ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರನ್ನು ರಕ್ಷಿಸುವ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, 2005 (ಡಿವಿ ಆಕ್ಟ್) ಕೌಟುಂಬಿಕ ವ್ಯವಸ್ಥೆಯ ರಕ್ಷಣೆಗೆ ಹಾಗೂ ಪ್ರೋತ್ಸಾಹಕ್ಕೆ ಇರುವ ವಿಶೇಷ ಶಾಸನವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಭಾರತೀಯ ವಿಚ್ಛೇದನ ಕಾಯಿದೆಯಡಿ ವಿಚ್ಛೇದನ ಪ್ರಕ್ರಿಯೆಗಳು ಬಾಕಿ ಉಳಿದಿದ್ದರೂ ಮಕ್ಕಳ ತಾತ್ಕಾಲಿಕ ಪಾಲನೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಈ ಕಾಯಿದೆಯ ಸೆಕ್ಷನ್ 21 ರಡಿ ನಿಭಾಯಿಸಬಹುದು ಎಂದು ನ್ಯಾಯಾಲಯವು ಇತ್ತೀಚೆಗೆ ಪ್ರಕರಣದ ವಿಚಾರಣೆಯೊಂದರ ವೇಳೆ ಹೇಳಿತು.
ಡಿವಿ ಕಾಯಿದೆಯ ಸೆಕ್ಷನ್ 21ಅನ್ನು ಓದಿದರೆ ಅದು ಇತರೆ ಕಾನೂನುಗಳನ್ನು ಮೀರುವುದು ತಿಳಿಯುತ್ತದೆ. ಹಾಗಾಗಿ, ಮಕ್ಕಳನ್ನು ತಾತ್ಕಾಲಿಕವಾಗಿ ಅಧೀನಕ್ಕೆ ನೀಡುವುದಕ್ಕೆ ವಿಚ್ಛೇದನ ಕಾಯಿದೆ ಅಥವಾ ಪೋಷಕರು ಮತ್ತು ಮಕ್ಕಳ ಕಾಯಿದೆಯಡಿ ಮಾತ್ರವೇ ಸಾಧ್ಯ ಎನ್ನುವ ವಾದದಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಕೌಟುಂಬಿ ದೌರ್ಜನ್ಯ ತಡೆ ಕಾಯಿದೆಯು ಕೌಟುಂಬಿಕ ಸಂಬಂಧಗಳು ಹಾಗೂ ಕೌಟುಂಬಿಕ ವ್ಯವಸ್ಥೆಯನ್ನು ಉತ್ತೇಜಿಸುವ ಸಲುವಾಗಿ ಇರುವ ವಿಶೇಷ ಕಾನೂನಾಗಿದೆ. ಈ ಕಾನೂನು ವಿವಿಧ ಸಿವಿಲ್ ಕಾನೂನುಗಳಾದ ಪೋಷಕರು ಮತ್ತು ಮಕ್ಕಳ ಕಾಯಿದೆ, ಹಿಂದೂ ಅಲ್ಪಸಂಖ್ಯಾತರು ಮತ್ತು ಪಾಲಕರ ಕಾಯಿದೆ, ಹಿಂದೂ ವಿವಾಹ ಕಾಯಿದೆ ಹಾಗೂ ಕ್ರಿಮಿನಲ್ ಕಾನೂನುಗಳಾದ 361, 498-ಎ ರೀತಿಯ ಅಪರಾಧ ಕಾನೂನುಗಳು ಅಥವಾ ಭಾರತೀಯ ದಂಡ ಸಂಹಿತೆಯಡಿಯ ಅಪರಾಧಗಳ ನಡುವಿನ ಮಧ್ಯಸ್ಥ ಕಾನೂನಾಗಿದೆ ಎಂದು ನ್ಯಾ. ಕೆ ಎಸ್ ಮುದ್ಗಲ್ ಅವರಿದ್ದ ಏಕಸದಸ್ಯ ಪೀಠ ಬಣ್ಣಿಸಿದೆ.
