ಸುದ್ದಿಗಳು

ಕೋರ್ಟ್ ಆವರಣದಲ್ಲಿ ಕೋತಿಗಳಿಗೆ ಆಹಾರ ನೀಡಬೇಡಿ, ಕಿಟಕಿ ಮುಚ್ಚಿರುವಂತೆ ನೋಡಿಕೊಳ್ಳಿ: ದೆಹಲಿ ಹೈಕೋರ್ಟ್ ಸುತ್ತೋಲೆ

Bar & Bench

ದೆಹಲಿ ಹೈಕೋರ್ಟ್ ಹೊರಡಿಸಿರುವ ಹೊಸ ಸುತ್ತೋಲೆಯಲ್ಲಿ ವಕೀಲರು, ದಾವೆದಾರರು ಮತ್ತು ಸಿಬ್ಬಂದಿ ನ್ಯಾಯಾಲಯದ ಸಂಕೀರ್ಣದೊಳಗೆ ಕೋತಿಗಳಿಗೆ ಆಹಾರ ನೀಡದಂತೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಿದೆ. ಶುಕ್ರವಾರ (ಮಾರ್ಚ್ 4) ಹೊರಡಿಸಿದ ಸುತ್ತೋಲೆಯಲ್ಲಿ ನ್ಯಾಯಾಲಯ ಕಟ್ಟಡಗಳ ಕಿಟಕಿ ತೆರೆಯದಂತೆ ನೋಡಿಕೊಳ್ಳಲು ಸಂಬಂಧಪಟ್ಟವರೆಲ್ಲರಿಗೂ ಸೂಚಿಸಿದೆ.

ಕುತೂಹಲಕಾರಿಯಾಗಿ ಮಂಗಗಳು ಮತ್ತು ನಾಯಿಗಳಂತಹ ಯಾವುದೇ ಬೀದಿ ಪ್ರಾಣಿಗಳಿಗೆ ಆಹಾರ ನೀಡದಂತೆ ಜನರಿಗೆ ಸೂಚಿಸಿದ್ದ ಫೆಬ್ರವರಿ 28ರ ಸುತ್ತೋಲೆಗಿಂತಲೂ ಈ ಸುತ್ತೋಲೆ ಭಿನ್ನವಾಗಿದ್ದು ಈಗ ಕೋತಿಗಳಿಗೆ ಆಹಾರ ನೀಡುವುದಕ್ಕೆ ಮಾತ್ರ ನಿರ್ಬಂಧ ವಿಧಿಸಲಾಗಿದೆ.

ಫೆಬ್ರವರಿ 28 ರ ಸುತ್ತೋಲೆ ವಕೀಲರ ಸಮೂಹವೊಂದು ಆಕ್ಷೇಪ ವ್ಯಕ್ತಪಡಿಸಿತ್ತು. ಡಾ. ಮಾಯಾ ಡಿ ಚಬ್ಲಾನಿ ಮತ್ತು ರಾಧಾ ಮಿತ್ತಲ್ ಇನ್ನಿತರರ ನಡುವಣ ಪ್ರಕರಣದಲ್ಲಿ ʼಪ್ರಾಣಿಗಳಿಗೆ ಸಹಾನುಭೂತಿ ತೋರಿಸಬೇಕು ಅವುಗಳನ್ನು ಘನತೆಯಿಂದ ಕಾಣಬೇಕು ಎಂದಿದ್ದ ದೆಹಲಿ ಹೈಕೋರ್ಟ್‌ ತೀರ್ಪಿಗೆ ಈ ಸುತ್ತೋಲೆ ವಿರುದ್ಧವಾಗಿದೆ ಎಂದು ತಿಳಿಸಲಾಗಿತ್ತು.

ವಕೀಲರಾದ ಗೌರಿ ಪುರಿ ಮತ್ತಿತರರು ಬರೆದಿದ್ದ ಪತ್ರದಲ್ಲಿ “ನಾಯಿಗಳ ಸಂತಾನಹರಣಕ್ಕಾಗಿ ಅವುಗಳಿಗೆ ಲಸಿಕೆ ನೀಡಲು ನಿಗದಿತ ಸ್ಥಳದಲ್ಲಿ ಆಃಾರ ನೀಡಬೇಕಾಗುತ್ತದೆ. ಅಲ್ಲದೆ ಮನುಷ್ಯರು ಮತ್ತು ಪ್ರಾಣಿಗಳ ಶಾಂತಿಯುತ ಸಹಬಾಳ್ವೆಗಾಗಿ ಬೀದಿನಾಯಿಗಳಿಗೆ ಆಹಾರ ನೀಡುವುದು ಅತ್ಯಗತ್ಯ” ಎಂದಿದ್ದರು.

“ಈ ಹಿನ್ನೆಲೆಯಲ್ಲಿ ಸುತ್ತೋಲೆಯನ್ನು ಮಾರ್ಪಡಿಸಿ ನಾಯಿಗಳಿಗೆ ನಿಗದಿತ ಸ್ಥಳಗಳಲ್ಲಿ ಆಹಾರ ನೀಡಲು ಅವಕಾಶ ಮಾಡಿಕೊಡಬೇಕು. ಅಂತಹ ಸ್ಥಳಗಳನ್ನು ಗುರುತಿಸಲು, ಆಹಾರ ಪೂರೈಸುವವರು, ಪ್ರಾಣಿ ಪಾಲಕರು ಹಾಗೂ ಹೈಕೋರ್ಟ್‌ ಸಿಬ್ಬಂದಿಯನ್ನು ಒಳಗೊಂಡ ಸಮಿತಿ ರಚಿಸಬಹುದು” ಎಂದು ಅವರು ಸಲಹೆ ನೀಡಿದ್ದರು.