ಪತಿಗೆ ಕಿರುಕುಳ ನೀಡುವ ಉದ್ದೇಶದಿಂದ ಪತ್ನಿಯು ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಿದ್ದಾರೆ ಎಂಬ ವಿಚಾರವು ಕೌಟುಂಬಿಕ ದೌರ್ಜನ್ಯ ಕಾಯಿದೆ ಮತ್ತು ವಿವಾಹದ ಕುರಿತು ಮದ್ರಾಸ್ ಹೈಕೋರ್ಟ್ ಆಸಕ್ತಿಕರ ಅಭಿಪ್ರಾಯ ವ್ಯಕ್ತಪಡಿಸಲು ಪ್ರೇರೇಪಿಸಿತು.
“ಮೇಲ್ನೋಟಕ್ಕೆ ಕಾಣಿಸುವುದೇನೆಂದರೆ ಎರಡನೇ ಪ್ರತಿವಾದಿ (ದೂರುದಾರೆ ಪತ್ನಿ/ಅರ್ಜಿದಾರರ ಪತ್ನಿ) ಅನವಶ್ಯಕವಾಗಿ ಅರ್ಜಿದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ದುರಂತವೆಂದರೆ ಪತ್ನಿಯ ವಿರುದ್ಧ ದಾವೆ ಹೂಡಲು ಪತಿಗೆ ಕೌಟುಂಬಿಕ ದೌರ್ಜನ್ಯ ಕಾಯಿದೆಯಂತಹ ಕಾನೂನು ಇಲ್ಲ. ಕೌಟುಂಬಿಕ ನ್ಯಾಯಾಲಯವು ವಿಚ್ಚೇದನ ಆದೇಶ ನೀಡುವುದಕ್ಕೆ ನಾಲ್ಕು ದಿನಗಳ ಮುಂಚೆ ದೂರು ನೀಡಲಾಗಿದೆ. ಇದರಿಂದ ಸ್ಪಷ್ಟವಾಗುವುದೇನೆಂದರೆ ಎರಡನೇ ಪ್ರತಿವಾದಿಗೆ ವಿಚ್ಚೇದನ ಆದೇಶದ ನಿರೀಕ್ಷೆ ಇದ್ದು, ಅರ್ಜಿದಾರರಿಗೆ ಅನಗತ್ಯ ಸಮಸ್ಯೆ ಉಂಟು ಮಾಡಿದ್ದಾರೆ” ಎಂದು ಮಾರ್ಚ್ 31ರಂದು ಹೊರಡಿಸಲಾದ ಆದೇಶದಲ್ಲಿ ನ್ಯಾಯಮೂರ್ತಿ ಎಸ್ ವೈದ್ಯನಾಥನ್ ಅವರಿದ್ದ ಏಕಸದಸ್ಯ ಪೀಠವು ಹೇಳಿದೆ.
“ವಿವಾಹವೆನ್ನುವುದು ಕರಾರು ಅಲ್ಲ, ಅದು ಪವಿತ್ರವಾದ ಸಂಬಂಧ ಎಂಬುದನ್ನು ಇಂದಿನ ತಲೆಮಾರಿನ ಜನರು ಅರ್ಥ ಮಾಡಿಕೊಳ್ಳಬೇಕಿದೆ. ಲಿವ್ ಇನ್ ಸಂಬಂಧಕ್ಕೆ ಅನುಮತಿಸುವ ಕೌಟುಂಬಿಕ ದೌರ್ಜನ್ಯ ಕಾಯಿದೆ 2005 ಜಾರಿಗೆ ಬಂದ ಮೇಲೆ ʼಪವಿತ್ರʼ ಎಂಬ ಪದ ಅರ್ಥ ಕಳೆದುಕೊಂಡಿದೆ. ʼಪ್ರತಿಷ್ಠೆʼ ಮತ್ತು ʼಅಸಹಿಷ್ಣುತೆʼ ಚಪ್ಪಲಿಯಂತೆ, ಅವುಗಳನ್ನು ಮನೆಯಿಂದ ಹೊರಗಿಡಬೇಕು. ಅವು ಮನೆ ಪ್ರವೇಶಿಸಿದರೆ ಮಕ್ಕಳು ಕಷ್ಟಮಯವಾದ ಬದುಕು ಅನುಭವಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಕೌಟುಂಬಿಕ ವಿಚಾರದ ಹಿನ್ನೆಲೆಯಲ್ಲಿ ಪತ್ನಿ ದೂರು ದಾಖಲಿಸಿದ್ದರಿಂದ ಕೆಲಸದಿಂದ ಅಮಾನತುಗೊಂಡಿದ್ದ ವ್ಯಕ್ತಿ ತನ್ನನ್ನು ಮರು ನೇಮಕ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.
