Justice M Nagaprasanna 
ಸುದ್ದಿಗಳು

ಪುತ್ರ, ಮೊಮ್ಮಗಳಿಗೆ ಕಾಫಿ ಎಸ್ಟೇಟ್‌ ದಾನ ಪತ್ರ: ಜೀವನಕ್ಕೆ ತಾಯಿಗೆ ವಾರ್ಷಿಕ ₹7 ಲಕ್ಷ ಪಾವತಿಗೆ ಹೈಕೋರ್ಟ್‌ ನಿರ್ದೇಶನ

ತನ್ನ 22 ಎಕರೆ ಜಮೀನನ್ನು ಪುತ್ರ ಹಾಗೂ ಮೊಮ್ಮಗಳಿಗೆ ಉಡುಗೊರೆಯಾಗಿ ನೀಡಿದ್ದ ವೇಳೆ ಅರ್ಜಿದಾರರ ಜೀವನ ನಿರ್ವಹಣೆಗಾಗಿ ತಲಾ ರೂ. ಏಳು ಲಕ್ಷ ಹಣ ಬ್ಯಾಂಕಿನಲ್ಲಿ ಠೇವಣಿ ಇಡುವುದಾಗಿ ಪುತ್ರ ಹಾಗೂ ಮೊಮ್ಮಗಳು ಭರವಸೆ ನೀಡಿದ್ದರು‌‌.

Bar & Bench

ಇಪ್ಪತ್ತೆರಡು ಎಕರೆ ಕಾಫಿ ಎಸ್ಟೇಟ್ಅನ್ನು ದಾನಪತ್ರದ ಮೂಲಕ‌ ಉಡುಗೊರೆಯಾಗಿ ನೀಡಿದ್ದ 85 ವರ್ಷದ ವೃದ್ಧ ತಾಯಿಗೆ ಜೀವನ ನಿರ್ವಹಣೆಗಾಗಿ ವಾರ್ಷಿಕ ತಲಾ ₹7 ಲಕ್ಷ ಹಣ ಪಾವತಿಸುವಂತೆ ಆಕೆಯ ಪುತ್ರ ಮತ್ತು ಮೊಮ್ಮಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.

ಅಪ್ಪರಂಡ ಶಾಂತಿ ಬೋಪಣ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ತನ್ನ 22 ಎಕರೆ ಜಮೀನನ್ನು ಪುತ್ರ ಹಾಗೂ ಮೊಮ್ಮಗಳಿಗೆ ಉಡುಗೊರೆಯಾಗಿ ನೀಡಿದ್ದ ವೇಳೆ ಅರ್ಜಿದಾರರ ಜೀವನ ನಿರ್ವಹಣೆಗಾಗಿ ತಲಾ ₹7 ಲಕ್ಷ ಹಣ ಬ್ಯಾಂಕಿನಲ್ಲಿ ಠೇವಣಿ ಇಡುವುದಾಗಿ ಪುತ್ರ ಹಾಗೂ ಮೊಮ್ಮಗಳು ಭರವಸೆ ನೀಡಿದ್ದರು‌‌. ಅದಾಗ್ಯೂ ಹಣ ಪಾವತಿಸದ ಹಿನ್ನೆಲೆಯಲ್ಲಿ ಮೇಲಿನಂತೆ ಆದೇಶ ಮಾಡಿದೆ.

ಅರ್ಜಿದಾರರಾದ ಅಪ್ಪರಂಡ ಶಾಂತಿ ಬೋಪಣ್ಣ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ತಾವು ಹೊಂದಿದ್ದ 22 ಎಕರೆ ಜಮೀನನ್ನು ಪುತ್ರ ಹಾಗೂ ಮೊಮ್ಮಗಳಿಗೆ 2016ರಲ್ಲಿ ದಾನ ಪತ್ರ (ಗಿಫ್ಟ್‌ ಡೀಡ್‌) ಮುಖೇನ ನೀಡಿದ್ದರು. ಈ ವೇಳೆ ಆಕೆಯ ಜೀವನ ನಿರ್ವಹಣೆಗಾಗಿ ವಾರ್ಷಿಕ ತಲಾ ಏಳು ಲಕ್ಷ ಹಣ ಬ್ಯಾಂಕಿನಲ್ಲಿ ಠೇವಣಿ ಇಡುವುದಾಗಿ ಪುತ್ರ ಹಾಗೂ ಮೊಮ್ಮಗಳು ಭರವಸೆ ನೀಡಿದ್ದರು. ಆ ಪ್ರಕಾರ 2016ರಿಂದ 2019ರವರೆಗೆ ಹಣ ಪಾವತಿಸಿದ್ದರು. ತದನಂತರ ಹಣ ನೀಡಿರಲಿಲ್ಲ.

