ಕೌಟುಂಬಿಕ ಸಂಬಂಧ ಹೊಂದಿರುವ ಪ್ರತಿ ಮಹಿಳೆಗೂ ತನ್ನ ಪತಿಯ ಮರಣದ ನಂತರವೂ ಗಂಡನ ಅವಿಭಜಿತ ಮನೆಯಲ್ಲಿ (ಶೇರ್ಡ್ ಹೌಸ್‌ಹೋಲ್ಡ್ - ಪತಿಯು ಇತರ ಸದಸ್ಯರೊಂದಿಗೆ ವಾಸವಿದ್ದ ಸ್ಥಳ) ವಾಸಿಸುವ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಗಂಡನ ಮನೆಯಲ್ಲಿ ವಾಸವಿದ್ದರೂ, ಇಲ್ಲದಿದ್ದರೂ ಈ ಹಕ್ಕನ್ನು ಮಹಿಳೆ ಪ್ರತಿಪಾದಿಸಬಹುದು ಎಂದು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನಅವರಿದ್ದ ಪೀಠ ಹೇಳಿತು.
"ವೈವಾಹಿಕ ಸಂಬಂಧಗಳು ರದ್ದಾಗಿದ್ದರೂ, ಸಂತ್ರಸ್ತ ಮಹಿಳೆಗೂ ಮತ್ತು ಯಾರಿಂದ ಪರಿಹಾರ ಪಡೆದುಕೊಳ್ಳಲಾಗಿದೆಯೋ ಆ ಪ್ರತಿವಾದಿಯ ನಡುವೆ ಯಾವುದೇ ಕೌಟುಂಬಿಕ ಸಂಬಂಧ ಇಲ್ಲದಿದ್ದರೂ, ಕೌಟುಂಬಿಕ ಹಿಂಸಾಚಾರದ ಕೃತ್ಯ ಕೌಟುಂಬಿಕ ಸಂಬಂಧ ಇದ್ದ ಅವಧಿಗೆ ಮಾತ್ರವೇ ಸೀಮಿತವಾಗಿದ್ದಾಗಲೂ, ಈ ಎಲ್ಲ ಸಂದರ್ಭಗಳಲ್ಲಿ ಕೂಡ ಕೌಟುಂಬಿಕ ಹಿಂಸಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆ ಕೌಟುಂಬಿಕ ಹಿಂಸಾಚಾರ ಕಾಯಿದೆಯಡಿ ಪರಿಹಾರ ಪಡೆಯಬಹುದು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಕಕ್ಷೀದಾರರ ನಡುವಿನ ಕೌಟುಂಬಿಕ ಸಂಬಂಧ ನಿರ್ಧರಿಸಲು, ನ್ಯಾಯಾಲಯಗಳು ವರ್ತಮಾನದಲ್ಲಿ ಅಸ್ತಿತ್ವದಲ್ಲಿರುವ ಸಂಬಂಧಗಳನ್ನು ಮಾತ್ರವಲ್ಲದೆ ಹಿಂದಿನ ಕೌಟುಂಬಿಕ ಸಂಬಂಧಗಳನ್ನು ಪರಿಗಣಿಸಬೇಕು ಎಂದು ಅದು ಇದೇ ವೇಳೆ ಒತ್ತಿ ಹೇಳಿದೆ.
ಅಂತೆಯೇ ಮೇಲ್ಮನವಿದಾರರು ವಿವಾಹದ ಕಾರಣಕ್ಕೆ ದತ್ತವಾದ ಕೌಟುಂಬಿಕ ಸಂಬಂಧವನ್ನು ಮುಂದುವರೆಸಬಹುದು ಮತ್ತು ಸೊಸೆಯಾಗಿರುವುದರಿಂದ ಗಂಡನ ಮನೆಯಲ್ಲಿ ವಾಸಿಸುವ ಹಕ್ಕು ಅವರಿಗೆ ಇದೆ ಎಂದ ನ್ಯಾಯಾಲಯ ಈ ಸಂಬಂಧ ಹೈಕೋರ್ಟ್ ಮತ್ತು ಸೆಷನ್ಸ್ ಕೋರ್ಟ್‌ಗಳು ಈ ಹಿಂದೆ ನೀಡಿದ್ದ ತೀರ್ಪುಗಳು ತಪ್ಪು ಎಂದು ಅಭಿಪ್ರಾಯಪಟ್ಟು ಅವುಗಳನ್ನು ರದ್ದುಗೊಳಿಸಿತು. ಆದರೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿದ್ದ ಆದೇಶವನ್ನು ಎತ್ತಿ ಹಿಡಿಯಿತು.