ಡಾ.ಬಿ.ಆರ್.ಅಂಬೇಡ್ಕರ್ ಮತ್ತು ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ 
ಸುದ್ದಿಗಳು

ಅಂಬೇಡ್ಕರ್ ಕೇವಲ ದಲಿತರ ನಾಯಕರಲ್ಲ. ಇಡೀ ದೇಶಕ್ಕೆ ಸೇರಿದವರು: ಸಿಜೆಐ ಡಿ ವೈ ಚಂದ್ರಚೂಡ್

ಸಾಮಾಜಿಕ ನ್ಯಾಯಕ್ಕಾಗಿ ಜನರನ್ನು ಅಣಿಗೊಳಿಸಲು ಡಾ. ಅಂಬೇಡ್ಕರ್ ಅವರ ದಣಿವರಿಯದ ಯತ್ನಗಳನ್ನು ವಿವರಿಸಿದ ಸಿಜೆಐ, ಸಾಮಾಜಿಕ ನ್ಯಾಯ ಎಂಬುದು ಸಮಾಜದ ಅಂಚಿನಲ್ಲಿರುವವರಿಗೆ ಮಾತ್ರ ಸೀಮಿತವಾಗಿಲ್ಲ ಎಂದರು.

Bar & Bench

ಸಂವಿಧಾನ ಶಿಲ್ಪಿ ಡಾ. ಬಿ ಆರ್‌ ಅಂಬೇಡ್ಕರ್ ಅವರು ಕೇವಲ ದಲಿತ ಸಮುದಾಯದ ನಾಯಕರಲ್ಲ, ಅವರು ಇಡೀ ದೇಶಕ್ಕೆ ಸೇರಿದವರು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ಡಾ. ಬಿ ಆರ್‌ ಅಂಬೇಡ್ಕರ್ ಅವರು ವಕೀಲರಾಗಿ ನೋಂದಾಯಿಸಿಕೊಂಡು 100 ವರ್ಷಗಳು ಸಂದ ಸ್ಮರಣಾರ್ಥ ಹಮ್ಮಿಕೊಳ್ಳಲಾಗುವ ಕಾರ್ಯಕಾರಿ ಅಧಿವೇಶನ ಹಿನ್ನೆಲೆಯಲ್ಲಿ ಭಾನುವಾರ ನಡೆದ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು

ಸಾಮಾಜಿಕ ನ್ಯಾಯಕ್ಕಾಗಿ ಜನರನ್ನು ಅಣಿಗೊಳಿಸಲು ಡಾ. ಅಂಬೇಡ್ಕರ್ ಅವರ ದಣಿವರಿಯದ ಯತ್ನಗಳನ್ನು ವಿವರಿಸಿದ ಸಿಜೆಐ, ಸಾಮಾಜಿಕ ನ್ಯಾಯ ಎಂಬುದು ಸಮಾಜದ ಅಂಚಿನಲ್ಲಿರುವವರಿಗೆ ಮಾತ್ರ ಸೀಮಿತವಾಗಿಲ್ಲ ಎಂದರು.

"ನಾವು ಈ ಅಧಿವೇಶನವನ್ನು ಏಕೆ ನಡೆಸುತ್ತಿದ್ದೇವೆ ಮತ್ತು ಪ್ರತಿಮೆಯನ್ನು ಸ್ಥಾಪಿಸುತ್ತಿದ್ದೇವೆ ಎಂಬುದಕ್ಕೆ ಆಳವಾದ ಕಾರಣಗಳಿವೆ. ಡಾ. ಅಂಬೇಡ್ಕರ್ ಎಲ್ಲರಿಗೂ ಸೇರಿದವರು. ಅವರು ಕೇವಲ ಅಸ್ಪೃಶ್ಯರ ನಾಯಕರಲ್ಲ, ಇಡೀ ರಾಷ್ಟ್ರವನ್ನು ಪ್ರತಿನಿಧಿಸುತ್ತಾರೆ. ಸಾಮಾಜಿಕ ನ್ಯಾಯಕ್ಕಾಗಿ ಜನರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಅವರ ಯತ್ನಗಳಿದ್ದವು... ಸಾಮಾಜಿಕ ನ್ಯಾಯ ಕೇವಲ ಸಮಾಜದ ಅಂಚಿನಲ್ಲಿರುವವರ ಯೋಜನೆಯಲ್ಲ" ಎಂದು ಅವರು ಹೇಳಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಡಾ. ಅಂಬೇಡ್ಕರ್‌ ಅವರು ತಮ್ಮನ್ನು ಮುಖ್ಯವಾಹಿನಿಯ ಭಾಗವೆಂದು ಗುರುತಿಸಿಕೊಂಡು ಅದರ ಸುಧಾರಣೆಗೆ ಯತ್ನಿಸಿದರು.

  • ಸುಪ್ರೀಂ ಕೋರ್ಟ್‌ನಲ್ಲಿರುವ (ನಿನ್ನೆ ಅನಾವರಣಗೊಳಿಸಲಾದ) ಅಂಬೇಡ್ಕರ್ ಅವರ ಪ್ರತಿಮೆ ಸ್ವಾತಂತ್ರ್ಯ, ಭ್ರಾತೃತ್ವ ಹಾಗೂ ಸಮಾನತೆಯ ಶಾಶ್ವತ ಪ್ರಜ್ಞೆಯನ್ನು ಪ್ರತಿನಿಧಿಸುತ್ತದೆ.

  • ಸಕಾರಾತ್ಮಕ ಕ್ರಿಯೆ ಎಂಬುದು ವ್ಯಕ್ತಿಗಳಿಗೆ ಸಮಾನ ನೆಲೆಯಲ್ಲಿ ಕಾರ್ಯನಿರ್ವಹಿಸಲು ವೇದಿಕೆ ಒದಗಿಸುತ್ತದೆ.

  • ವಕೀಲ ಸಮುದಾಯ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿ ಮಹಿಳೆಯರ ಸೀಮಿತ ಲಭ್ಯತೆಯಿಂದಾಗಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಅವರ ಕಡಿಮೆ ಪ್ರಾತಿನಿಧ್ಯ ಕಂಡುಬರುತ್ತಿದೆ. ಆದರೆ ಜಿಲ್ಲಾ ನ್ಯಾಯಾಂಗದಲ್ಲಿ ಹೊಸದಾಗಿ ನೇಮಕಗೊಂಡವರಲ್ಲಿ ಶೇ 60-80ರಷ್ಟು ಮಂದಿ ಮಹಿಳೆಯರೇ ಇರುವುದು ಆಶಾದಾಯಕ.

  • ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ (ಸಿಎಲ್ಎಟಿ) ಯಂತಹ ಪರೀಕ್ಷೆಗಳಿಗೆ ಸೃಷ್ಟಿಯಾಗುವ ಕೋಚಿಂಗ್ ಕೇಂದ್ರಗಳು ