ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಮೂಲ ಬಹಿರಂಗಪಡಿಸದೆ ವೈದ್ಯರು ಸಣ್ಣ ಪ್ರಮಾಣದ ಔಷಧ ಸಂಗ್ರಹಿಸಿ ಇರಿಸಿಕೊಂಡರೆ ಸಾರ್ವಜನಿಕರಿಗೆ ಅಪಾಯಕಾರಿಯಲ್ಲ: ಸುಪ್ರೀಂ

ಪರವಾನಗಿ ಪಡೆಯದ ಔಷಧಿಗಳನ್ನು ಸಣ್ಣ ಪ್ರಮಾಣದಲ್ಲಿ ಇರಿಸಿಕೊಂಡಿದ್ದ ವೈದ್ಯರಿಗೆ ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದ ನ್ಯಾಯಾಲಯ ವೈದ್ಯರಿಗೆ ರೂ 1 ಲಕ್ಷ ದಂಡವನ್ನಷ್ಟೇ ವಿಧಿಸಿತು.

Bar & Bench

ಅಗತ್ಯ ಪರವಾನಗಿಗಳಿಲ್ಲದ ಕೆಲ ಅಲೋಪಥಿ ಔಷಧಿಗಳನ್ನು ತನ್ನ ಕ್ಲಿನಿಕ್‌ನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇರಿಸಿಕೊಂಡಿದ್ದ ವೈದ್ಯರಿಗೆ ವಿಧಿಸಲಾಗಿದ್ದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಈಚೆಗೆ ರದ್ದುಗೊಳಿಸಿದೆ.

ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯಿದೆ- 1940ರ ಅಡಿಯಲ್ಲಿ ವೈದ್ಯರಿಂದ ವಶಪಡಿಸಿಕೊಂಡ ಔಷಧಿಗಳು ಸಣ್ಣ ಪ್ರಮಾಣದಲ್ಲಿರುವುದರಿಂದ ಮತ್ತು ವೈದ್ಯರು ಅವುಗಳನ್ನು ವಿತರಿಸಲು ಅಥವಾ ಮಾರಾಟ ಮಾಡಲು ಉದ್ದೇಶಿಸಿದ್ದಾರೆ ಎಂದು ಸಾಬೀತುಪಡಿಸಲು ಸಾಧ್ಯವಿಲ್ಲದ ಕಾರಣ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ ವೈದ್ಯರಿಗೆ ವಿಧಿಸಿದ್ದ ಜೈಲು ಶಿಕ್ಷೆಯ ಬದಲಿಗೆ ರೂ 1 ಲಕ್ಷ ದಂಡ ಪಾವತಿಸುವಂತೆ ಆದೇಶಿಸಿತು.

"ಈ ಔಷಧಿಗಳ ತಯಾರಕರು / ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸದೆ ಇರುವುದು, ಅಂತಹ ವಸ್ತುಗಳನ್ನು ಅನಧಿಕೃತವಾಗಿ ಚಲಾಯಿಸಿ ಸಾರ್ವಜನಿಕ ಹಿತಾಸಕ್ತಿಗೆ ಅಪಾಯವನ್ನುಂಟುಮಾಡುತ್ತದೆ (ಇದು ಕಾನೂನಿನ ನಿಷೇಧದ ಪ್ರಾಥಮಿಕ ಉದ್ದೇಶವಾಗಿದೆ) ಎಂದು ಹೇಳಲಾಗುವುದಿಲ್ಲ... ವಿಶೇಷವಾಗಿ ಕಾಯಿದೆಯ ಸೆಕ್ಷನ್ 18 (ಸಿ) ಅಡಿಯಲ್ಲಿ ಮಾರಾಟ / ವಿತರಿಸುವ ಉದ್ದೇಶ ಸಾಬೀತಾಗದೆ ಇದ್ದಾಗ ಜೈಲು ಶಿಕ್ಷೆ ವಿಧಿಸುವುದು ನ್ಯಾಯಸಮ್ಮತವಲ್ಲ," ಎಂದು ಪೀಠ ವಿವರಿಸಿದೆ.

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂಜಯ್ ಕರೋಲ್

ತನ್ನ ಶಿಕ್ಷೆ ರದ್ದುಗೊಳಿಸಲು ನಿರಾಕರಿಸಿದ ಸೆಪ್ಟೆಂಬರ್ 2021ರ ಮದ್ರಾಸ್ ಹೈಕೋರ್ಟ್ ಆದೇಶ ಪ್ರಶ್ನಿಸಿ ವೈದ್ಯರೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ವಿಚಾರ ತಿಳಿಸಿದೆ.

