Justice Indira Banerjee
Justice Indira Banerjee 
ಸುದ್ದಿಗಳು

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ನಿವೃತ್ತಿ: ʼಛಲ ಬಿಡದಿರಿʼ ಎಂದು ನ್ಯಾಯಿಕ ವರ್ಗಕ್ಕೆ ಕರೆ

Bar & Bench

ಸುಪ್ರೀಂ ಕೋರ್ಟ್‌ನಲ್ಲಿ ನಾಲ್ಕು ವರ್ಷಗಳ ಕಾಲ ಸೇವೆ ಸಲ್ಲಿಸಿದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ಶುಕ್ರವಾರ ಸೇವೆಯಿಂದ ನಿವೃತ್ತರಾದರು.

ಈ ನಿಮಿತ್ತ ಸರ್ವೋಚ್ಚ ನ್ಯಾಯಾಲಯ ವಕೀಲರ ಸಂಘ (ಎಸ್‌ಸಿಬಿಎ) ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್‌, ಇತರ ನ್ಯಾಯಮೂರ್ತಿಗಳು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಹಾಗೂ ಸಂಘದ ಅಧ್ಯಕ್ಷ ವಿಕಾಸ್‌ ಸಿಂಗ್‌ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾ. ಬ್ಯಾನರ್ಜಿ "ನನ್ನ ತಂದೆ ನಾನು ವಕೀಲ ವೃತ್ತಿಗೆ ಸೇರುವುದನ್ನು ವಿರೋಧಿಸಿದರು. ನಾನು ಕಷ್ಟಪಟ್ಟು ಕೆಲಸ ಮಾಡಲಿಲ್ಲ ಎಂದರು. ಕಾನೂನು ಎಂಬುದು ಹೊಟ್ಟೆ ಉರಿದುಕೊಳ್ಳುವ ಸವತಿ ಇದ್ದಂತೆ ಮತ್ತು ನೀನು ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಹೇಳಿದರು. ಅದು ನನ್ನನ್ನು ವೃತ್ತಿಗೆ ಬರುವಂತೆ ಮಾಡಿತು" ಎಂದು ಅವರು ಹೇಳಿದರು.

“…ವೃತ್ತಿಯಲ್ಲಿ ಮುಖ್ಯವಾದುದೆಂದರೆ ಯಾರೂ ಸೋಲೊಪ್ಪಬಾರದು ಅಥವಾ ನಿರುತ್ಸಾಹಗೊಳ್ಳಬಾರದು. ನೀವು ಪ್ರಯತ್ನಶೀಲರಾಗಿದ್ದರೆ ಕೆಲಸ ಬರುತ್ತದೆ” ಎಂದ ಅವರು "ನಾನು 20.5 ವರ್ಷಗಳ ಬಳಿಕ (ಸೇವೆಯಿಂದ) ಮುಕ್ತಳಾಗುತ್ತಿದ್ದು ನಿವೃತ್ತಿಯಾಗಲು ನನಗೆ ತುಂಬಾ ಸಂತೋಷವಾಗಿದೆ. ಸಮಯ ಇದ್ದಾಗ ನನ್ನ ಬಳಿ ಹಣವಿರಲಿಲ್ಲ. ಹಣವಿದ್ದಾಗ ಸಮಯ ಇರಲಿಲ್ಲ. ಈಗ ನನಗೆ ಪಿಂಚಣಿ ದೊರೆಯುವುದರಿಂದ ಹಣ ಮತ್ತು ಸಮಯ ಎರಡೂ ದೊರೆಯುವ ಕಾಲ ಇದು ಎನ್ನಬಹುದು" ಎಂಬುದಾಗಿ ತಿಳಿಸಿದರು.

"ಕಿರಿಯ ವಕೀಲರು ವೃತ್ತಿಪರರಾಗಿರಬೇಕು, ಸಂಪೂರ್ಣವಾಗಿ ಸಿದ್ಧರಾಗಿರಬೇಕು ಮತ್ತು ಗುಣಮಟ್ಟದ ನ್ಯಾಯವನ್ನು ಸಕಾಲದಲ್ಲಿ ತಲುಪಿಸಲು ಸಹಾಯ ಮಾಡಬೇಕು” ಎಂದು ಕೂಡ ಅವರು ಕಿವಿಮಾತು ಹೇಳಿದರು.

ಸಿಜೆಐ ಯು ಯು ಲಲಿತ್ ಅವರು ನ್ಯಾಯಮೂರ್ತಿ ಬ್ಯಾನರ್ಜಿ ಅವರ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದರು. ಇದೇ ರೀತಿಯ ಭಾವನೆಗಳನ್ನು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ವ್ಯಕ್ತಪಡಿಸಿದರು. ನ್ಯಾ. ಬ್ಯಾನರ್ಜಿ ಅವರು ಸೇವೆಯಲ್ಲಿದ್ದಾಗ ತೋರಿದ ಸಂಯಮದ ಬಗ್ಗೆ ಎಸ್‌ಸಿಬಿಎ ಅಧ್ಯಕ್ಷ ವಿಕಾಸ್ ಸಿಂಗ್ ಅವರು ಗುಣಗಾನ ಮಾಡಿದರು.

ನ್ಯಾ. ಇಂದಿರಾ ಬ್ಯಾನರ್ಜಿ ಅವರು 1985 ರಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಮಾಡಿದರು. ಅವರು ಫೆಬ್ರವರಿ 5, 2002 ರಂದು ಕಲ್ಕತ್ತಾ ಹೈಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. ಆಗಸ್ಟ್ 8, 2016 ರಂದು ದೆಹಲಿ ಉಚ್ಚ ನ್ಯಾಯಾಲಯಕ್ಕೆ ವರ್ಗಾವಣೆಗೊಂಡರು. ಏಪ್ರಿಲ್ 5, 2017 ರಂದು ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಬ್ಯಾನರ್ಜಿ ನೇಮಕಗೊಂಡರು. ಆಗಸ್ಟ್ 7, 2018 ರಂದು ಅವರು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದರು. ಬ್ಯಾನರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಸೇವೆ ಸಲ್ಲಿಸಿದ ಎಂಟನೇ ಮಹಿಳೆ. ಅವರ ನಿವೃತ್ತಿಯೊಂದಿಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನ್ಯಾಯಮೂರ್ತಿಗಳ ಸಂಖ್ಯೆ ಮೂರಕ್ಕೆ ಇಳಿದಿದೆ.