Fali Nariman 
ಸುದ್ದಿಗಳು

ಎಲ್ಲಕ್ಕೂ ಸಂವಿಧಾನ ದೂಷಿಸದಿರಿ, ದೇಶವನ್ನು ಒಗ್ಗೂಡಿಸಿರುವುದೇ ಅದು: ಫಾಲಿ ನಾರಿಮನ್

ಸಂವಿಧಾನದ ಮೂಲಭೂತ ರಚನಾ ಸಿದ್ಧಾಂತ ಅತ್ಯುತ್ತಮ ಸಿದ್ಧಾಂತ ಎಂದು ಶ್ಲಾಘಿಸಿದ ಅವರು ವಸಾಹತುಶಾಹಿ ಸಂಸ್ಥೆಗಳಾಗಿರುವ ರಾಜ್ಯಪಾಲರುಗಳು ಕೇಂದ್ರ ಸರ್ಕಾರದ ಗುಲಾಮರಂತೆ ವರ್ತಿಸುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿದರು.

Bar & Bench

ನ್ಯೂನತೆಗಳ ಹೊರತಾಗಿಯೂ ಭಾರತದ ಸಂವಿಧಾನ ದೇಶವನ್ನು ಒಗ್ಗೂಡಿಸಿ ಇರಿಸಿದ್ದು ದೇಶದಲ್ಲಿ ನಡೆಯುವ ಎಲ್ಲದಕ್ಕೂ ಸಂವಿಧಾನವನ್ನು ದೂಷಿಸುವುದು ಸರಿಯಲ್ಲ ಎಂದು ಹಿರಿಯ ವಕೀಲ, ಖ್ಯಾತ ನ್ಯಾಯಶಾಸ್ತ್ರಜ್ಞ ಹಾಗೂ ನ್ಯಾಯಿಕ ಲೋಕದ ದಂತಕತೆ ಫಾಲಿ ನಾರಿಮನ್‌ ಶುಕ್ರವಾರ ತಿಳಿಸಿದರು.

ನವದೆಹಲಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಧಿ ಸೆಂಟರ್ ಫಾರ್ ಲೀಗಲ್ ಪಾಲಿಸಿಯ ಅರ್ಘ್ಯ ಸೇನ್‌ಗುಪ್ತಾ ಅವರ 'ದ ಕಲೋನಿಯಲ್‌ ಕಾನ್‌ಸ್ಟಿಟ್ಯೂಷನ್‌ʼ ಕೃತಿ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತ ಮತ್ತು ದಿ ಪ್ರಿಂಟ್‌ ಸುದ್ದಿತಾಣದ ಮುಖ್ಯ ಸಂಪಾದಕ ಶೇಖರ್ ಗುಪ್ತಾ ಮತ್ತು ಆರ್ಘ್ಯ ಸೇನ್‌ಗುಪ್ತಾ ಅವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನದ ಮೂಲಭೂತ ರಚನಾ ಸಿದ್ಧಾಂತ ಅತ್ಯುತ್ತಮ ಸಿದ್ಧಾಂತ ಎಂದು ಶ್ಲಾಘಿಸಿದ ಅವರು ವಸಾಹತುಶಾಹಿ ಸಂಸ್ಥೆಗಳಾಗಿರುವ ರಾಜ್ಯಪಾಲರುಗಳು ಕೇಂದ್ರ ಸರ್ಕಾರದ ಗುಲಾಮರಂತೆ ವರ್ತಿಸುತ್ತಿರುವುದು ದುರದೃಷ್ಟಕರ ಎಂದು ಟೀಕಿಸಿದರು.  

ಫಾಲಿ ನಾರಿಮನ್‌ ಮಾತಿನ ಪ್ರಮುಖಾಂಶಗಳು

  • ನಾವು ನಮ್ಮನ್ನು ತಿದ್ದಿಕೊಳ್ಳಬೇಕೇ ವಿನಾ ನಮ್ಮ ಸಂವಿಧಾನವನ್ನು ತಿದ್ದುವುದಲ್ಲ.
    ಸಂವಿಧಾನದ ವಿರುದ್ಧ ಯಾವುದೇ ನ್ಯೂನತೆ ಆರೋಪಿಸುವಾಗಲೂ ಅದು ದೇಶವನ್ನು ಒಗ್ಗೂಡಿಸಿ ಇರಿಸಿದೆ ಎಂಬುದನ್ನು ಸದಾ ಅರಿತುಕೊಳ್ಳಿ.

