Justuce Kirubakaran
Justuce Kirubakaran 
ಸುದ್ದಿಗಳು

ಭಾಷೆಯ ಹೆಸರಿನಲ್ಲಿ ದೇಶದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಲು ಭಾಷಾ ದುರಭಿಮಾನಿಗಳಿಗೆ ಅವಕಾಶ ಕೊಡಬೇಡಿ: ನ್ಯಾ ಕಿರುಬಾಕರನ್

Bar & Bench

ನಿಷೇಧಿತ “ತಮಿಳುನಾಡು ಲಿಬರೇಷನ್ ಆರ್ಮಿ”ಯ ಸದಸ್ಯನಿಗೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಕಿರುಬಕರನ್ ಅವರು ಭಾರತದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಲು ಭಾಷಾ ದುರಭಿಮಾನ ಅಸ್ತ್ರ ಬಳಸಲಾಗುತ್ತಿದೆ ಎಂದು ನುಡಿದಿದ್ದಾರೆ (ಕಲೈಲಿಂಗಂ ವರ್ಸಸ್ ತಮಿಳುನಾಡು ರಾಜ್ಯ).

ಇದೇ ಸಂದರ್ಭದಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆ (ಐಪಿಎಸ್‌) ಅಡಿ ವಿವಿಧ ಪ್ರಕರಣ ಎದುರಿಸುತ್ತಿರುವ ಆರೋಪಿಗೆ ಜಾಮೀನು ಮಂಜೂರು ಮಾಡಲು ನ್ಯಾ. ಕಿರುಬಾಕರನ್ ಮತ್ತು ನ್ಯಾ. ಹೇಮಲತಾ ಅವರಿದ್ದ ವಿಭಾಗೀಯ ಪೀಠವು ನಿರಾಕರಿಸಿದೆ.

ಧರ್ಮ, ವರ್ಗ ಮತ್ತು ಭಾಷೆಯಲ್ಲಿನ ವ್ಯತ್ಯಾಸಗಳನ್ನು ಮುಂದಿಟ್ಟುಕೊಂಡು ಸಂಘರ್ಷ ಮತ್ತು ಪ್ರತ್ಯೇಕತೆ ಬಯಸುವವರ ವಿರುದ್ಧ ಕಿಡಿಕಾರಿರುವ ನ್ಯಾ. ಕಿರುಬಾಕರನ್ ಅವರು ಶುಕ್ರವಾರ ಹೊರಡಿಸಿದ ಆದೇಶದಲ್ಲಿ ಹೀಗೆ ಹೇಳಿದ್ದಾರೆ.

“ತಮಿಳು ಸಂಸ್ಕೃತಿ, ತಮಿಳು ಸಂತತಿ ಮತ್ತು ತಮಿಳು ಭಾಷೆ ಹೆಸರಿನಲ್ಲಿ ಕೆಲವು ದುಷ್ಟ ಶಕ್ತಿಗಳು ತಮ್ಮ ದುಷ್ಕೃತ್ಯ ಜಾರಿಗೆ ತರಲು ಯತ್ನಿಸುವ ಬಗ್ಗೆ ಸರ್ಕಾರ ಅತ್ಯಂತ ಸೂಕ್ಷ್ಮತೆಯಿಂದ ವರ್ತಿಸಬೇಕು. ವಿಶೇಷವಾಗಿ ಭಾವನಾತ್ಮಕವಾದ ಭಾಷಾ ವಿಚಾರಗಳನ್ನು ಮುಂದಿಟ್ಟುಕೊಂಡು ಅಪಪ್ರಚಾರವನ್ನು ಮುಂದುವರಿಸಲು ದುಷ್ಟ ಶಕ್ತಿಗಳಿಗೆ ಸರ್ಕಾರ ಅವಕಾಶ ಮಾಡಿಕೊಡಬಾರದು. ರಾಜಕೀಯ ಲಾಭ ಎತ್ತಲು ರಾಜಕೀಯ ಪಕ್ಷಗಳು ಭಾಷಾ ದುರಭಿಮಾನದ ಕಿಚ್ಚು ಎಬ್ಬಿಸಲು ತುದಿಗಾಲ ಮೇಲಿ ನಿಂತಿವೆ... ದೇಶದ ಯಾವುದೇ ಭಾಗದಲ್ಲಿ ಭಾಷಾ ದುರಾಭಿಮಾನದ ವಿಚಾರ ಇಟ್ಟುಕೊಂಡು ಅಲ್ಲೋಲಕಲ್ಲೋಲ ಸೃಷ್ಟಿಸಲು ಅವಕಾಶ ನೀಡಬಾರದು.”
ನ್ಯಾಯಮೂರ್ತಿ ಎನ್ ಕಿರುಬಾಕರನ್

