A1
A1
ಸುದ್ದಿಗಳು

ಹಿರಿಯ ನ್ಯಾಯವಾದಿ ರೋಹಟ್ಗಿ ವಿರುದ್ಧ ಉದ್ಯಮಿ ಲಲಿತ್ ಮೋದಿ ಟೀಕೆ: ಆದೇಶ ನೀಡಲು ಸುಪ್ರೀಂ ನಕಾರ

Bar & Bench

ಸಾಮಾಜಿಕ ಮಾಧ್ಯಮದಲ್ಲಿ ಹಿರಿಯ ನ್ಯಾಯವಾದಿ ಮುಕುಲ್ ರೋಹಟಗಿ ವಿರುದ್ಧ ಉದ್ಯಮಿ ಲಲಿತ್ ಮೋದಿ ಮಾಡಿದ್ದ ಟೀಕೆಗಳ ಕುರಿತು ಯಾವುದೇ ಆದೇಶ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ. ಇದೇ ವೇಳೆ ಮೋದಿ ಕೌಟುಂಬಿಕ ವ್ಯಾಜ್ಯ ವಿಚಾರಣೆಯನ್ನು ಜುಲೈನಲ್ಲಿ ಪಟ್ಟಿ ಮಾಡಲು ಸೂಚಿಸಿದೆ [ಲಲಿತ್ ಕುಮಾರ್ ಮೋದಿ ಮತ್ತು ಡಾ. ಬೀನಾ ಮೋದಿ ಇನ್ನಿತರರ ನಡುವಣ ಪ್ರಕರಣ].

"ಮೋದಿ ಹೇಳಿಕೆ ಕುಟುಂಬ ಸದಸ್ಯನೊಬ್ಬನ ಆಕ್ರೋಶವೇ ವೀನಾ ಬೇರೇನೂ ಅಲ್ಲ. ಆದರೆ, ಅದರಲ್ಲಿ ವಕೀಲರನ್ನು ಎಳೆಯಬೇಡಿ, ಪ್ರಕರಣವನ್ನು ಕಗ್ಗಂಟಾಗಿಸಬೇಡಿ," ಎಂದು ಹೇಳಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ಪ್ರಕರಣದಲ್ಲಿ ಆದೇಶ ನೀಡಲು ನಿರಾಕರಿಸಿತು.

ಮೋದಿ ಪರ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು, “ರೋಹಟ್ಗಿ ವಿರುದ್ಧ ತಮ್ಮ ಕಕ್ಷಿದಾರರರು ಮಾಡಿದ್ದ ಟೀಕೆಗಳನ್ನು (ಸಾಮಾಜಿಕ ಮಾಧ್ಯಮದಿಂದ) ತೆಗೆದುಹಾಕಲಾಗಿದೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಆಗ ನ್ಯಾಯಾಲಯ "ನಾವು ಯಾವುದೇ ಆದೇಶ ನೀಡುತ್ತಿಲ್ಲ, ಇದನ್ನು ಬಗೆಹರಿಸಲು ನೀವೇ ಮುಂದಾಗಿ" ಎಂದಿತು.

ಭಾರತದ ಮಾಜಿ ಅಟಾರ್ನಿ ಜನರಲ್ ರೋಹಟ್ಗಿ ಅವರ ವಿರುದ್ಧ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾಜಿ ಅಧ್ಯಕ್ಷ ಲಲಿತ್‌ ಮೋದಿ ಅವರು ಮಾಡಿದ್ದ ಟೀಕೆಗಳಿಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ತಮ್ಮ ತಾಯಿ ಬೀನಾ ಮೋದಿ ಮತ್ತು ಸಹೋದರಿ ಚಾರು ಅವರೊಂದಿಗಿನ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಮೋದಿ ಅವರು, ತಮ್ಮ ತಾಯಿ ಪರ ವಾದ ಮಂಡಿಸುತ್ತಿರುವ ರೋಹಟ್ಗಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ದಾಳಿ ನಡೆಸಿದ್ದರು. ರೋಹಟ್ಗಿ ಮೋದಿಯನ್ನು ʼದೇಶಭ್ರಷ್ಟʼ ಎಂದು ಟೀಕಿಸಿದ್ದರು. ಇದರಿಂದ ಕ್ರುದ್ಧರಾಗಿ ಲಲಿತ್‌ ಮೋದಿ ಸಾಮಾಜಿಕ ಮಾದ್ಯಮದಲ್ಲಿ ರೋಹಟ್ಗಿ ವಿರುದ್ಧ ನಿಂದನಾತ್ಮಕ ಬರಹ ಪ್ರಕಟಿಸಿದ್ದರು. ಲಂಡನ್‌ನಲ್ಲಿ ನೆಲೆಸಿರುವ ಲಲಿತ್‌ ಬಳಿಕ ರೋಹಟ್ಗಿ ಅವರಲ್ಲಿ ಕ್ಷಮೆಯಾಚಿಸಿದ್ದರು.