ವಿವಾಹಿತ ದಂಪತಿ ಪರಸ್ಪರ ಸಹಿ ಮಾಡಿದ ಪ್ರತ್ಯೇಕತೆಯ ಒಪ್ಪಂದಕ್ಕೆ (ಪ್ರತ್ಯೇಕವಾಗಿ ಜೀವಿಸುವ ಒಪ್ಪಂದ) ಯಾವುದೇ ಕಾನೂನಾತ್ಮಕ ಮಾನ್ಯತೆ ಇಲ್ಲ, ಅದು ವಿಚ್ಛೇದನಕ್ಕೆ ಸಮವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.
ಪ್ರತ್ಯೇಕವಾಗಿ ಬದುಕುವ ಒಪ್ಪಂದ ಜಾರಿಗೆ ಬಂದ ಒಂದು ವರ್ಷದ ಬಳಿಕ ಅಂದರೆ 2023 ರಲ್ಲಿ ತನ್ನ ಪತ್ನಿ ದಾಖಲಿಸಿದ್ದ ಪ್ರಕರಣ ರದ್ದುಗೊಳಿಸುವಂತೆ ಕೋರಿ ವ್ಯಕ್ತಿ ಹಾಗೂ ಅವರ ಪೋಷಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತ್ಯೇಕತೆಯ ಒಪ್ಪಂದ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ತಮ್ಮ ಸಂಬಂಧ ಅಂತ್ಯಗೊಂಡಿದೆ ಎಂಬುದು ಅರ್ಜಿಯಲ್ಲಿನ ವಾದವಾಗಿತ್ತು. ಆದರೆ ಪ್ರಸ್ತುತ ಪ್ರಕರಣಕ್ಕೆ ಇದನ್ನು ಅನ್ವಯಿಸುವಂತಿಲ್ಲ ಎಂದು ನ್ಯಾಯಾಲಯ ನುಡಿದಿದೆ.
“ಕಕ್ಷಿದಾರರು ಮುಸ್ಲಿಮ್ ಧರ್ಮೀಯರಲ್ಲ, ಆದ್ದರಿಂದ ನ್ಯಾಯಾಲಯವನ್ನು ಸಂಪರ್ಕಿಸದೆ ಪರಸ್ಪರ ಒಪ್ಪಿಗೆಯಿಂದ ಅವರು ಯಾವುದೇ ವಿಚ್ಛೇದನ ಪಡೆಯಲು ಸಾಧ್ಯವಿಲ್ಲ. ಅಂತಹ ಒಪ್ಪಂದವನ್ನು ನೋಟರಿ ಹೇಗೆ ಮಾನ್ಯಗೊಳಿಸಿತು ಎಂಬುದು ಸಹ ಕಳವಳದ ವಿಷಯವಾಗಿದೆ. ಪ್ರತ್ಯೇಕತೆಯ ಒಪ್ಪಂದವನ್ನು ಕಾರ್ಯಗತಗೊಳಿಸುವ ಮೂಲಕ ನೋಟರಿ ವಿಚ್ಛೇದನ ನೀಡಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಪ್ರತ್ಯೇಕತೆಯ ಒಪ್ಪಂದಕ್ಕೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇಲ್ಲವಾದ್ದರಿಂದ, ವಿಚ್ಛೇದನ ನಡೆದಿದೆ ಎಂದು ಹೇಳಲಾಗುವುದಿಲ್ಲ ಎಂಬುದಾಗಿ ನ್ಯಾಯಾಲಯ ಸ್ಪಷ್ಟಪಡಿಸಿದೆ.
ವಿಚ್ಛೇದನ ಪಡೆದಿದ್ದರೂ ವಿಚ್ಛೇದನಕ್ಕೆ ಮುಂಚಿತವಾಗಿ ಕ್ರೌರ್ಯ ನಡೆದಿದ್ದರೆ ಸಂತ್ರಸ್ತೆ ಐಪಿಸಿ ಸೆಕ್ಷನ್ 498-ಎ (ಗಂಡ ಅಥವಾ ಗಂಡನ ಸಂಬಂಧಿ ಮಹಿಳೆಯನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಬಹುದು ಎಂದು ಅದು ಹೇಳಿದೆ. "ಆದರೆ ಪ್ರಸ್ತುತ ಪ್ರಕರಣದಲ್ಲಿ ಆ ಪರಿಸ್ಥಿತಿ ಉದ್ಭವಿಸಿಲ್ಲ ಏಕೆಂದರೆ ಪಕ್ಷಕಾರರ ನಡುವೆ ಯಾವುದೇ ವಿಚ್ಛೇದನ ಉಂಟಾಗಿಲ್ಲ" ಎಂದು ನ್ಯಾಯಾಲಯ ತಿಳಿಸಿದೆ.
