Dr. B R Ambedkar and Karnataka HC 
ಸುದ್ದಿಗಳು

ಡಾ. ಅಂಬೇಡ್ಕರ್‌ ಫೋಟೊ ವಿವಾದ: ವಿಧಾನ ಪರಿಷತ್‌ ಉಪ ಕಾರ್ಯದರ್ಶಿ ಅಮಾನತು ಆದೇಶಕ್ಕೆ ಹೈಕೋರ್ಟ್‌ ತಡೆ

ಅಗತ್ಯ ಬಿದ್ದರೆ ತಡೆ ಆದೇಶವನ್ನು ಬದಲಿಸಲು ಅಥವಾ ಮಾರ್ಪಡಿಸಲು ಪ್ರತಿವಾದಿಗಳು ಕೋರಬಹುದು ಎಂದೂ ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

Bar & Bench

ಸಂವಿಧಾನದ ದಿನದ ಅಂಗವಾಗಿ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ 2024ರ ನವೆಂಬರ್ 26ರಂದು ಆಯೋಜಿಸಿದ್ದ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮದ ವೇಳೆ ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇರಿಸಿಲ್ಲ ಎಂಬ ಆರೋಪದ ಹಿನ್ನಲೆಯಲ್ಲಿ ಪರಿಷತ್ತಿನ ಉಪ ಕಾರ್ಯದರ್ಶಿ ಕೆ ಜೆ ಜಲಜಾಕ್ಷಿ ಅವರನ್ನು ಅಮಾನತುಗೊಳಿಸಿ ವಿಧಾನ ಪರಿಷತ್ತಿನ ಕಾರ್ಯದರ್ಶಿ ಹೊರಡಿಸಿದ್ದ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ಅಮಾನತು ಆದೇಶ ರದ್ದುಪಡಿಸುವಂತೆ ಕೋರಿ ಕೆ ಜೆ ಜಲಜಾಕ್ಷಿ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಎಚ್ ಟಿ ನರೇಂದ್ರ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪರಿಷತ್ತಿನ ಉಪ ಕಾರ್ಯದರ್ಶಿ ಕೆ ಜೆ ಜಲಜಾಕ್ಷಿ ಅವರನ್ನು ಅಮಾನತುಗೊಳಿಸಿ ಜುಲೈ 4ರಂದು ವಿಧಾನ ಪರಿಷತ್ತಿನ ಕಾರ್ಯದರ್ಶಿ ಹೊರಡಿಸಿದ್ದ ಆದೇಶಕ್ಕೆ ಅರ್ಜಿಯ ಮುಂದಿನ ವಿಚಾರಣೆವರೆಗೆ ತಡೆ ನೀಡಲಾಗಿದೆ. ಅಲ್ಲದೇ ವಿಧಾನ ಪರಿಷತ್ತಿನ ಸಭಾಪತಿ ಹಾಗೂ ಕಾರ್ಯದರ್ಶಿಯವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಅಗತ್ಯ ಬಿದ್ದರೆ ತಡೆ ಆದೇಶವನ್ನು ಬದಲಿಸಲು ಅಥವಾ ಮಾರ್ಪಡಿಸಲು ಪ್ರತಿವಾದಿಗಳು ಕೋರಬಹುದು ಎಂದೂ ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರರ ಪರ ವಕೀಲರು “ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮಕ್ಕಾಗಿ ಹೊರಡಿಸಲಾಗಿದ್ದ ಸುತ್ತೋಲೆಯಲ್ಲಿ ಅಂಬೇಡ್ಕರ್ ಅವರ ಫೋಟೊ ಇರಿಸುವ ಬಗ್ಗೆ ನಿರ್ದಿಷ್ಟವಾಗಿ ಹೇಳಿರಲಿಲ್ಲ. ಶಿಷ್ಠಾಚಾರ ಉಲ್ಲಂಘನೆ, ಕರ್ತವ್ಯ ಲೋಪ ಆಗಿರುವ ಬಗ್ಗೆ ನೀಡಲಾಗಿದ್ದ ನೋಟಿಸ್‌ಗೆ ಅರ್ಜಿದಾರರು ವಿವರವಾಗಿ ಉತ್ತರಿಸಿದ್ದಾರೆ. ತಾನು ಕಾರ್ಯಕ್ರಮದ ಆಯೋಜಕಿ ಅಲ್ಲ, ನಾನು ಹೊಣೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಭಾಪತಿಯವರು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿ ಪ್ರಕರಣ ಮುಕ್ತಾಯಗೊಳಿಸಿದ್ದರು. ಆದರೆ, ಕೆಲವು ಸಂಘಟನೆಗಳು ಜುಲೈ 3ರಂದು ದೂರು ನೀಡಿ ಒತ್ತಡ ತಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ. ಒಂದು ವರ್ಷದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಅದನ್ನು ತಡೆಯಲು ಈ ರೀತಿ ಮಾಡಲಾಗಿದೆ. ಆದ್ದರಿಂದ, ಅಮಾನತು ಆದೇಶ ರದ್ದುಪಡಿಸಬೇಕು” ಎಂದು ಮನವಿ ಮಾಡಿದರು.