ಚಿಕ್ಕಮಗಳೂರು ಜಿಲ್ಲೆಯ ಜಾಗರ ಹೋಬಳಿಯ ಕೊಳಗಾಮೆ ಗ್ರಾಮದ ಅನ್ನಪೂರ್ಣೇಶ್ವರಿ ಎಸ್ಟೇಟ್‌ನಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿಗೆ ಕರ್ನಾಟಕ ಹೈಕೋರ್ಟ್ ಈಚೆಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಚಿಕ್ಕನಾಯಕನಹಳ್ಳಿಯ ಆರೋಪಿ ನಿಶಾಂತ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರರ ಪರ ವಕೀಲರಾದ ಪಿ ಎಸ್ ಉತ್ಸವ ಗೌಡ ಹಾಗೂ ಪಿ ಇ ಸುರೇಶ್ ಅವರು “ಪೊಲೀಸರು ಆರೋಪಿಯನ್ನು ಬಂಧಿಸುವಾಗ ಸೂಕ್ತ ಕಾರಣ ನೀಡಿಲ್ಲ. ಇದು ಸುಪ್ರೀಂ ಕೋರ್ಟ್ ಪಂಕಜ್ ಬನ್ಸಾಲ್ ವರ್ಸಸ್ ಕೇಂದ್ರ ಸರ್ಕಾರ, ಪ್ರಬೀರ್ ಪುರಕಾಯಸ್ಥ ವರ್ಸಸ್ ದೆಹಲಿ ಸರ್ಕಾರ ಹಾಗೂ ವಿಹಾನ್ ಕುಮಾರ್ ವರ್ಸಸ್ ಹರಿಯಾಣ ರಾಜ್ಯಗಳ ನಡುವಿನ ಪ್ರಕರಣಗಳಲ್ಲಿ ನೀಡಿರುವ ತೀರ್ಪಿಗೆ ವಿರುದ್ಧವಾದ ನಡೆಯಾಗಿದೆ ಎಂದು ಪ್ರಬಲ ವಾದ ಮಂಡಿಸಿದರು. ಇದನ್ನು ಪೀಠವು ಪುರಸ್ಕರಿಸಿ, ಅರ್ಜಿದಾರ ಆರೋಪಿಗೆ ಜಾಮೀನು ಮಂಜೂರು ಮಾಡಿದೆ.
ಅರ್ಜಿದಾರರು ₹1 ಲಕ್ಷ ಮೊತ್ತದ ಬಾಂಡ್ ಹಾಗೂ ಇಷ್ಟೇ ಮೊತ್ತಕ್ಕೆ ಇಬ್ಬರ ಭದ್ರತೆ ಒದಗಿಸಬೇಕು ಎಂಬುದೂ ಸೇರಿ ಸಾಮಾನ್ಯ ಷರತ್ತುಗಳನ್ನು ವಿಧಿಸಿದೆ. ಪ್ರತಿವಾದಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿರುವ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 28ಕ್ಕೆ ಮುಂದೂಡಿದೆ.
ಅನ್ನಪೂರ್ಣೇಶ್ವರಿ ಎಸ್ಟೇಟ್‌ನಲ್ಲಿ 2024ರ ನವೆಂಬರ್ 21ರಂದು ನಡೆದಿದ್ದ ಲಲಿತಮ್ಮ ಹಾಗೂ ಅವರ ಪತಿ ಬಸಪ್ಪ ಅವರ ಜೋಡಿ ಕೊಲೆಗೆ ಸಂಬಂಧಿಸಿದಂತೆ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಚಿಕ್ಕಮಗಳೂರಿನ ಎರಡನೇ ಹೆಚ್ಚುವರಿ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ನಡೆಯುತ್ತಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.