ಈ ಕುರಿತು ವಿಚಾರಣೆ ನಡೆಸಿದಾಗ ಆಸ್ತಿಯನ್ನು ಮಾರಾಟ ಮಾಡಲು ಮಗ ಮತ್ತು ಮೊಮ್ಮಗಳು ಪ್ರಯತ್ನಿಸುತ್ತಿರುವ ಸಂಗತಿ ತಿಳಿಯಿತು. ಇದರಿಂದ ಗಿಫ್ಟ್‌ ಡೀಡ್‌ ಅನ್ನು ರದ್ದುಪಡಿಸುವಂತೆ ಕೋರಿ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯಿದೆ-2007ರ ಅಡಿಯಲ್ಲಿ 2019ರಲ್ಲಿ ಉಪ ವಿಭಾಗಾಧಿಕಾರಿ ಮುಂದೆ ಅರ್ಜಿದಾರರು ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಉಪ ವಿಭಾಗಾಧಿಕಾರಿ ದಾನ ಕರಾರನ್ನು ರದ್ದುಗೊಳಿಸಿ 2021ರ ಸೆಪ್ಟೆಂಬರ್‌ 15ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮಗ ಮತ್ತು ಮೊಮ್ಮಗಳು, ಜಿಲ್ಲಾ ದಂಡಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದರು. 2023ರ ಮಾರ್ಚ್‌ 23ರಂದು ಉಪವಿಭಾಗಾಧಿಕಾರಿ ಆದೇಶ ರದ್ದುಪಡಿಸಿದ್ದ ಜಿಲ್ಲಾ ದಂಡಾಧಿಕಾರಿಯು ಪುತ್ರ ಹಾಗೂ ಮೊಮ್ಮಗಳ ಆಸ್ತಿ ಹಕ್ಕನ್ನು ಮರು ಸ್ಥಾಪಿಸಲು ಆದೇಶಿಸಿದ್ದರು. ಜೊತೆಗೆ, ವೃದ್ಧ ತಾಯಿಯ ಸೌಕರ್ಯ ಮತ್ತು ದೈಹಿಕ ಅಗತ್ಯ  ನೋಡಿಕೊಳ್ಳಲು ಆಕೆಯ ಜೀವಾವಧಿಯವರೆಗೆ ವಾರ್ಷಿಕ ಜೀವನಾಂಶ ಪಾವತಿಸುವಂತೆ ಪುತ್ರ ಮತ್ತು ಮೊಮ್ಮಗಳಿಗೆ ನಿರ್ದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ಅರ್ಜಿದಾರರಾದ ಅಪ್ಪರಂಡ ಶಾಂತಿ ಬೋಪಣ್ಣ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಉಪ ವಿಭಾಗಾಧಿಕಾರಿಗಳ ಆದೇಶಕ್ಕೆ ಒಪ್ಪಿಗೆ ಸೂಚಿಸಿದರೆ ಅರ್ಜಿದಾರರ ಹೆಸರಿಗೆ ಆಸ್ತಿ ಹಕ್ಕು ಪುನರ್‌ ಸ್ಥಾಪಿತವಾಗುತ್ತದೆ. ಆದರೆ, ಈಗಾಗಲೇ 85 ವರ್ಷ ವಯಸ್ಸಾಗಿದ್ದು, ಆಸ್ತಿಯ ನಿರ್ವಹಣೆ ಕಷ್ಟ ಸಾಧ್ಯ. ಜಿಲ್ಲಾ ದಂಡಾಧಿಕಾರಿಯ ಆದೇಶವನ್ನು ರದ್ದುಗೊಳಿಸಿದರೆ, ಅರ್ಜಿದಾರರು ಯಾವ ಉದ್ದೇಶಕ್ಕೆ ಹೈಕೋರ್ಟ್‌ ಮೊರೆ ಹೋಗಿದ್ದಾರೆ, ಆ ಉದ್ದೇಶ/ಬೇಡಿಕೆಯನ್ನು ಪೂರ್ಣಪ್ರಮಾಣದಲ್ಲಿ ಈಡೇರಿಸಿದಂತಾಗುವುದಿಲ್ಲ. ಪ್ರಕರಣದ ವಿಶಿಷ್ಟ ಅಂಶಗಳನ್ನು ಗಮನದಲ್ಲಿಟ್ಟು ನೋಡಿದಾಗ ಅರ್ಜಿದಾರರ ಜೀವನ ನಿರ್ವಹಣೆಗೆ ವಾರ್ಷಿಕ ಏಳು ಲಕ್ಷ ರೂಪಾಯಿ ನೀಡಲು ಪುತ್ರ ಹಾಗೂ ಮೊಮ್ಮಗಳಿಗೆ ಸೂಚಿಸುವುದರಿಂದ ವ್ಯಾಜ್ಯ ಬಗೆಹರಿಸಿದಂತಾಗುತ್ತದೆ. ಹೀಗಾಗಿ, ಈ ಹಿಂದೆ ನೀಡುತ್ತಿದ್ದಂತೆ ಅರ್ಜಿದಾರರಿಗೆ ವಾರ್ಷಿಕ ಏಳು ಲಕ್ಷ ರೂಪಾಯಿ ಹಣ ಪಾವತಿಸಬೇಕು ಎಂದು ಆಕೆಯ ಪುತ್ರ ಹಾಗೂ ಮೊಮ್ಮಗಳಿಗೆ ನಿರ್ದೇಶಿಸಿ ಅರ್ಜಿ ಇತ್ಯರ್ಥಪಡಿಸಿದೆ.

Apparanda Shanti Bopanna Vs A B Ganapathy.pdf
Preview