜ. ಆದರೆ, ಕೆಲವು ದಿನಗಳ ಕಾಲ ಮಾತ್ರ ಒಟ್ಟಿಗಿದ್ದು, ಸಹಬಾಳ್ವೆಯಿಂದ ಸಂಸಾರ ಮಾಡದೆ ದೂರಾಗಿದ್ದೇವೆ. ಆದ್ದರಿಂದ, ಮಗುವಿನ ತಂದೆ ನಾನಲ್ಲ. ಆದ ಕಾರಣ ಮಗುವಿನ ಪಿತೃತ್ವದ ಬಗ್ಗೆ ಅನುಮಾನಗಳಿದ್ದು, ಡಿಎನ್‌ಎ ಪರೀಕ್ಷೆಗೆ ಅವಕಾಶ ನೀಡಬೇಕು” ಎಂದು ವಾದಿಸಿದ್ದರು. ವಾದ ಆಲಿಸಿದ ಕೌಟುಂಬಿಕ ನ್ಯಾಯಾಲಯವು ಅರ್ಜಿದಾರ ಶ್ರೀನಿವಾಸ್ ವಾದ ತಳ್ಳಿಹಾಕಿ, ಅವರ ಮನವಿ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀನಿವಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.