ಜಿಲ್ಲಾ ಆರೋಗ್ಯ ಇಲಾಖೆ 2015ರ ಅಕ್ಟೋಬರ್‌ನಲ್ಲಿ ವೈದ್ಯರ ಕ್ಲಿನಿಕ್ ಪರಿಶೀಲಿಸಿದಾಗ, ದಾಖಲೆಗಳಿಲ್ಲದ 29 ಬಗೆಯ ಅಲೋಪಥಿ ಔಷಧಿಗಳು ಪತ್ತೆಯಾಗಿದ್ದವು. ಈ ಔಷಧಿಗಳ ಮೂಲವನ್ನು ಬಹಿರಂಗಪಡಿಸಲು ವೈದ್ಯರಿಗೆ ಸಾಧ್ಯವಾಗದೇ ಇದ್ದುದರಿಂದ ಅವರ ವಿರುದ್ಧ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ವಿಚಾರಣಾ ನ್ಯಾಯಾಲಯ ವೈದ್ಯರಿಗೆ ಎರಡು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ರೂ 1 ಲಕ್ಷ ದಂಡ ವಿಧಿಸಿತ್ತು.

ಔಷಧ ಮಾರಾಟ ಮಾಡಲು ಅಥವಾ ವಿತರಿಸಲು ಉದ್ದೇಶಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ನಂತರ ಜೈಲು ಶಿಕ್ಷೆಯನ್ನು ಆರು ತಿಂಗಳ ಸಾದಾ ಜೈಲು ಶಿಕ್ಷೆಗೆ ಇಳಿಸಿದ್ದರು.

ಆದ್ದರಿಂದ, ಪರವಾನಗಿ ಪಡೆಯದ ಔಷಧಿಗಳ ಮಾರಾಟ ಅಥವಾ ವಿತರಣೆಗೆ ಸಂಬಂಧಿಸಿದಂತೆ ಕಾಯಿದೆಯ ಸೆಕ್ಷನ್ 18 (ಸಿ) ಅಡಿಯಲ್ಲಿ ವಿಧಿಸಲಾಗಿದ್ದ ಶಿಕ್ಷೆಯನ್ನು ಸೆಷನ್ಸ್‌ ನ್ಯಾಯಾಲಯ ರದ್ದುಪಡಿಸಿತು. ಆದರೆ ಪರವಾನಗಿ ಪಡೆಯದ ಔಷಧಿಗಳನ್ನು ಸಣ್ಣ ಪ್ರಮಾಣದಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಕ್ಕಾಗಿ ವೈದ್ಯರ ವಿರುದ್ಧದ ಉಳಿದ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ₹ 1 ಲಕ್ಷ ದಂಡ ಪಾವತಿಸಬೇಕು ಎಂದು ಸೆಷನ್ಸ್‌ ನ್ಯಾಯಾಲಯ ಹೇಳಿತ್ತು.

ಎರಡನೇ ಮೇಲ್ಮನವಿಗೆ ಸಂಬಂಧಿಸಿದಂತೆ, ಸೆಷನ್ಸ್ ನ್ಯಾಯಾಲಯದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಹೈಕೋರ್ಟ್ ನಿರಾಕರಿಸಿತು. ಇದರಿಂದಾಗಿ ವೈದ್ಯರು ಸುಪ್ರೀಂ ಕೋರ್ಟ್‌ನಲ್ಲಿ ಮತ್ತೊಂದು ಮೇಲ್ಮನವಿ ಸಲ್ಲಿಸಿದರು.

ವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯ ಪರವಾನಗಿ ಪಡೆಯದ ಔಷಧಿಗಳನ್ನು ಸಣ್ಣ ಪ್ರಮಾಣದಲ್ಲಿ ಸಂಗ್ರಹಿಸಿದ್ದಕ್ಕಾಗಿ ವೈದ್ಯರಿಗೆ ವಿಧಿಸಿದ್ದ ಶಿಕ್ಷೆಯನ್ನು ಉಳಿಸಿಕೊಳ್ಳಲು ಮುಂದಾಯಿತು. ಆದರೆ ಆತನಿಗೆ ಜೈಲು ಶಿಕ್ಷೆ ವಿಧಿಸುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿತು. ಪರಿಣಾಮ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ರೂ 1 ಲಕ್ಷ ದಂಡವನ್ನು ಮತ್ತೆ ಜಾರಿಗೊಳಿಸಿದ ಪೀಠ ಜೈಲು ಶಿಕ್ಷೆಯನ್ನು ಬದಿಗೆ ಸರಿಸಿತು.

ಆರೋಪಿ ವೈದ್ಯ ಪಳನಿ ಅವರ ಪರವಾಗಿ ಹಿರಿಯ ವಕೀಲ ಎಸ್ ನಾಗಮುತ್ತು ಮತ್ತು ವಕೀಲ ಎಂ ಪಿ ಪಾರ್ಥಿಬನ್, ತಮಿಳುನಾಡು ಸರ್ಕಾರದ ಪರವಾಗಿ ಹಿರಿಯ ವಕೀಲ ಡಾ. ಜೋಸೆಫ್ ಅರಿಸ್ಟಾಟಲ್ ವಾದ ಮಂಡಿಸಿದ್ದರು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Palani vs Tamil Nadu State.pdf
Preview