ಸ್ವಾತಂತ್ರೋತ್ಸದ ಪ್ರಯುಕ್ತ ಆಗಸ್ಟ್ 14ರಂದು ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ತಿಲಕನಗರದ ವಿವಿಧ ಪ್ರದೇಶಗಳಲ್ಲಿ ಪಂಜಿನ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮದ ಮೂಲಕ ಅಖಂಡ ಭಾರತ ಕಲ್ಪನಾ ದಿವಸ ಆಚರಿಸುವ ಸಂಬಂಧ ನ್ಯಾಯಾಲಯ ಅನುಮತಿ ನೀಡುವುದಕ್ಕೂ ಮುನ್ನವೇ ಹೋರ್ಡಿಂಗ್ ಅಳವಡಿಸಿದ್ದ ಹಿಂದೂ ಜಾಗರಣ ವೇದಿಕೆ ಕ್ರಮಕ್ಕೆ ತೀವ್ರ ಅತೃಪ್ತಿ ದಾಖಲಿಸಿರುವ ಕರ್ನಾಟಕ ಹೈಕೋರ್ಟ್, ನ್ಯಾಯಾಲಯವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಗುರುವಾರ ಕಟುವಾಗಿ ನುಡಿಯಿತು.
ಅನುಮತಿ ನಿರಾಕರಿಸಿದ್ದ ಮೈಸೂರು ಪೊಲೀಸ್ ಆಯುಕ್ತರ ಕ್ರಮ ಪ್ರಶ್ನಿಸಿ ಹಿಂದೂ ಜಾಗರಣ ವೇದಿಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ರಾಜ್ಯ ಹೆಚ್ಚುವರಿ ಅಡ್ವೋಕೇಟ್ ಜನರಲ್ ಭಾನುಪ್ರಕಾಶ್ ಅವರು “ಮೆರವಣಿಗೆ ನಡೆಸಲು ಬದಲಿ ಮಾರ್ಗವನ್ನು ಅರ್ಜಿದಾರರಿಗೆ ಸೂಚಿಸಲಾಗಿದೆ. ಆ ಮಾರ್ಗದಲ್ಲಿ ಮೆರವಣಿಗೆ ನಡೆಸಿ ವಾಪಸ್ಸಾಗಬಹುದು. ಮತ್ತೊಂದೆಡೆ ಹೈಕೋರ್ಟ್ ಅನುಮತಿ ನೀಡದಿದ್ದರೂ ಅರ್ಜಿದಾರರು ಮೆರವಣಿಗೆ ನಡೆಸಲು ಉದ್ದೇಶಿಸಿರುವ ಸ್ಥಳದಲ್ಲಿ ಬುಧವಾರ ಹೋರ್ಡಿಂಗ್/ ಜಾಹೀರಾತು ಫಲಕ ಹಾಕಲಾಗಿದೆ. ಮೆರವಣಿಗೆ ನಡೆಸಲು ಪೊಲೀಸರು ನಿರಾಕರಿಸಿದ್ದಾರೆ; ಆ ಕ್ರಮವನ್ನು ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಜಾಹೀರಾತು ಫಲಕ ಅಳವಡಿಸಲಾಗಿದೆ. ಅದಕ್ಕೆ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದಿಲ್ಲ” ಎಂದು ತಿಳಿಸಿದ ಆ ಕುರಿತು ಪೋಟೋಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಇದರಿಂದ ಕೆಂಡಾಮಂಡಲವಾದ ಪೀಠವು “ನ್ಯಾಯಾಲಯ ನಿಮ್ಮ ಪರವಾಗಿ ಅನುಮತಿ ನೀಡದಿದ್ದರೂ ಹೇಗೆ ಹೋರ್ಡಿಂಗ್ ಹಾಕಲಾಯಿತು? ಇದಕ್ಕೆ ಅನುಮತಿಸಲಾಗದು. ನ್ಯಾಯಾಲಯವನ್ನು ಲಘುವಾಗಿ ಪರಿಗಣಿಸಬೇಡಿ. ಮೆರವಣಿಗೆ ನಡೆಸುವುದಕ್ಕೆ ನಿಮ್ಮ ಪರ ಆದೇಶ ನೀಡಲು ನ್ಯಾಯಾಲಯ ಪ್ರಯತ್ನಿಸುತ್ತಿದೆ. ಆದರೆ, ನ್ಯಾಯಾಲಯದ ಆದೇಶ ನೀಡುವ ಮುನ್ನವೇ ಜಾಹೀರಾತು ಅಳವಡಿಸಿ ನಿಯಮಗಳನ್ನು ಉಲ್ಲಂಘಿಸುತ್ತಿದ್ದೀರಿ. ಈ ನಡೆ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯ ದುರುಪಯೋಗವಾಗಿದೆ ಹಾಗೂ ಮಿತಿಮೀರಿದ ನಡವಳಿಕೆಯಾಗಿದೆ. ಈ ನೆಲದ ಕಾನೂನಿನಿಗೆ ಬೆಲೆ ಇದೆಯೇ? ಇದು ನಿಮ್ಮ ಮೇಲಿನ ವಿಶ್ವಾಸ ಮೂಡಿಸುತ್ತಿಲ್ಲ. ನ್ಯಾಯಾಲಯದ ವಿವೇಚನಾಧಿಕಾರಿ ಬಳಸಿ ನಿಮ್ಮ ಪರ ಆದೇಶ ನೀಡುವ ಅಗತ್ಯ ಇಲ್ಲವಾಗಿದೆ” ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು.
