Justice S Muralidhar 
ಸುದ್ದಿಗಳು

ದೆಹಲಿ ಗಲಭೆ ಕುರಿತ ತೀರ್ಪಿನಲ್ಲಿ ಸರ್ಕಾರಕ್ಕೆ ಅತೃಪ್ತಿ ಆಗುವಂಥದ್ದೇನಿದೆ ಎಂದು ತಿಳಿಯುತ್ತಿಲ್ಲ: ನ್ಯಾ. ಮುರಳೀಧರ್

ಸೌತ್ ಫಸ್ಟ್ ಸುದ್ದಿ ತಾಣ ಹಮ್ಮಿಕೊಂಡಿದ್ದ 'ದಕ್ಷಿಣದ ಮಾತುಕತೆ- 2023'ರ ಸಮಾವೇಶದಲ್ಲಿ ನ್ಯಾಯಂಗ ಕಾರ್ಯಾಂಗ ಮುಖಾಮುಖಿಯಾದಾಗ ವಹಿಸುವ ಪಾತ್ರದ ಕುರಿತು ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರೊಂದಿಗೆ ನ್ಯಾ. ಮುರಳೀಧರ್ ಚರ್ಚಿಸಿದರು.

Bar & Bench

ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ನೀಡಿದ್ದ ತೀರ್ಪಿನಲ್ಲಿ ಕೇಂದ್ರ ಸರ್ಕಾರವನ್ನು ಅಸಮಾಧಾನಗೊಳಿಸಿದ ಆ ಮೂಲಕ ಅದು ತನ್ನನ್ನು ತಕ್ಷಣವೇ ವರ್ಗಾವಣೆ ಮಾಡಲು ಕಾರಣವಾದ ಅಂಶವೇನು ಎಂದು ನನಗೆ ತಿಳಿಯುತ್ತಿಲ್ಲ ಎಂಬುದಾಗಿ ಒಡಿಶಾ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌ ಮುರಳೀಧರ್‌ ಶನಿವಾರ ಹೇಳಿದ್ದಾರೆ.

ತಮ್ಮ ಸ್ಥಾನದಲ್ಲಿ ಬೇರೆ ಯಾರೇ ನ್ಯಾಯಮೂರ್ತಿ ಇದ್ದರೂ ಇದನ್ನೇ ಮಾಡುತ್ತಿದ್ದರು. ಏಕೆಂದರೆ ಇದು ಸರಿಯಾದ ಕಾರ್ಯವಾಗಿತ್ತು ಎಂದು ತಾವು ದೆಹಲಿ ಹೈಕೋರ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ನೀಡಿದ ತೀರ್ಪಿನ ಕುರಿತಂತೆ ಪ್ರತಿಕ್ರಿಯಿಸಿದರು.

ಸೌತ್ ಫಸ್ಟ್  ಸುದ್ದಿತಾಣ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ 'ದಕ್ಷಿಣದ ಮಾತುಕತೆ- 2023' ಸಮಾವೇಶದಲ್ಲಿ ನ್ಯಾಯಂಗ ಕಾರ್ಯಾಂಗ ಮುಖಾಮುಖಿಯಾದಾಗ ವಹಿಸುವ ಪಾತ್ರದ ಕುರಿತು ಹಿರಿಯ ವಕೀಲ ಸಂಜಯ್‌ ಹೆಗ್ಡೆ ಅವರೊಂದಿಗೆ ನ್ಯಾ. ಮುರಳೀಧರ್‌ ಚರ್ಚಿಸಿದರು.  

ನ್ಯಾ. ಮುರಳೀಧರ್‌ ಅವರು ಮಧ್ಯರಾತ್ರಿ ವಿಚಾರಣೆ ನಡೆಸಿದ ಬಗ್ಗೆ ಹಾಗೂ ಪಂಜಾಬ್‌ ಹರಿಯಾಣ ಹೈಕೋರ್ಟ್‌ಗೆ ತಕ್ಷಣ ವರ್ಗಾವಣೆ ಮಾಡಲು ಕಾರಣವಾದ ದೆಹಲಿ ಗಲಭೆ ಪ್ರಕರಣದ ತೀರ್ಪಿನ ಬಗ್ಗೆ ಏನನ್ನಾದರೂ ತಿಳಿಸುವಂತೆ ಸಭಿಕರೊಬ್ಬರು ಮಾಡಿದ ಮನವಿಗೆ ಅವರು ಪ್ರತಿಕ್ರಿಯಿಸುತ್ತಾ ಈ ವಿಚಾರ ಹಂಚಿಕೊಂಡರು.

ನನ್ನ ತೀರ್ಪಿನಿಂದ ಸರ್ಕಾರ ಅಸಮಾಧಾನವಾಗುವಂಥದ್ದೇನಿದೆ ಎಂದು ನನಗೆ ತಿಳಿದಿಲ್ಲ. ದೆಹಲಿ ಹೈಕೋರ್ಟ್‌ನ ಬೇರೆ ಯಾರೇ ಸಹೋದ್ಯೋಗಿಗಳಾಗಿದ್ದರೂ ಇದೇ ಕೆಲಸ ಮಾಡಿರುತ್ತಿದ್ದರು. ನನ್ನ ಸ್ಥಾನದಲ್ಲಿ ಬೇರೆ ಯಾವುದೇ ನ್ಯಾಯಮೂರ್ತಿಗಳು ಅದೇ ಕೆಲಸವನ್ನು ಮಾಡುತ್ತಿದ್ದರು ಅಥವಾ ಅದನ್ನೇ ಮಾಡಬೇಕಿತ್ತು. ಸರ್ಕಾರ ನಿಜವಾಗಿಯೂ ಅಸಮಾಧಾನಗೊಂಡಿತ್ತು ಎನ್ನುವುದಾದರೆ ಅದು ಅತೃಪ್ತಗೊಳ್ಳುವುದಕ್ಕೆ ಏನು ಕಾರಣ ಇರಬಹುದು ಎಂಬುದು ನಿಮ್ಮಂತೆಯೇ ನನಗೂ  ಅರ್ಥವಾಗುತ್ತಿಲ್ಲ. ಅದು ಮಾಡಲೇಬೇಕಿದ್ದ ಸರಿಯಾದ ಕೆಲಸವಾದ್ದರಿಂದ ಅದೇನೂ ದೊಡ್ಡ ವಿಚಾರವಲ್ಲ ಎಂದು ಅವರು ತಿಳಿಸಿದರು.

