Home Delivery

 
ಸುದ್ದಿಗಳು

ಮನೆಬಾಗಿಲಿಗೆ ಪಡಿತರ ವಿತರಣೆ ಭ್ರಷ್ಟತೆಗೆ ಕಡಿವಾಣ ಹಾಕುತ್ತದೆ ಎಂಬುದಕ್ಕೆ ಗ್ಯಾರಂಟಿ ಏನು? ದೆಹಲಿ ಹೈಕೋರ್ಟ್ ಪ್ರಶ್ನೆ

ನ್ಯಾಯಬೆಲೆ ಅಂಗಡಿಗಳ ಮೂಲಕ ಆಹಾರ ಧಾನ್ಯ ವಿತರಣೆಯಲ್ಲಿ ಉಂಟಾಗುತ್ತದೆ ಎನ್ನಲಾದ ಭ್ರಷ್ಟಾಚಾರ ಕಡಿಮೆ ಮಾಡಲು ಈ ಯೋಜನೆ ಹೇಗೆ ಉತ್ತಮ ಎಂದು ವಿವರಿಸುವಂತೆ ದೆಹಲಿ ಸರ್ಕಾರವನ್ನು ಕೇಳಿದ ನ್ಯಾಯಾಲಯ.

Bar & Bench

ಸಾರ್ವಜನಿಕ ವಿತರಣಾ ವ್ಯವಸ್ಥೆ ಅಡಿಯಲ್ಲಿ ಫಲಾನುಭವಿಗಳಿಗೆ ಪಡಿತರವನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ದೆಹಲಿ ಸರ್ಕಾರದ ಯೋಜನೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಸೋಮವಾರ ತೀರ್ಪು ಕಾಯ್ದಿರಿಸಿದೆ [ದೆಹಲಿ ಸರ್ಕಾರಿ ಪಡಿತರ ಡೀಲರ್‌ಗಳ ಸಂಘ ಮತ್ತು ದೆಹಲಿ ಸರ್ಕಾರದ ಆಹಾರ ಮತ್ತು ಸರಬರಾಜು ಆಯುಕ್ತರ ನಡುವಣ ಪ್ರಕರಣ].

ನ್ಯಾಯಬೆಲೆ ಅಂಗಡಿಗಳ (ಎಫ್‌ಪಿಎಸ್) ಮೂಲಕ ಆಹಾರ ಧಾನ್ಯಗಳ ವಿತರಣೆಗೆ ಹೋಲಿಸಿದರೆ ಹೊಸ ಯೋಜನೆ ಭ್ರಷ್ಟಾಚಾರ ಕಡಿಮೆ ಮಾಡುವಲ್ಲಿ ಹೇಗೆ ಉತ್ತಮವಾಗಿದೆ ಎಂದು ವಿವರಿಸುವಂತೆ ಸರ್ಕಾರವನ್ನು ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಕೇಳಿತು.

ನ್ಯಾಯಾಲಯದ ಅವಲೋಕನಗಳು

  • ಈಗಿರುವ ನ್ಯಾಯಬೆಲೆ ಅಂಗಡಿ ವ್ಯವಸ್ಥೆಯನ್ನೇ ಏಕೆ ಜಾರಿಗೆ ತರಲು ಸಾಧ್ಯವಿಲ್ಲ?

  • ನೀವು ಎಲ್ಲರನ್ನೂ ಒಂದೇ ರೀತಿ ಅಳೆಯಲಾಗದು. ನೀವು ಎಲ್ಲ ನ್ಯಾಯಬೆಲೆ ಅಂಗಡಿ (ಎಫ್‌ಪಿಎಸ್) ಮಾಲೀಕರನ್ನು ಒಂದೇ ರೀತಿ ಹಣೆಪಟ್ಟಿ ಹಚ್ಚುತ್ತಿದ್ದೀರಿ. ಒಂದು ನಮೂನೆಯ ಗುಂಪನ್ನು ಮತ್ತೊಂದಕ್ಕೆ ಬದಲಿಸಲು ನೀವು ಮೂಲಭೂತವಾಗಿ ಯತ್ನಿಸುತ್ತಿದ್ದೀರಿ.