ಇದಕ್ಕೂ ಮುನ್ನ, ಮೆರವಣಿಗೆ ನಡೆಸುವ ಮಾರ್ಗದಲ್ಲಿ ಬಂದೋಬಸ್ತ್‌ಗಾಗಿ ಭದ್ರತಾ ಪಡೆಯನ್ನು ನಿಯೋಜಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರ ಪರ ಹಿರಿಯ ವಕೀಲ ಎಂ ಅರುಣ ಶ್ಯಾಮ್ ಮನವಿ ಮಾಡಿದರು. ಆ ಮನವಿಗೆ ಒಪ್ಪದ ಪೀಠವು “ಭದ್ರತಾ ಪಡೆಯನ್ನು ನಿಯೋಜಿಸಲು ಉಂಟಾಗುವ ಖರ್ಚು-ವೆಚ್ಚವನ್ನು ಅರ್ಜಿದಾರರೇ ಭರಿಸಬೇಕು. ಸರ್ಕಾರವೇನು ಮೆರವಣಿಗೆ ನಡೆಸುವಂತೆ ನಿಮಗೆ ಹೇಳುತ್ತಿಲ್ಲ. ನೀವೇ ಮೆರವಣಿಗೆ ಹಮ್ಮಿಕೊಂಡಿದ್ದದೀರಿ. ಯಾರನ್ನು ಭದ್ರತೆ ನಿಯೋಜಿಸಬಾರದು ಎಂದು ಸರ್ಕಾರಕ್ಕೆ ಹೇಳಲಾಗುತ್ತದೆ. ಕಾರ್ಯಕ್ರಮದ ಸಂಪೂರ್ಣ ಹೊಣೆಯನ್ನು ಅರ್ಜಿದಾರರೇ ಹೊರಬೇಕು. ಮೆರವಣಿಗೆ ನಡೆಸಲು ಹಾಗೂ ಮೂರು ಬೆಟಾಲಿನಿಯನ್ ನಿಯೋಜಿಸಲು ನೀವು ಬಯಸಿದರೆ, ಅದಕ್ಕಾಗಿ ಉಂಟಾಗುವ ಖರ್ಚು ಅನ್ನು ಅರ್ಜಿದಾರರು ಭರಿಸಬೇಕು” ಎಂದು ಮೌಖಿಕವಾಗಿ ಹೇಳಿ ಅರ್ಜಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.
ಬೆಳಗಿನ ಕಲಾಪದಲ್ಲಿ ನಡೆದ ಅರ್ಜಿ ವೇಳೆ ಭಾನುಪ್ರಕಾಶ್ ಅವರು “ಅರ್ಜಿದಾರರು ಮೆರವಣಿಗೆ ನಡೆಸಲು ಉದ್ದೇಶಿಸಿರುವ ಜಾಗವು ಅತಿಸೂಕ್ಷ್ಮ ಪ್ರದೇಶವಾಗಿದೆ. ಇದರಿಂದ ಆ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಅನುಮತಿ ನೀಡಲಾಗದು. ಇನ್ನೂ ಅರ್ಜಿದಾರರ ಮೇಲೆ ಈ ಹಿಂದೆ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ” ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.
ಈ ವಾದ ಆಕ್ಷೇಪಿಸಿದ ಪೀಠವು “ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮೆರವಣಿಗೆ ನಡೆಸಲಾಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಕೋಮು ವಿಚಾರ ಹೇಗಾಗುತ್ತದೆ. ರಾಷ್ಟ್ರೀಯ ಹಬ್ಬಗಳಿಗೂ ಕೋಮು ವಿಚಾರಕ್ಕೂ ಏನು ಸಂಬಂಧ?” ಎಂದು ಕೇಳಿತು.