ಸರ್ವೋಚ್ಚ ನ್ಯಾಯಾಲಯ
ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಮಣಿಪುರ ವಿದ್ಯಮಾನದೊಂದಿಗೆ ಸಂದೇಶ್‌ಖಾಲಿ ಹಿಂಸಾಚಾರ ಹೋಲಿಸಬೇಡಿ ಎಂದು ಸುಪ್ರೀಂ ಬುದ್ಧಿವಾದ: ಸಿಬಿಐ ತನಿಖೆಗೆ ನಕಾರ

Bar & Bench

ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ಸಿಬಿಐ ಅಥವಾ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದೆ.

ಸಂದೇಶ್‌ಖಾಲಿಯಲ್ಲಿ ನಡೆದ ಹಿಂಸಾಚಾರವನ್ನು ಮಣಿಪುರದಲ್ಲಿ ನಡೆದ ಗಲಭೆಗೆ ಹೋಲಿಸಬೇಡಿ ಎಂದು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಅರ್ಜಿದಾರರಾದ ಅಲಖ್ ಅಲೋಕ್ ಶ್ರೀವಾಸ್ತವ ಅವರಿಗೆ ಬುದ್ಧಿವಾದ ಹೇಳಿತು.

ಮಣಿಪುರದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ್ದ ಕಳವಳವನ್ನು ಅರ್ಜಿದಾರರು ಉಲ್ಲೇಖಿಸಿದ್ದರು.

ದಯವಿಟ್ಟು ಮಣಿಪುರದಲ್ಲಿ ಆದ ಘಟನೆಯನ್ನು ಇಲ್ಲಿ ನಡೆದ ಘಟನೆಯೊಂದಿಗೆ ಹೋಲಿಸಬೇಡಿ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.

ಪರಿಹಾರಕ್ಕಾಗಿ ಕಲ್ಕತ್ತಾ ಹೈಕೋರ್ಟ್ ಸಂಪರ್ಕಿಸಬಹುದು ಎಂದು ನ್ಯಾಯಾಲಯ ಹೇಳಿದ ನಂತರ ಶ್ರೀವಾಸ್ತವ ಅವರು ಮನವಿಯನ್ನು ಹಿಂಪಡೆದರು.

ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್

ಕಲ್ಕತ್ತಾ ಹೈಕೋರ್ಟ್‌ ಸೂಕ್ತ ರೀತಿಯಲ್ಲಿ ತನಿಖೆ ನಡೆಸುವುದು ಅಸಾಧ್ಯವಾದುದರಿಂದ ಬೇರೆ ರಾಜ್ಯದ ಅಧಿಕಾರಿಗಳನ್ನು ನೇಮಿಸುವುದು ಅವಶ್ಯಕ ಎಂಬ ಶ್ರೀವಾಸ್ತವ ಅವರ ವಾದವನ್ನು ಒಪ್ಪದ ನ್ಯಾ. ನಾಗರತ್ನ ಅವರು ಎಸ್ಐಟಿ ರಚಿಸುವ ಅಧಿಕಾರ ಹೈಕೋರ್ಟ್‌ಗಳಿಗೂ ಇದೆ ಎಂದರು.

ನ್ಯಾಯಮೂರ್ತಿ ಭುಯಾನ್ ಕೂಡ ಪ್ರಕರಣವನ್ನು ಕಲ್ಕತ್ತಾ ಹೈಕೋರ್ಟ್ ಈಗಾಗಲೇ ವಿಚಾರಣೆಗೆ ಪರಿಗಣಿಸಿದೆ ಎಂದು ಒತ್ತಿ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನಾಯಕ ಶೇಖ್ ಶಹಜಹಾನ್ ನಡೆಸಿದ ದಾಳಿಯಿಂದಾಗಿ ಜಾರಿ ನಿರ್ದೇಶನಾಲಯ (ಇಡಿ) ತೊಂದರೆ ಎದುರಿಸುತ್ತಿರುವುದಾಗಿ ಶ್ರೀವಾಸ್ತವ ಆರೋಪಿಸಿದರು. ಸಂದೇಶ್‌ಖಾಲಿಯಲ್ಲಿ ಮಹಿಳೆಯರು ಸಾಮೂಹಿಕ ಅತ್ಯಾಚಾರದ ಆರೋಪ ಮಾಡಿದ್ದು ದಬ್ಬಾಳಿಕೆಗೂ ಒಳಗಾಗಿದ್ದಾರೆ ಎಂದು ಅವರು ಹೇಳಿದರು.

ಆದರೆ, ವಿವಿಧ ನ್ಯಾಯಾಲಯಗಳ ಮುಂದೆ ಅನೇಕ ವಿಚಾರಣೆಗಳು ನಡೆಯುವುದನ್ನು ತಪ್ಪಿಸುವುದಕ್ಕಾಗಿ ಕಲ್ಕತ್ತಾ ಹೈಕೋರ್ಟ್ ಪ್ರಕರಣ ನಿರ್ವಹಿಸಬೇಕಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಒತ್ತಿ ಹೇಳಿತು.