Bike Taxi and Karnataka HC 
ಸುದ್ದಿಗಳು

ಬೈಕ್‌ ಟ್ಯಾಕ್ಸಿ ಸೇವೆ ನೀಡುವ ವ್ಯಕ್ತಿಗಳಿಗೆ ಕಿರುಕುಳ ನೀಡಬಾರದು: ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ

“ನಾವು ಯಾವುದೇ ಆದೇಶ ಮಾಡಿಲ್ಲ. ಸರ್ಕಾರ ಏನು ಕ್ರಮತೆಗೆದುಕೊಳ್ಳಬೇಕು ಎಂದುಕೊಂಡಿದೆಯೋ ಅದನ್ನು ತೆಗೆದುಕೊಳ್ಳಬಹುದು. ವ್ಯಕ್ತಿಗತ ಬೈಕ್‌ ಟ್ಯಾಕ್ಸಿ ಬಗ್ಗೆ ಯಾವುದೇ ಕ್ರಮಬೇಡ” ಎಂದ ನ್ಯಾಯಾಲಯ.

Bar & Bench

“ಬೈಕ್‌ ಟ್ಯಾಕ್ಸಿ ಸೇವೆ ನೀಡುವ ವ್ಯಕ್ತಿಗಳಿಗೆ ಕಿರುಕುಳ ನೀಡಬಾರದು” ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದೆ.

ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ವಿಭಾಗೀಯ ಪೀಠದ ಮುಂದೆ ಹಾಜರಾದ ಅಡ್ವೊಕೇಟ್‌ ಜನರಲ್ ಕೆ ಶಶಿಕಿರಣ್‌ ಶೆಟ್ಟಿ ಅವರು “ಅಪ್ಲಿಕೇಶನ್‌ ಆಧಾರಿತ ಬೈಕ್‌ ಟ್ಯಾಕ್ಸಿ ಸೇವೆ ನೀಡುವವರು ಸೇವೆ ಆರಂಭಿಸಿದ್ದಾರೆ. ಕ್ರಮ ತೆಗೆದುಕೊಳ್ಳುವುದಕ್ಕೂ ಮುನ್ನ ನ್ಯಾಯಾಲಯದ ಗಮನಕ್ಕೆ ತರುವುದು ನನ್ನ ಕರ್ತವ್ಯ” ಎಂದರು.

CJ Vibhu Bhakru J̤̤.CM Joshi

ಇದಕ್ಕೆ ಪೀಠ “ನಾವು ಯಾವುದೇ ಆದೇಶ ಮಾಡಿಲ್ಲ. ಸರ್ಕಾರ ಏನು ಕ್ರಮತೆಗೆದುಕೊಳ್ಳಬೇಕು ಎಂದುಕೊಂಡಿದೆಯೋ ಅದನ್ನು ತೆಗೆದುಕೊಳ್ಳಬಹುದು. ವ್ಯಕ್ತಿಗತ ಬೈಕ್‌ ಟ್ಯಾಕ್ಸಿ ಬಗ್ಗೆ ಯಾವುದೇ ಕ್ರಮಬೇಡ. ಅಗ್ರಿಗೇಟರ್ಸ್‌ಗೆ ಸಂಬಂಧಿಸಿದಂತೆ ನೀವು ನೀತಿ ರೂಪಿಸುವುದನ್ನು ಪರಿಗಣಿಸಲಾಗುವುದು ಎಂದಿರುವುದರಿಂದ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಈ ವಿಚಾರದಲ್ಲಿ ಆದೇಶ ಬೇಕೆಂದರೆ ಮಾಡಲಾಗುವುದು. ಆದೇಶ ಬೇಡ ಎಂದು ಮಾಡಿಲ್ಲ. ವ್ಯಕ್ತಿಗತ ಬೈಕ್‌ ಟ್ಯಾಕ್ಸಿ ಚಾಲಕರಿಗೆ ಕಿರುಕುಳ ನೀಡಬೇಡಿ” ಎಂದು ಸರ್ಕಾರಕ್ಕೆ ಸೂಚಿಸಿತು.

ಬೈಕ್‌ ಟ್ಯಾಕ್ಸಿ ಚಾಲಕರ ಪರವಾಗಿ ಹಾಜರಾಗಿದ್ದ ವಕೀಲ ಗಿರೀಶ್‌ ಕುಮಾರ್ “ಸರ್ಕಾರ ಅಪ್ಲಿಕೇಶನ್‌ ವಿರುದ್ಧ ಕ್ರಮಕೈಗೊಳ್ಳಬಹುದು. ಅಪ್ಲಿಕೇಶನ್‌ ಆಧರಿಸಿ ಸೇವೆ ನೀಡುವ ಟ್ಯಾಕ್ಸಿಗಳ ಮೇಲಲ್ಲ. ವ್ಯಕ್ತಿಗತ ಬೈಕ್‌ಗಳನ್ನು ಜಫ್ತಿ ಮಾಡಲಾಗಿದೆ” ಎಂದರು.

ಇದಕ್ಕೆ ಅಡ್ವೊಕೇಟ್‌ ಜನರಲ್‌ ಅವರು “ವ್ಯಕ್ತಿಗತ ಬೈಕ್‌ ಟ್ಯಾಕ್ಸಿ ನೀಡುವವರನ್ನು ಬಂಧಿಸಿಲ್ಲ. ಈ ವಾದ ಸರಿಯಲ್ಲ. ಅವರನ್ನು ನಾವು ಬಂಧಿಸುವುದಿಲ್ಲ” ಎಂದು ಸ್ಪಷ್ಟನೆ ನೀಡಿದರು.

ಕಳೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರವು ಬೈಕ್‌ ಟ್ಯಾಕ್ಸಿಗೆ ಸಂಬಂಧಿಸಿದ ತೀರ್ಮಾನ ಸರ್ಕಾರದ ಅತ್ಯುನ್ನತ ಮಟ್ಟದಲ್ಲಿ ನಿರ್ಧರಿಸಲ್ಪಡುತ್ತದೆ ಎಂದು ಹೈಕೋರ್ಟ್‌ಗೆ ತಿಳಿಸಿತ್ತು. ಬೈಕ್‌ ಟ್ಯಾಕ್ಸಿ ಸೇವೆಯನ್ನು ಹಲವರು ಜೀವನೋಪಾಯಕ್ಕಾಗಿ ಅವಲಂಬಿಸಿರುವುದರಿಂದ ಗಂಭೀರವಾಗಿ ಆಲೋಚಿಸುವಂತೆ ಸರ್ಕಾರಕ್ಕೆ ನ್ಯಾಯಾಲಯವು ಕಿವಿಮಾತು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.