ವಿಚ್ಛೇದಿತ ಪತ್ನಿಯ ಸುಪರ್ದಿಗೆ ತನ್ನ ಮಕ್ಕಳನ್ನು ನೀಡುವಂತೆ ಅಧೀನ ನ್ಯಾಯಾಲಯ ಹೊರಡಿಸಿದ್ದ ಆದೇಶ ರದ್ದುಗೊಳಿಸಲು ಕೋರಿ ಪತಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
2011ರಲ್ಲಿ ವಿವಾಹವಾಗಿದ್ದ ದಂಪತಿಗೆ 2012ರಲ್ಲಿ ಮಗಳು ಮತ್ತು 2015ರಲ್ಲಿ ಮಗ ಜನಿಸಿದ್ದರು. ತರುವಾಯ ಗಂಡ ಮತ್ತು ಹೆಂಡತಿ ಸಂಬಂಧ ಹದಗೆಟ್ಟಿತ್ತು. ಪತಿ ವಿರುದ್ಧ ಕೌಟುಂಬಿಕ ಹಿಂಸಾಚಾರ ಕಾಯಿದೆಯ ಸೆಕ್ಷನ್ 12 ರ ಅಡಿಯಲ್ಲಿ ಪತ್ನಿ ಮಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು. ಎರಡೂ ಕಡೆಯ ವಾದ ಆಲಿಸಿದ ಬಳಿಕ ವಿಚಾರಣಾ ನ್ಯಾಯಾಲಯ ಹೆಂಡತಿಯ ಸುಪರ್ದಿಗೆ ಮಕ್ಕಳನ್ನು ಒಪ್ಪಿಸುವಂತೆ ಸೂಚಿಸಿ ಆದೇಶ ಹೊರಡಿಸಿತ್ತು. ಇದನ್ನು ಪತಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ “ಕೌಟುಂಬಿಕ ದೌರ್ಜನ್ಯ ಕಾಯಿದೆಯ ಸೆಕ್ಷನ್ 21 ಬೇರೆ ಕಾನೂನುಗಳನ್ನು ಮೀರುವ ಪರಿಣಾಮ ಹೊಂದಿದೆ. ಆದ್ದರಿಂದ ಮಕ್ಕಳನ್ನು ತಾತ್ಕಾಲಿಕವಾಗಿ ಅಧೀನಕ್ಕೆ ನೀಡುವ ಭಾರತೀಯ ವಿಚ್ಛೇದನ ಕಾಯಿದೆ ಅಥವಾ ಪೋಷಕರು ಮತ್ತು ಮಕ್ಕಳ ಕಾಯಿದೆಯಡಿ ಮಾತ್ರವೇ ವಿಚಾರಣೆಗೆ ಒಳಪಡಿಸಬಹುದು ಎಂಬ ಅರ್ಜಿದಾರರ ವಾದದಲ್ಲಿ ಹುರುಳಿಲ್ಲ“ ಎಂದಿದೆ.
ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಮ್ಯಾಜಿಸ್ಟ್ರೇಟ್ ಜಾರಿಗೊಳಿಸಿದ ಯಾವುದೇ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬಹುದು ಎಂದು ಕಾಯಿದೆಯ ಸೆಕ್ಷನ್ 29 ಹೇಳುತ್ತದೆ ಎಂದಿರುವ ನ್ಯಾಯಾಲಯ ವಿಚಾರಣಾ ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯೊಂದು ಬಾಕಿ ಇದ್ದರೂ ಪತಿ ಈ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಾನೂನಾತ್ಮಕ ಹೋರಾಟ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ವಿಚಾರಣಾ ನ್ಯಾಯಾಲಯದಲ್ಲಿಯೇ ತೀರ್ಪು ಪಡೆಯಲು ಅವರು ಬಯಸಿದ್ದರೆ ಈ ಹೊತ್ತಿಗೆ ಪ್ರಕರಣವನ್ನು ವಿಲೇವಾರಿ ಮಾಡಬಹುದಿತ್ತು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಿಚ್ಛೇದನಕ್ಕಾಗಿ ಸಲ್ಲಿಸಿರುವ ಅರ್ಜಿ ಬಾಕಿ ಇದ್ದರೂ ಕೌಟುಂಬಿಕ ಹಿಂಸಾಚಾರ ಕಾಯಿದೆಯಡಿ ಸಲ್ಲಿಸಲಾದ ಅರ್ಜಿ ಕುರಿತು ತೀರ್ಪು ನೀಡಲು ನ್ಯಾಯಾಧೀಶರಿಗೆ ಅಡ್ಡಿಯಾಗದು ಎಂದು ಕೂಡ ಹೈಕೋರ್ಟ್ ವಿವರಿಸಿದೆ.
ವಿವಿಧ ಪೂರ್ವನಿದರ್ಶನಗಳನ್ನು ಉಲ್ಲೇಖಿಸಿದ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ವಿಚಾರಣೆ ರದ್ದುಗೊಳಿಸುವ ಅಧಿಕಾರವನ್ನು ಮಿತವಾಗಿ ಬಳಸಬೇಕಾಗಿದೆ. ಇಂತಹ ಅರ್ಜಿಯನ್ನು ನಿರ್ಧರಿಸುವಾಗ, ನ್ಯಾಯಾಲಯವು ವಿಚಾರಣೆ ನಡೆಸಲು ಅಥವಾ ವಿಚಾರಣಾ ನ್ಯಾಯಾಲಯದ ಮುಂದೆ ಬಾಕಿ ಇರುವ ಪ್ರಕರಣದ ಅರ್ಹತೆಗಳ ಬಗ್ಗೆ ವಿಚಾರಣೆ ಪ್ರಾರಂಭಿಸಲು ಸಾಧ್ಯವಿಲ್ಲ ಎಂದು ಪೀಠ ಹೇಳಿದೆ.
ಆದ್ದರಿಂದ ವಿವಾಹ ಪ್ರಕರಣಗಳ ವಿಚಾರಣೆ ಬಾಕಿ ಇರುವಾಗ ಮಕ್ಕಳ ಪಾಲನೆ ಕುರಿತಂತೆ ಅಥವಾ ಕೌಟುಂಬಿಕ ದೌರ್ಜನ್ಯ ಕಾಯಿದೆಯ ಸೆಕ್ಷನ್ 12ರ ಅಡಿ ಸಲ್ಲಿಸಲಾದ ಅರ್ಜಿಯ ತೀರ್ಪು ನೀಡುವ ನ್ಯಾಯವ್ಯಾಪ್ತಿ ನ್ಯಾಯಾಧೀಶರಿಗೆ ಇಲ್ಲ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ” ಎಂಬ ಆಧಾರದಲ್ಲಿ ಜೆಎಂಎಫ್‌ಸಿ ಆದೇಶ ರದ್ದತಿ ಕೋರಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಲಿಲ್ಲ.