“ನಮ್ಮದು ಬಹು ಸಂತತಿ, ಬಹು ಸಂಸ್ಕೃತಿ, ಬಹು ಭಾಷೆ, ವಿಭಿನ್ನವಾದ ಧಾರ್ಮಿಕ ನಂಬಿಕಸ್ಥರು ಇರುವ ದೇಶ. ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಬೇಕು. ತನ್ನ ಭಾಷೆ, ಸಂಸ್ಕೃತಿ, ಧರ್ಮ, ಸಂತತಿಯನ್ನು ಕಾಪಾಡಲು ಮತ್ತು ಸಂರಕ್ಷಿಸಲು ಸರ್ಕಾರಗಳು ಬದ್ಧವಾಗಿವೆಯೇ ವಿನಾ ಅವುಗಳನ್ನು ತುಳಿಯಲು ಯತ್ನಿಸುವುದಿಲ್ಲ ಎಂಬ ನಂಬಿಕೆ ಪ್ರತಿಯೊಬ್ಬ ಪ್ರಜೆಯಲ್ಲಿಯೂ ಹುಟ್ಟುವಂತೆ ಮಾಡಬೇಕು. ಈ ಮೂಲಕ ದುಷ್ಟ ಶಕ್ತಿಗಳ ಕುತಂತ್ರವನ್ನು ವಿಫಲಗೊಳಿಸಬೇಕು” ಎಂದು ನ್ಯಾ. ಕಿರುಬಾಕರನ್ ಹೇಳಿದ್ದಾರೆ.

“ಕೆಲವು ವಿದ್ಯಾವಂತರು, ಗೌರವಾನ್ವಿತ ವ್ಯಕ್ತಿಗಳು ನಕ್ಸಲೀಯರನ್ನು ಮುಖ್ಯವಾಹಿಗೆ ತರುವ ಬದಲು ಅವರ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಧ್ಯಮ ವರದಿಗಳಿಂದ ನ್ಯಾಯಾಲಯವು ಆತಂಕಗೊಂಡಿದೆ… ಸಂಕ್ಷಿಪ್ತವಾಗಿ ಹೇಳಬೇಕೆಂದರೆ ನಮ್ಮ ರಾಷ್ಟ್ರವು ವೈರಿ ರಾಷ್ಟ್ರಗಳಿಗಿಂತ ಆಂತರಿಕ ಶಕ್ತಿಗಳಿಂದ ಆತಂಕ ಎದುರಿಸುತ್ತಿದೆ” ಎಂದು ನ್ಯಾ. ಕಿರುಬಾಕರನ್ ಹೇಳಿದ್ದಾರೆ.

“ಸರ್ಕಾರೇತರ ಸಂಸ್ಥೆ, ಮಾನವ ಹಕ್ಕುಗಳ ಸಂಘಟನೆಗಳು ಮತ್ತು ರಾಜಕೀಯ ಗುಂಪುಗಳ ಮುಖವಾಡ ಹಾಕಿಕೊಂಡಿರುವ ಕೆಲವು ದುಷ್ಟ ಶಕ್ತಿಗಳು ತಮಿಳುನಾಡಿನಲ್ಲಿ ಸಕ್ರಿಯವಾಗಿವೆ. ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಪಪ್ರಚಾರ ಸೃಷ್ಟಿಸುವ ಮೂಲಕ ಜನರು ಪ್ರತಿಭಟನೆಗೆ ಇಳಿಯುವಂತೆ, ಜನರಲ್ಲಿ ಭಯ ಸೃಷ್ಟಿಸುವುದು ಮತ್ತು ಜನರ ನಡುವೆ ದ್ವೇಷ ಬಿತ್ತುತ್ತಿವೆ. ಇವುಗಳನ್ನು ಹೊರತುಪಡಿಸಿ ಕೆಲವು ಎನ್ ಜಿಒಗಳು ಮತ್ತು ಮಾನವ ಹಕ್ಕುಗಳ ಸಂಸ್ಥೆಗಳು ಜನಸೇವೆಯಲ್ಲಿ ತೊಡಗಿಕೊಂಡಿವೆ” ಎಂದು ಹೇಳಿದ್ದಾರೆ.

“ಅಭಿವ್ಯಕ್ತಿಯ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಈ ಗುಂಪುಗಳು ತಾವೇ ದೇಶದ್ರೋಹಿ ಹೇಳಿಕೆ ನೀಡುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿ ವ್ಯಕ್ತಿಯೊಬ್ಬ ಸರ್ಕಾರದ ವಿರುದ್ಧ ಪ್ರತಿಭಟಿಸಬಹುದೇ ವಿನಾ ದೇಶದ ವಿರುದ್ಧವಲ್ಲ. ಆಡಳಿತರೂಢ ಸರ್ಕಾರದ ವಿರುದ್ಧದ ಹೋರಾಟಕ್ಕೂ ದೇಶದ ವಿರುದ್ಧದ ಹೋರಾಟಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ದುಷ್ಟ ಶಕ್ತಿಗಳು ಪ್ರಜಾಪ್ರಭುತ್ವ ಮತ್ತು ದೇಶಕ್ಕೆ ಸಾಕಷ್ಟು ಹಾನಿ ಮಾಡುತ್ತವೆ. ಆದ್ದರಿಂದ ಈ ಶಕ್ತಿಗಳ ಬಗ್ಗೆ ಜನರು ಎಚ್ಚರಿಕೆಯಿಂದ ಇರಬೇಕು” ಎಂದೂ ಎಚ್ಚರಿಸಿದ್ದಾರೆ.

