Karnataka High Court and doctor 
ಸುದ್ದಿಗಳು

ಲೈಂಗಿಕ ಕಿರುಕುಳ ನೀಡುವ ವೈದ್ಯರನ್ನು ಸುಮ್ಮನೆ ಬಿಡಲು ಸಾಧ್ಯವೇ ಇಲ್ಲ: ಎಚ್ಚರಿಕೆ ನೀಡಿದ ಹೈಕೋರ್ಟ್‌

“ನೀವು ಯಾವ ಸಂದೇಶ ಕಳುಹಿಸಿದ್ದೀರಾ ಎಂಬ ಬಗ್ಗೆ ದಾಖಲೆಗಳು ನ್ಯಾಯಾಲಯದ ಮುಂದಿವೆ. ಅವುಗಳನ್ನು ನಿಮಗೆ ನೀಡಲೇ? ತಡರಾತ್ರಿ ಊಟಕ್ಕೆ ಬರುವಂತೆ ದೂರುದಾರೆಗೆ ಏಕೆ ಕರೆದಿದ್ದೀರಿ?” ಎಂದು ಅರ್ಜಿದಾರರ ವಕೀಲರನ್ನು ಪ್ರಶ್ನಿಸಿದ ನ್ಯಾಯಾಲಯ.

Bar & Bench

ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿ, ಘನತೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ವೈದ್ಯರೊಬ್ಬರ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದ್ದು, ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡುವ ವೈದ್ಯರನ್ನು ಸುಮ್ಮನೆ ಬಿಡಲು ಸಾಧ್ಯವೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದಿದೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೊ ಕುಂದಾಪುರ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ ವಿಚಾರಣೆ ನಡೆಸಿತು.

“ದಾಖಲೆಗಳನ್ನು ನೋಡಿದರೆ ಅರ್ಜಿದಾರ ವೈದ್ಯ ದೂರುದಾರೆ ವೈದ್ಯೆಗೆ ಕಿರುಕುಳ ನೀಡಿರುವುದು ತಿಳಿಯಲಿದೆ. ಈ ಹಂತದಲ್ಲಿ ಎಫ್‌ಐಆರ್‌ ರದ್ದುಪಡಿಸಲಾಗದು. ತನಿಖಾಧಿಕಾರಿ ಆರೋಪ ಪಟ್ಟಿ ಸಲ್ಲಿಸಲಿ. ನಂತರ ಆರೋಪಗಳ ಕೈಬಿಡಲು ಕೋರಿ ಆರೋಪಿ ವೈದ್ಯ ಅರ್ಜಿ ಸಲ್ಲಿಸಬಹುದು” ಎಂದಿತು. ಈ ಹಿನ್ನೆಲೆಯಲ್ಲಿ ವೈದ್ಯರ ಪರ ವಕೀಲರು ಅರ್ಜಿ ಹಿಂಪಡೆದರು.

ಇದಕ್ಕೂ ಮುನ್ನ, ಪ್ರಕರಣದಲ್ಲಿ ದೂರುದಾರ ವೈದ್ಯೆಗೆ ಆರೋಪಿ ವೈದ್ಯ ಮಧ್ಯರಾತ್ರಿ ಊಟಕ್ಕೆ ಕರೆದ, ಅಶ್ಲೀಲ ಸಂದೇಶ ಕಳುಹಿಸಿದ ಮತ್ತು ಆಕೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ದಾಖಲೆಗಳಿಂದ ತಿಳಿದ ನ್ಯಾಯಮೂರ್ತಿಗಳು, ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಿಚಾರಣೆ ವೇಳೆ ಡಾ.ರಾಬರ್ಟ್‌ ಪರ ವಕೀಲರು “ಕರ್ತವ್ಯ ಸಮಯದ ನಂತರ ಮತ್ತು ಮಧ್ಯರಾತ್ರಿಯಲ್ಲಿ ದೂರುದಾರರಾದ ವೈದ್ಯೆಗೆ ಸಂದೇಶ ಕಳುಹಿಸಿದ ಮತ್ತು ವಿಡಿಯೊ ಕಾಲ್‌ ಮಾಡಿ ದೂರುದಾರ ವೈದ್ಯೆಗೆ ಕಿರುಕುಳ ನೀಡಿದ ಆರೋಪ ಅರ್ಜಿದಾರರ ಮೇಲಿದೆ. ಆದರೆ, ಅರ್ಜಿದಾರರು ಯಾವುದೇ ಅಪರಾಧ ಎಸಗಿಲ್ಲ” ಎಂದು ತಿಳಿಸಿದರು.