  • ಭ್ರಷ್ಟಾಚಾರ ತಡೆಯಲು ಈಗಿರುವ ಪಡಿತರ ವ್ಯವಸ್ಥೆಗೇ ಜಿಯೋ ಪೊಸಿಷನಿಂಗ್‌ ಮತ್ತು ಬಯೋಮೆಟ್ರಿಕ್‌ ಪರಿಶೀಲನೆಯಂತಹ ಸುರಕ್ಷತಾ ಕ್ರಮಗಳನ್ನು ಏಕೆ ಅಳವಡಿಸಿಲ್ಲ?

  • ಹೊಸ (ಯೋಜನೆಯ) ಟೆಂಡರ್‌ ಅಥವಾ ಹರಾಜು ಪ್ರಕ್ರಿಯೆಯಲ್ಲಿಯೂ ಇದೇ ರೀತಿ ಆಗಬಹುದು. ನ್ಯಾಯಬೆಲೆ ಅಂಗಡಿ ವ್ಯವಸ್ಥೆಯಲ್ಲಿರುವ ವ್ಯಕ್ತಿಗಳಂತೆ ಭಾರತೀಯರೇ ಆಗಿರುವ ಈ ಹೊಸ ವ್ಯಕ್ತಿಗಳು ಕೂಡ ಭ್ರಷ್ಟರಾಗುವುದಿಲ್ಲ ಎನ್ನುವ ಗ್ಯಾರಂಟಿ ಏನು?

  • ಈಗಿರುವ ನ್ಯಾಯಬೆಲೆ ಅಂಗಡಿ ವ್ಯವಸ್ಥೆಯಲ್ಲಿ ದೆಹಲಿ ನಗರದ ಎಲ್ಲೆಡೆ ನ್ಯಾಯಬೆಲೆ ಅಂಗಡಿಗಳು ಇವೆ. ಹೊಸ ವ್ಯವಸ್ಥೆಯಿಂದಾಗಿ ಈಗಿನ ವ್ಯವಸ್ಥೆ ಕೆಲವೇ ಗುತ್ತಿಗೆದಾರರ ಪಾಲಾಗಲಿದೆ. ಅವರು ನ್ಯಾಯಬೆಲೆ ಅಂಗಡಿ ಮಾಲೀಕರಿಗಿಂತಲೂ ಹೆಚ್ಚು ವಿದ್ಯಾವಂತರಾಗಿದ್ದು ಕೈಚಳಕಕ್ಕೆ ಇನ್ನೂ ಹೆಚ್ಚಿನ ಅವಕಾಶ ಇರುತ್ತದೆ.

ದೆಹಲಿ ಸರ್ಕಾರದ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ, ವಕೀಲರಾದ ಅಸ್ಮಿತಾ ಸಿಂಗ್‌, ರಾಹುಲ್‌ ಮಿಶ್ರಾ ವಾದಿಸಿದರು. ದೆಹಲಿ ಸರ್ಕಾರಿ ಪಡಿತರ ವಿತರಕರ ಸಂಘವನ್ನು ವಕೀಲರಾದ ವಿಶ್ವೇಶ್ವರ ಶ್ರೀವಾಸ್ತವ ಪ್ರತಿನಿಧಿಸಿದ್ದರು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಐಶ್ವರ್ಯ ಭಾಟಿ ಮತ್ತು ವಕೀಲ ಗೌತಮ್‌ ನಾರಾಯಣ್‌ ಅವರ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದರು.

ಮುಖ್ಯಮಂತ್ರಿ ಘರ್‌ ರೇಷನ್‌ ಯೋಜನೆಯು ಜಿಎನ್‌ಸಿಟಿಡಿ ಕಾಯಿದೆ, ಪಿಡಿಎಸ್‌ ವ್ಯವಸ್ಥೆಯ ನಿಯಮಾವಳಿ, ಎನ್‌ಎಫ್‌ಎಸ್‌ಎ ಹಾಗೂ ಸಂವಿಧಾನದ ಉಲ್ಲಂಘನೆಯಾಗಿದ್ದು ಅದನ್ನು ಸ್ಥಗಿತಗೊಳಿಸಬೇಕು ಎಂದು ಅರ್ಜಿ ಸಲ್ಲಿಸಿದ್ದ ಸಂಘ ಕೋರಿತ್ತು.