“ಸಣ್ಣ ಹಾಗೂ ತಿರುಚಲಾದ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸಲು ಈ ದುಷ್ಟ ಶಕ್ತಿಗಳು ಮಾಧ್ಯಮದಲ್ಲಿ ಹಾಜರಾಗುತ್ತವೆ. ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಸುದ್ದಿಯ ಹೆಸರಿನಲ್ಲಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆಯೇ ವಿನಾ ನೇರವಾಗಿ ಸುದ್ದಿ ಪ್ರಕಟಿಸುವುದಿಲ್ಲ. ಇವುಗಳು ದೇಶಕ್ಕೆ ಅಪಾಯಕಾರಿ. ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಗೆ ಮುಳುವಾಗಿರುವ ಮೂಲಭೂತವಾದಿಗಳು ಮತ್ತು ಪ್ರತ್ಯೇಕತವಾದಿಗಳನ್ನು ಚಿವುಟಿ ಹಾಕಬೇಕು. ಏಕೆಂದರೆ, ಇವರುಗಳ ಅಪಪ್ರಚಾರವು ದೇಶದ ಕಲ್ಯಾಣ ಮತ್ತು ಸಮಗ್ರತೆಗೆ ವಿರುದ್ಧವಾಗಿರುತ್ತದೆ” ಎಂದು ಹೇಳಿದ್ದಾರೆ.

“ಒಂದು ಭಾಷೆಗೆ ತಾರತಮ್ಯ ಎಸಗುವ ಮೂಲಕ ಮತ್ತೊಂದು ಭಾಷೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂಬ ಅಭಿಪ್ರಾಯ ಮೂಡುವಂತೆ ಸರ್ಕಾರ ನಡೆದುಕೊಳ್ಳುವುದು ಪ್ರತ್ಯೇಕತಾವಾದಿ ಗುಂಪುಗಳಿಗೆ ತಮ್ಮ ಅಪಪ್ರಚಾರ ಮುಂದುವರಿಸಲು ನೆರವಾಗುತ್ತದೆ… ಭಾಷೆ, ಸಂತತಿ, ಧರ್ಮ, ಪ್ರಾಂತ್ಯ ಮತ್ತು ಸಿದ್ಧಾಂತದ ಹೆಸರಿನಲ್ಲಿ ಸಮಾಜದಲ್ಲಿ ಅತಂಕ, ಅಲ್ಲೋಲಕಲ್ಲೋಲ ಸೃಷ್ಟಿಸಿ ಅಭಿವೃದ್ಧಿಗೆ ತಡೆಯೊಡ್ಡಿ ದೇಶವನ್ನು ವಿಭಜಿಸುವ ಸಮಾಜಘಾತುಕ ಶಕ್ತಿಗಳನ್ನು ಕಠಿಣ ನಿರ್ಧಾರಗಳ ಮೂಲಕ ನಿಯಂತ್ರಿಸಬೇಕು” ಎಂದು ನ್ಯಾ. ಕಿರುಬಾಕರನ್ ಸಲಹೆ ನೀಡಿದ್ದಾರೆ.

Justice R Hemalatha

ಸದರಿ ಪ್ರಕರಣದಲ್ಲಿ ವಿಸ್ತೃತದೃಷ್ಟಿಯ ಅಭಿಪ್ರಾಯ ಪ್ರಸ್ತುತವಲ್ಲ, ಭಾಷಾ ಕಲಿಕೆ ವೈಯಕ್ತಿಕ ಆಯ್ಕೆ: ನ್ಯಾ. ಆರ್ ಹೇಮಲತಾ

ಜಾಮೀನು ನಿರಾಕರಿಸಿರುವ ವಿಚಾರಕ್ಕೆ ಸಮ್ಮತಿ ವ್ಯಕ್ತಪಡಿಸಿರುವ ವಿಭಾಗೀಯ ಪೀಠದಲ್ಲಿದ್ದ ನ್ಯಾ. ಹೇಮಲತಾ ಅವರು “ತಮಿಳು ಸಂಸ್ಥೆಗಳು, ಭಾಷೆಗಳು ಮತ್ತು ಸರ್ಕಾರಗಳಿಗೆ ಸಲಹೆ ನೀಡಿರುವ ನ್ಯಾ. ಕಿರುಬಾಕರನ್ ಅವರ ಅಭಿಪ್ರಾಯಕ್ಕೆ ತಮ್ಮ ಸಹಮತವಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಜಾಮೀನು ಅರ್ಜಿಯಲ್ಲಿ ಈ ವಿಚಾರಗಳು ಪ್ರಸ್ತುತ ಎನಿಸುವುದಿಲ್ಲ ಎಂದೂ ಹೇಳಿದ್ದಾರೆ. “ಭಾಷೆಯ ಕಲಿಕೆ ವೈಯಕ್ತಿಕ ಆಯ್ಕೆ” ಎಂದು ಅವರು ಹೇಳಿದ್ದಾರೆ.