2022ರಲ್ಲಿ ದಂಪತಿ ವಿವಾಹಿತರಾಗಿದ್ದರು. ಮದುವೆ ವೇಳೆ ಸಾಕಷ್ಟು ವರದಕ್ಷಿಣೆ ನೀಡಲಾಗಿದ್ದರೂ ಗಂಡ ಹಾಗೂ ಆತನ ಮನೆಯವರು ತನಗೆ ಕಿರುಕುಳ ನೀಡುತ್ತಿದ್ದಾರೆ. ತನ್ನ ಮೇಲೆ ಹಲ್ಲೆ ನಡೆದಿದೆ, ತವರಿಗೆ ಮರಳುವಂತೆ ಒತ್ತಾಯಿಸಲಾಗಿದೆ ಎಂದು ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.
ಆದರೆ ಆರೋಪಗಳು ಸಾಮಾನ್ಯ ಸ್ವರೂಪದ್ದಾಗಿದ್ದು ಪತ್ನಿ ತನ್ನ ವಿರುದ್ಧ ಕಾನೂನಿನ ಮೊರೆ ಹೋಗುವುದಿಲ್ಲ ಎಂದು ಈಗಾಗಲೇ ಒಪ್ಪಂದ ಮಾಡಿಕೊಂಡಿರುವುದರಿಂದ ಪ್ರಕರಣ ರದ್ದುಗೊಳಿಸುವಂತೆ ಪತಿ ಕೋರಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಕಾನೂನು ಕ್ರಮ ಕೈಗೊಳ್ಳುವುದನ್ನು ನಿಷೇಧಿಸುವ ಯಾವುದೇ ಒಪ್ಪಂದ ಅನೂರ್ಜಿತ ಒಪ್ಪಂದವಾಗುವುದರಿಂದ ಮಾಡಿಕೊಳ್ಳಲಾಗಿರುವ ಒಪ್ಪಂದವು, ಒಡಂಬಡಿಕೆ ಕಾಯಿದೆಯ ಸೆಕ್ಷನ್ 28ಕ್ಕೆ ವಿರುದ್ಧವಾಗಿದೆ ಎಂದಿದೆ.
"ಇದಲ್ಲದೆ, ನಿರ್ದಿಷ್ಟ ಪರಿಹಾರ ಕಾಯಿದೆಯ ಸೆಕ್ಷನ್ 41ರ ಪ್ರಕಾರ, ಒಬ್ಬ ವ್ಯಕ್ತಿಯನ್ನು ಕಾನೂನು ಆಶ್ರಯ ಪಡೆಯದಂತೆ ತಡೆಯುವ ಯಾವುದೇ ನಿರ್ಬಂಧಕ ಆದೇಶ ನೀಡಲಾಗದು" ಎಂದು ಅದು ಹೇಳಿದೆ.
ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 11ರ ಅಡಿಯಲ್ಲಿ ವಿವಾಹ ಅನೂರ್ಜಿತಗೊಳಿಸುವಂತೆ ದೂರುದಾರರು ಸಲ್ಲಿಸಿದ ಅರ್ಜಿಯು ಪ್ರಕರಣದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದು ಎಂದು ನ್ಯಾಯಾಲಯ ಹೇಳಿದೆ. ಇದಕ್ಕೆ ತದ್ವಿರುದ್ಧವಾಗಿ ತನ್ನ ಎಫ್‌ಐಆರ್‌ನಲ್ಲಿ ದೂರುದಾರೆ ಮಾಡಿರುವ ಆರೋಪಗಳನ್ನು ಅದು ಬೆಂಬಲಿಸುತ್ತದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಎಫ್‌ಐಆರ್‌ನ ಅರ್ಹತೆಗೆ ಸಂಬಂಧಿಸಿದಂತೆ ನ್ಯಾಯಾಲಯವು ವರದಕ್ಷಿಣೆ ಬೇಡಿಕೆಯನ್ನು ಈಡೇರಿಸದ ಕಾರಣ ಕ್ರೌರ್ಯ ಎಸಗಿರುವ ನಿರ್ದಿಷ್ಟ ಆರೋಪಗಳಿವೆ ಎಂದು ಅರ್ಜಿ ತಿರಸ್ಕರಿಸಿತು.