  • ಎಂದಿಗೂ ನಾವು ಹೊಸ ಸಂವಿಧಾನವನ್ನು ಪಡೆಯುತ್ತೇವೆ ಎಂದು ನನಗೆ ಅನ್ನಿಸುವುದಿಲ್ಲ. ಏಕೆಂದರೆ ಪ್ರಪಂಚದ ಎಲ್ಲಾ ಭಾಗಗಳಲ್ಲಿ ಇಂದು ಸಹಿಷ್ಣುತೆಯ ಮಟ್ಟವು ಅತ್ಯಂತ ಕಡಿಮೆಯಾಗಿದೆ. ಸಂವಿಧಾನದಲ್ಲಿ ಬಳಸಲಾದ 'ಭ್ರಾತೃತ್ವ' ಪದವನ್ನು ಬೇರೆಲ್ಲಿಯೂ ಉಲ್ಲೇಖಿಸಿಲ್ಲ. ಆದ್ದರಿಂದ ನಾವು ನಮ್ಮನ್ನು ಬದಲಿಸಿಕೊಳ್ಳಬೇಕೆ ವಿನಾ ಸಂವಿಧಾನವನ್ನಲ್ಲ.

  • ಸಂಸತ್ತಿನಲ್ಲಿ ಅಪಾರ ಬಹುಮತ ಪಡೆದ ಸರ್ಕಾರಗಳೆಲ್ಲಾ ಯಾವಾಗಲೂ ನಿರಂಕುಶವಾಗಿ ವರ್ತಿಸಿವೆ.

    ಬಹುಮತದ ಸರ್ಕಾರಗಳು ದೇಶಕ್ಕೆ ಸೂಕ್ತವಲ್ಲ ಎಂದು ಭಾವಿಸಿದ್ದೇನೆ. ನಾನು ಸಮ್ಮಿಶ್ರ ಸರ್ಕಾರಗಳ ಪರವಾಗಿದ್ದೇನೆ. ಹಿಂದೆಯೂ ಅಪಾರ ಬಹುಮತ ಪಡೆದಿದ್ದ ಪಕ್ಷವೊಂದು ತುರ್ತು ಪರಿಸ್ಥಿತಿ ವೇಳೆ ಹೀಗೇ ನಡೆದುಕೊಂಡಿತ್ತು.

  • ರಾಜ್ಯಪಾಲರುಗಳು ವಸಾಹತುಶಾಹಿ ಸಂಸ್ಥೆಗಳ ಉಳಿಕೆಯಾಗಿದ್ದು ಅವರು ಕೇಂದ್ರದ ಮುಖವಾಣಿಗಳಂತೆ ವರ್ತಿಸುತ್ತಿದ್ದಾರೆ. ರಾಜ್ಯಪಾಲರುಗಳು ಈ ರೀತಿ ನಡೆದುಕೊಳ್ಳುತ್ತಿರುವುದು ದುರದೃಷ್ಟಕರ.

  • ಸಂವಿಧಾನವು ಎಲ್ಲವನ್ನೂ ಒದಗಿಸಿರುವ ಅತ್ಯಂತ ದೀರ್ಘ ಮತ್ತು ನಿಯಮಿತ ದಾಖಲೆಯಾಗಿದೆ. ಇದಕ್ಕೆ ಕಾರಣ ಭಾರತದ ಜನರನ್ನು ನಂಬಲು ಸಾಧ್ಯವಿಲ್ಲದ ಮತ್ತು ಪ್ರಜಾಪ್ರಭುತ್ವಕ್ಕೆ ಅವರು ಸಿದ್ಧರಿಲ್ಲ ಎನ್ನುವ ವಸಾಹತುಶಾಹಿ ಕಲ್ಪನೆಯನ್ನು ಆಧರಿಸಿದೆ.

  • ಸಂವಿಧಾನ ಅಧ್ಯಯನಕ್ಕೆ ನಿರ್ದಿಷ್ಟ ವಿಧಾನವಿದೆ. ನನ್ನ ಪುಸ್ತಕ ಈ ಕುರಿತು ಪ್ರಚೋದಿಸುವಂಥದ್ದು. ನಾವು ಸಂವಿಧಾನವನ್ನು ಪೂಜಿಸಬೇಕಾದ ಪವಿತ್ರ ಗ್ರಂಥ ಎಂದು ಪರಿಗಣಿಸಬಾರದು. ಅದರಲ್ಲಿರುವ ವಿಷಯಗಳನ್ನು ವಿಮರ್ಶಾತ್ಮಕವಾಗಿ ನೋಡಬೇಕು.