ಪತ್ನಿಯು ದೌರ್ಜನ್ಯ ನಡೆಸಿದ್ದು ಮತ್ತು ಸ್ವಯಂಪ್ರೇರಿತವಾಗಿ ಆಕೆ ತನ್ನನ್ನು ತೊರೆದಿರುವುದರಿಂದ ವಿಚ್ಛೇದನ ನೀಡುವಂತೆ ಅರ್ಜಿದಾರ ಸಲ್ಲಿಸಿದ್ದ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ಒಪ್ಪಿಕೊಂಡಿದ್ದನ್ನು ನ್ಯಾಯಾಲಯ ಗುರುತಿಸಿದೆ. ಕೌಟುಂಬಿಕ ನ್ಯಾಯಾಲಯ ತೀರ್ಪು ನೀಡುವ ಕೆಲವು ದಿನಗಳ ಮುಂಚೆ ಪತ್ನಿಯು ಅರ್ಜಿದಾರರ ವಿರುದ್ಧ ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಿದ್ದಾರೆ.
ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಮನವಿಯಲ್ಲಿ ಪತ್ನಿಯನ್ನು ಪ್ರತಿವಾದಿಯನ್ನಾಗಿಸಲಾಗಿದ್ದು, ಅವರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರೂ ನ್ಯಾಯಾಲಯದ ಮುಂದೆ ಹಾಜರಾಗಿಲ್ಲ. ಹೀಗಾಗಿ, ಪತ್ನಿಯು ಅರ್ಜಿದಾರರಿಗೆ ಕಿರುಕುಳ ನೀಡುವ ಉದ್ದೇಶ ಹೊಂದಿರಬಹುದು ಎಂದು ಪೀಠ ಹೇಳಿದ್ದು, ಅರ್ಜಿದಾರರನ್ನು 15 ದಿನಗಳ ಒಳಗೆ ಕರ್ತವ್ಯಕ್ಕೆ ಮರು ನೇಮಿಸುವಂತೆ ನ್ಯಾಯಮೂರ್ತಿ ವೈದ್ಯನಾಥನ್ ಆದೇಶಿಸಿದ್ದಾರೆ.
ಪತಿಯ ವಿರುದ್ಧ ದೂರು ನೀಡಿರುವುದಕ್ಕೆ ಸಂಬಂಧಿಸಿದಂತೆ ಅರ್ಜಿದಾರ ಅಪರಾಧಿಯೋ ಅಥವಾ ಅಲ್ಲವೋ ಎಂಬುದನ್ನು ಸಂಬಂಧಪಟ್ಟ ನ್ಯಾಯಾಲಯ ನಿರ್ಧಾರ ಮಾಡಲಿದೆ. ಹೀಗಾಗಿ, ಅರ್ಜಿದಾರರನ್ನು ಕೆಲಸದಿಂದ ಅಮಾನತಿನಲ್ಲಿಡುವುದು ಸರಿಯಲ್ಲ ಎಂದು ಪೀಠ ಹೇಳಿದೆ. “ಒಂದೊಮ್ಮೆ ಪ್ರಕರಣವು ರಾಜಿಯಾದರೆ ಅಥವಾ ಅರ್ಜಿದಾರರು ಎಲ್ಲಾ ಆರೋಪಗಳಿಂದ ಖುಲಾಸೆಗೊಂಡರೆ, ಈಗಾಗಲೇ ಕೌಟುಂಬಿಕ ನ್ಯಾಯಾಲಯ ತನ್ನ ಆದೇಶದಲ್ಲಿ ಎರಡನೇ ಪ್ರತಿವಾದಿಯು ದೌರ್ಜನ್ಯ ಎಸಗಿದ್ದು, ಆಕೆಯೇ ತೊರೆದಿದ್ದಾಳೆ ಎಂದಿರುವುದರಿಂದ ಅರ್ಜಿದಾರರಿಂದ ಯಾವುದೇ ಕೆಲಸ ಮಾಡಿಸದೆ ಅವರಿಗೆ ಸರ್ಕಾರವು ವೇತನ ಪಾವತಿಸಬೇಕು” ಎಂದು ನ್ಯಾಯಾಲಯ ಆದೇಶಿಸಿತು.