ಇದರಿಂದ ಬೇಸರಗೊಂಡ ನ್ಯಾಯಮೂರ್ತಿಗಳು “ಮಧ್ಯರಾತ್ರಿ ಏಕೆ ಸಂದೇಶ ಕಳುಹಿಸಲಾಗಿದೆ ಮತ್ತು ಕರೆ ಮಾಡಲಾಗಿದೆ” ಎಂದು ಪ್ರಶ್ನಿಸಿದರು.

ಆಗ ಅರ್ಜಿದಾರರ ವಕೀಲರು “ದೂರುದಾರೆಗೆ ಯಾವುದೇ ಅಶ್ಲೀಲ ಅಥವಾ ಅಪರಾಧ ಸಂದೇಶವನ್ನು ಅರ್ಜಿದಾರರು ಕಳುಹಿಸಿಲ್ಲ” ಎಂದು ಉತ್ತರಿಸಿದರು.

ಆಗ ಪೀಠವು “ಮತ್ತೇನು? ಗುಡ್‌ ಮಾರ್ನಿಂಗ್‌, ಗುಡ್‌ ನೈಟ್‌ ಎಂದು ಸಂದೇಶ ಕಳುಹಿಸಿದ್ದೀರಾ?” ಎಂದರು.

ಇದಕ್ಕೆ ಅರ್ಜಿದಾರರ ಪರ ವಕೀಲರು “ಅದು ಸಹ ಇದೆ. ಕೆಲ ಚರ್ಚೆಯ ಸಂದೇಶ ಕಳುಹಿಸಲಾಗಿದೆ. ಅವು ಅಪರಾಧದ ಸಂದೇಶಗಳಲ್ಲ. ದೂರುದಾರೆ ಸಹ ಆರೋಪಿಯ ಸಂದೇಶಕ್ಕೆ ಉತ್ತರಿಸಿದ್ದಾರೆ” ಎಂದು ಸಮಜಾಯಿಷಿ ನೀಡಿದರು.

ಅದಕ್ಕೆ ಕೆರಳಿದ ನ್ಯಾಯಮೂರ್ತಿಗಳು “ನೀವು ಯಾವ ಸಂದೇಶ ಕಳುಹಿಸಿದ್ದೀರಾ ಎಂಬ ಬಗ್ಗೆ ದಾಖಲೆಗಳು ನ್ಯಾಯಾಲಯದ ಮುಂದಿವೆ. ಅವುಗಳನ್ನು ನಿಮಗೆ ನೀಡಲೇ? ತಡರಾತ್ರಿ ಊಟಕ್ಕೆ ಬರುವಂತೆ ದೂರುದಾರೆಗೆ ಏಕೆ ಕರೆದಿದ್ದೀರಿ? ಅರ್ಜಿದಾರರು ಸರ್ಕಾರಿ ನೌಕರ. ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಮಾಡುವವರು. ಸಿಬ್ಬಂದಿಯನ್ನು ಲೈಂಗಿಕವಾಗಿ ಹಿಂಸಿಸುವ ವೈದ್ಯರನ್ನು ಬಿಡಲು ಸಾಧ್ಯವೇ ಇಲ್ಲ. ಆರೋಪ ಪಟ್ಟಿ ಸಲ್ಲಿಸಿದ ನಂತರ ಎಲ್ಲಾ ಸಂಗತಿಗಳು ತಿಳಿಯಲಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.