ದೆಹಲಿ ಹೈಕೋರ್ಟ್
ದೆಹಲಿ ಹೈಕೋರ್ಟ್ 
ಸುದ್ದಿಗಳು

ಕೌಟುಂಬಿಕ ದೌರ್ಜನ್ಯ ಕಾಯಿದೆ ಸಂತ್ರಸ್ತರ ಸಂತೈಕೆಗೆ ಇದೆ, ಜೀವನಾಂಶ ನೀಡದವರನ್ನು ಜೈಲಿಗಟ್ಟಲು ಅಲ್ಲ: ದೆಹಲಿ ಹೈಕೋರ್ಟ್

Bar & Bench

ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣಾ ಕಾಯಿದೆ (ಡಿವಿ ಕಾಯಿದೆ) ಅಡಿಯಲ್ಲಿ ಜೀವನಾಂಶ ನೀಡುವುದರ ಉದ್ದೇಶ ಕೌಟುಂಬಿಕ ಹಿಂಸಾಚಾರಕ್ಕೆ ತುತ್ತಾದ ಸಂತ್ರಸ್ತರನ್ನು ಮೇಲೆತ್ತುವುದಾಗಿದೆಯೇ ವಿನಾ ಜೀವನಾಂಶ ಪಾವತಿಸವದರನ್ನು ಜೈಲಿಗಟ್ಟುವಲ್ಲಿ ಇದರ ಪಾತ್ರ ಕಡಿಮೆ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.

ಕಾಯಿದೆಯ ಸೆಕ್ಷನ್ 20ರ ಅಡಿಯಲ್ಲಿ ನ್ಯಾಯಾಲಯ ಆದೇಶಿಸಿದ ಜೀವನಾಂಶ ಪಾವತಿಸಲು ವಿಫಲವಾದ ವ್ಯಕ್ತಿಗಳಿಗೆ ಕಾಯಿದೆಯ ಸೆಕ್ಷನ್ 31ರ ಅಡಿ ವಿಚಾರಣಾ ನ್ಯಾಯಾಲಯ ಸಮನ್ಸ್ ನೀಡುವಂತಿಲ್ಲ ಎಂದು ತೀರ್ಪು ನೀಡುವಾಗ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸೆಕ್ಷನ್ 31 "ರಕ್ಷಣಾ ಆದೇಶಗಳ" ಉಲ್ಲಂಘನೆಯ ಬಗ್ಗೆ ಮಾತ್ರ ವ್ಯವಹರಿಸುತ್ತದೆ, ಇದು ಕಾಯಿದೆಯ ಸೆಕ್ಷನ್ 20 ರ ಅಡಿಯಲ್ಲಿನ ಜೀವನಾಂಶದ "ವಿತ್ತೀಯ" ಪರಿಹಾರಕ್ಕಿಂತ ಭಿನ್ನವಾಗಿದೆ ಎಂದು ನ್ಯಾಯಮೂರ್ತಿ ಸ್ವರಣ ಕಾಂತಾ ಶರ್ಮಾ ವಿವರಿಸಿದರು.

 "ಪಿಡಬ್ಲ್ಯೂಡಿವಿ ಕಾಯಿದೆಯ ಸೆಕ್ಷನ್ 20ರ ಅಡಿಯಲ್ಲಿ ಘೋಷಿಸಲಾದ ಜೀವನಾಂಶ ಪಾವತಿಯ ಆದೇಶದಂತಹ ವಿತ್ತೀಯ ಆದೇಶವನ್ನು ಪಾಲಿಸದ ವ್ಯಕ್ತಿಗೆ ಕಾಯಿದೆಯ ಸೆಕ್ಷನ್ 31ರ ಅಡಿಯಲ್ಲಿ (ಕ್ರಿಮಿನಲ್ ನ್ಯಾಯಾಲಯದಿಂದ) ಸಮನ್ಸ್‌ ನೀಡುವಂತಿಲ್ಲ" ಎಂದು ನ್ಯಾಯಾಲಯ ಹೇಳಿದೆ.