ನ್ಯಾ. ಮುರಳೀಧರ್‌ ಮಾತಿನ ಪ್ರಮುಖಾಂಶಗಳು

  • ತುಂಬಾ ಬಲಿಷ್ಠ ಕಾರ್ಯಾಂಗ ಇದ್ದಾಗ ದುರ್ಬಲ ನ್ಯಾಯಾಂಗ ಇರುತ್ತದೆ, ದುರ್ಬಲ ಕಾರ್ಯಾಂಗ ಇದ್ದಾಗ ಬಲಿಷ್ಠ ನ್ಯಾಯಾಂಗ ಇರುತ್ತದೆ ಎಂಬ ಮಾತಿದೆ. ಆದರೆ ಅದು ಹಾಗಲ್ಲ. ಕೊಲಿಜಿಯಂ ಅಸ್ತಿತ್ವಕ್ಕೆ ಬರುವ ಅಂದರೆ 1993ಕ್ಕು ಮೊದಲು  ನ್ಯಾಯಾಧೀಶರ ನೇಮಕಾತಿಯಲ್ಲಿ ಕಾರ್ಯಾಂಗದ ಪಾತ್ರ ಇರುತ್ತಿತ್ತು. ಆದರೆ ಕೊಲಿಜಿಯಂ ಜಾರಿಗೆ ಬಂದ ನಂತರ ನ್ಯಾಯಮೂರ್ತಿಗಳು ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು.  

  • ನ್ಯಾಯಾಂಗ ಮತ್ತು ಕಾರ್ಯಾಂಗದ ನಡುವಿನ ಜಗಳ ಹೊಸತಲ್ಲವಾದರೂ ನ್ಯಾಯಾಂಗ ತನ್ನ ಸ್ವಾತಂತ್ರ್ಯವನ್ನು ಹೇಗೆ ಉಳಿಸಿಕೊಂಡಿದೆ ಎಂಬುದು ಖುದ್ದು ನ್ಯಾಯಾಧೀಶರು ಅದರಲ್ಲಿಯೂ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಮೇಲೆ ಅವಲಂಬಿತವಾಗಿರುತ್ತದೆ.

  • ಆಗಿನ ನ್ಯಾ. ವೈ ವಿ ಚಂದ್ರಚೂಡ್‌ (ಈಗಿನ ಸಿಜೆಐ ಡಿ ವೈ ಚಂದ್ರಚೂಡ್‌ ಅವರ ತಂದೆ) ಅವರ ಅಧಿಕಾರವಾಧಿ ಸುದೀರ್ಘವಾದುದಾಗಿತ್ತು. ಹಾಗಾಗಿ ಅವರು ಕಠೋರವಾಗಿ ನಡೆದುಕೊಳ್ಳಬೇಕಾಯಿತು. ಉದಾಹರಣೆಗೆ ನ್ಯಾ. ಚಂದೂರ್ಕರ್‌ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಮಾಡಲಾಗಲಿಲ್ಲ. ಹಲವು ಉತ್ತಮ ನ್ಯಾಯಮೂರ್ತಿಗಳನ್ನು ಪಡೆಯಲು ಅವರಿಂದಾಗಲಿಲ್ಲ ಅಥವಾ ಅವರು ಬಯಸಿದ ಸಮಯದಲ್ಲಿ ಅವರಿಗೆ ಪದೋನ್ನತಿ ನೀಡಲಾಗಲಿಲ್ಲ. ಯಾರು ಮೊದಲು ಇರಬೇಕು ಎಂಬುದನ್ನು ನಿರ್ಧರಿಸುವ ಕುರಿತಂತೆ ಹಲವು ನಿಟ್ಟಿನಲ್ಲಿ ಒತ್ತಡ- ಸೆಳೆತಗಳಿರುತ್ತಿದ್ದವು.

  • ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಪದೋನ್ನತಿ ನೀಡಲು ಅರ್ಹತೆಯ ಮಾನದಂಡ ನಿಗದಿಪಡಿಸುವ ಅಗತ್ಯತೆ ಇದೆ.

  • ನ್ಯಾಯಮೂರ್ತಿಗಳು ನಿವೃತ್ತರಾದ ಮೇಲೆ ಅವರನ್ನು ಮತ್ತೊಂದು ಹುದ್ದೆಗೆ ನೇಮಕ ಮಾಡುವ ಬದಲು ಅವರಿಗೆ ಕಡ್ಡಾಯವಾಗಿ ʼಕೂಲಿಂಗ್‌ ಆಫ್‌ʼ ಅವಧಿ ನಿಗದಿಪಡಿಸುವ ಅಗತ್ಯತೆ ಇದೆ.