ಮನೆ ನಿರ್ಮಾಣಕ್ಕೆಂದು ಪತ್ನಿಯ ಪೋಷಕರಲ್ಲಿ ಹಣ ಕೇಳುವುದು ಕೂಡ ವರದಕ್ಷಿಣೆ ಬೇಡಿಕೆ ಎಂದು ಹೇಳಿರುವ ಸುಪ್ರೀಂಕೋರ್ಟ್ ವರದಕ್ಷಿಣೆ ನಿಷೇಧ ಕಾಯಿದೆ, 1961ರ ಸೆಕ್ಷನ್ 2ರಲ್ಲಿ ವ್ಯಾಖ್ಯಾನಿಸಲಾದ ಆಸ್ತಿ ಅಥವಾ ಯಾವುದೇ ರೀತಿಯ ಮೌಲ್ಯಯುತ ಭದ್ರತೆಗೆ ಸಂಬಂಧಿಸಿದಂತೆ ಮಹಿಳೆಗೆ ಬೇಡಿಕೆ ಇಡುವುದು ವರದಕ್ಷಿಣೆಗೆ ಸಮನಾಗಿರುತ್ತದೆ ಎಂದು ಮಂಗಳವಾರ ತೀರ್ಪು ನೀಡಿದೆ [ಮಧ್ಯಪ್ರದೇಶ ಸರ್ಕಾರ ಮತ್ತು ಜೋಗೇಂದ್ರ ಇನ್ನಿತರರು].
ಪ್ರಸ್ತುತ ಪ್ರಕರಣದಲ್ಲಿ ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಕೆಯ ಪತಿ ಮತ್ತು ಮಾವನನ್ನು ದೋಷಮುಕ್ತಗೊಳಿಸಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ಐಪಿಸಿ ಸೆಕ್ಷನ್ 304 ಬಿ ಅಡಿಯಲ್ಲಿ ವರದಕ್ಷಿಣೆ ಸಾವಿನಂತಹ ಅಪರಾಧದ ವಿಚಾರಣೆ ನಡೆಸುವಾಗ "ವರದಕ್ಷಿಣೆ" ಎಂಬ ಪದಕ್ಕೆ ಉದಾರ ಮತ್ತು ವಿಸ್ತಾರ ವ್ಯಾಖ್ಯಾನ ನೀಡಬೇಕು ಎಂದು ಹೇಳಿದೆ.
ಆದ್ದರಿಂದ, ಆರೋಪಿಗಳೊಡನೆ ಸೇರಿ ಹೆಂಡತಿಯೂ ಮನೆ ನಿರ್ಮಾಣಕ್ಕೆ ಹಣ ಕೇಳಿದ್ದನ್ನು ವರದಕ್ಷಿಣೆ ಬೇಡಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಹೇಳಿರುವುದು ತಪ್ಪು ಎಂದು ಪೀಠ ತಿಳಿಸಿತು. ಅಲ್ಲದೆ ಸೆಕ್ಷನ್ 304 ಬಿ ಅಡಿಯಲ್ಲಿ ವರದಕ್ಷಿಣೆ ಸಾವಿನ ಆರೋಪಿಗಳನ್ನು ಖುಲಾಸೆಗೊಳಿಸುವ ಕುರಿತು ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿ ಆರೋಪಿಗಳಿಗೆ ಏಳು ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಿತು. ಆದರೆ ನಿರ್ಣಾಯಕ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಸೆಕ್ಷನ್ 306ರ ಅಡಿಯಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧಕ್ಕಾಗಿ ಅವರನ್ನು ಖುಲಾಸೆಗೊಳಿಸುವ ಹೈಕೋರ್ಟ್‌ನ ತೀರ್ಪಿನಲ್ಲಿ ಅದು ಮಧ್ಯಪ್ರವೇಶಿಸಲಿಲ್ಲ.