ಜೀವನಾಂಶ ಪಾವತಿಸುವಲ್ಲಿನ ಲೋಪಕ್ಕಾಗಿ ಹಣ ಪಾವತಿಸದವರನ್ನು ನೇರವಾಗಿ ಕೈದಿಗಳನ್ನಾಗಿಸುವ ಉದ್ದೇಶ ಕಾಯಿದೆಯದ್ದಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.

"ಜೀವನಾಂಶ ಪಾವತಿಸದವರನ್ನು ಜೈಲುಗಳಿಗೆ ಕಳುಹಿಸುವ ಬದಲು, ಕೌಟುಂಬಿಕ ಹಿಂಸಾಚಾರದ ಸಂತ್ರಸ್ತರಿಗೆ ರಕ್ಷಣೆ, ಪುನರ್ವಸತಿ ಹಾಗೂ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದು ಈ ಕಾಯಿದೆಯ ಉದ್ದೇಶವಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ವಿತ್ತೀಯ ಆದೇಶಗಳನ್ನು ಜಾರಿಗೊಳಿಸುವ ಹಿಂದಿನ ಉದ್ದೇಶ ಸಂತ್ರಸ್ತರಿಗೆ ವಿತ್ತೀಯ ಪೋಷಣೆ ಒದಗಿಸುವುದಾಗಿದ್ದು ಜೀವನಾಂಶ ನೀಡದವರನ್ನು ಸೆರೆಗೆ ತಳ್ಳುವುದಲ್ಲ. ಜೀವನಾಂಶವನ್ನು ಪಾವತಿಸದ ಕಾರಣ ಕಾಯಿದೆಯಲ್ಲಿ ವ್ಯಾಖ್ಯಾನಿಸಿದಂತೆ ಆಕ್ರಮಣಕಾರನ ವಿರುದ್ಧ ಅಂದರೆ ಪ್ರತಿವಾದಿಯ ವಿರುದ್ಧ ತಕ್ಷಣ ಕ್ರಿಮಿನಲ್ ಕ್ರಮ ಜರುಗಿಸುವುದು ಮತ್ತು ಅಂತಹ ವ್ಯಕ್ತಿಯನ್ನು ತಕ್ಷಣ ಜೈಲಿಗೆ ಕಳುಹಿಸುವುದು ಇದರ ಉದ್ದೇಶವಲ್ಲ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾಯಿದೆಯಡಿ ವಿತ್ತೀಯ ಪರಿಹಾರ ಅಥವಾ ಜೀವನಾಂಶ ಪಾವತಿಸಲು ವಿಫಲವಾದರೆ ಬೇರೆ ಪರಿಹಾರಗಳಿವೆ ಎಂದು ಅದು ವಿವರಿಸಿದೆ. ಸಂಬಳ ಪಡೆಯುವ ವ್ಯಕ್ತಿಗಳು ಜೀವನಾಂಶ ನೀಡದಿದ್ದಾಗ ಅವರಿಗೆ ಉದ್ಯೋಗ ನೀಡಿದವರ ಅಥವಾ ಸಾಲ ಪಡೆದವರಿಂದ ಆ ಜೀವನಾಂಶವನ್ನು ಸಂತ್ರಸ್ತರಿಗಾಗಿ ವಸೂಲಿ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ಉಳಿದ ಪ್ರಕರಣಗಳಲ್ಲಿ, ಸಂತ್ರಸ್ತರಿಗೆ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಅಡಿಯಲ್ಲಿ ಪರಿಹಾರ ನೀಡಬಹುದಾಗಿದೆ ಎಂದು ಕೂಡ ಅದು ಸ್ಪಷ್ಟಪಡಿಸಿದೆ.

ಆ ಮೂಲಕ, ವಿಚ್ಛೇದಿತ ಪತ್ನಿಗೆ ಮಧ್ಯಂತರ ಜೀವನಾಂಶ ಪಾವತಿಸಲು ವಿಫಲವಾದ ವ್ಯಕ್ತಿಗೆೆ (ಅರ್ಜಿದಾರ) ಕಾಯಿದೆಯ ಸೆಕ್ಷನ್ 31 (1) ರ ಅಡಿಯಲ್ಲಿ ಸಮನ್ಸ್ ನೀಡಿದ್ದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಅದು ರದ್ದುಗೊಳಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Delhi High Court judgment.pdf
Preview