Justice KV Viswanathan 
ಸುದ್ದಿಗಳು

'ವಾಟ್ಸಾಪ್ ಯೂನಿವರ್ಸಿಟಿ' ಸಂದೇಶಗಳಿಗೆ ಮಾರುಹೋಗದಿರಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಎಚ್ಚರಿಕೆ

ಸಂವಿಧಾನದ ಮೂಲ ರಚನೆಯ ಸಿದ್ಧಾಂತ ಸುಪ್ರೀಂ ಕೋರ್ಟ್‌ನ ಬಹುಮುಖ್ಯ ಘೋಷಣೆ ಎಂದಿದ್ದಾರೆ ಅವರು.

Bar & Bench

ವರ್ಚುವಲ್ ಮಾಧ್ಯಮ ಮತ್ತು ವಾಟ್ಸಾಪ್‌ನಂತಹ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ  ತಪ್ಪು ಮಾಹಿತಿ ಹೆಚ್ಚು ಹರಡುತ್ತಿರುವ ಬಗ್ಗೆ  ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಕೆ ವಿ ವಿಶ್ವನಾಥನ್ ಗಮನ ಸೆಳೆದಿದ್ದಾರೆ.

ಒ ಪಿ ಜಿಂದಾಲ್ ಗ್ಲೋಬಲ್ ಲಾ ಯೂನಿವರ್ಸಿಟಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಭಾರತದ ಸಂವಿಧಾನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆನ್‌ಲೈನ್ ವೇದಿಕೆಗಳ ಮೂಲಕ ನಕಲಿ ಸುದ್ದಿ ಇನ್ನಿತರ ತಪ್ಪು ಮಾಹಿತಿ ಹರಡುವುದಕ್ಕೆ ವಿಡಂಬನೆಯ ರೂಪದಲ್ಲಿ ಬಳಸುವ ʼವಾಟ್ಸಾಪ್‌ ಯೂನಿವರ್ಸಿಟಿʼ ಎಂಬ ಪದವನ್ನು ಉಲ್ಲೇಖಿಸಿರುವ ಅವರು ಅಂತಹ ವಾಟ್ಸಾಪ್‌ ಯೂನಿವರ್ಸಿಟಿ ಸಂದೇಶಗಳಿಗೆ ಮರುಳಾಗದಂತೆ ಎಚ್ಚರಿಕೆ ನೀಡಿದರು.

ನ್ಯಾ. ವಿಶ್ವನಾಥನ್‌ ಅವರ ಮಾತುಕತೆಯ ಪ್ರಮುಖಾಂಶಗಳು

  • ಇತ್ತೀಚಿನ ದಿನಗಳಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳು ಕಂಡುಬರುತ್ತಿದೆ. ಈ ವಾಟ್ಸಾಪ್ ವಿಶ್ವವಿದ್ಯಾಲಯದ ಸಂದೇಶಗಳಿಗೆ ಮಾರುಹೋಗಬಾರದು. ಸತ್ಯದ ಅವನತಿ ಬಹಳಷ್ಟು ನಡೆಯುತ್ತಿದೆ.

  •  ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಹತ್ವದ್ದಾಗಿದ್ದು ಅಲ್ಪಸಂಖ್ಯಾತ  ಎಂಬ ಪದ ಕೇವಲ ಧಾರ್ಮಿಕ ಅಲ್ಪಸಂಖ್ಯಾತರನ್ನು ಮಾತ್ರವಲ್ಲದೆ ಭಾಷಾ ಅಲ್ಪಸಂಖ್ಯಾತರನ್ನೂ ಒಳಗೊಂಡಿದೆ. ನ್ಯಾಯಾಂಗ, ಕಾರ್ಯಾಂಗ ಇಲ್ಲವೇ ಶಾಸಕಾಂಗ ಎಂಬ ಭೇದವಿಲ್ಲದೆ ಎಲ್ಲ ಅಂಗಗಳೂ ಅವರ ಹಕ್ಕುಗಳನ್ನು ರಕ್ಷಿಸುವುದು ಮುಖ್ಯ.

  •  ನಮ್ಮ ಸಂವಿಧಾನ ಮತ್ತು ಸಾಂಸ್ಥಿಕ ರಚನೆಗಳ ಸಾಧನೆಯ ಕುರಿತು ಅವಲೋಕನ ಮಾಡಿಕೊಳ್ಳಬೇಕು. ನಾವು ಸಾಕಷ್ಟು ಉತ್ತಮವಾದುದನ್ನು ಸಾಧಿಸಿದ್ದೇವೆ.

  • ಭಾರತದ ಸಂವಿಧಾನದ ಕಾರ್ಯಕ್ಷಮತೆ ಎಂಬುದು ಅದರ ಸುಗಮ ಕಾರ್ಯ ನಿರ್ವಹಣೆ ಮತ್ತು ಅದರ ನಾಗರಿಕರ ಶ್ರೇಷ್ಠತೆಯಲ್ಲಿ ಇದೆ.

  • ಮೂಲಭೂತ ರಚನೆಯ ಸಿದ್ಧಾಂತ ಸುಪ್ರೀಂ ಕೋರ್ಟ್‌ನ ಬಹುಮುಖ್ಯ ಘೋಷಣೆಯಾಗಿದ್ದು ಅಚಲವಾಗಿ ನಿಂತಿದೆ.

  • ನ್ಯಾಯಾಂಗ ಅತ್ಯಂತ ಗೌರವಯುತ ಪಾತ್ರ ನಿರ್ವಹಿಸಿದ್ದು ತಮ್ಮ ಎಲ್ಲೆ ಮೀರುವ ಅಂಗಗಳನ್ನು ಹದ್ದುಬಸ್ತಿನಲ್ಲಿಟ್ಟಿದೆ.

  •  ಆದರೆ ನ್ಯಾಯಾದಾನದ ವಿಳಂಬ ಎಂಬುದು ಕಾನೂನಾತ್ಮಕ ಆಡಳಿತವನ್ನು ಉಲ್ಲಂಘಿಸುತ್ತದೆ.

  • ನ್ಯಾಯಾಂಗ ಎನ್ನುವುದು ಸಂವಿಧಾನದ ಎಲ್ಲಾ ಅಂಗಗಳನ್ನು ಸದೂರದಲ್ಲಿ ನಿಂತೇ ಗೌರವಿಸಬೇಕಿದೆ.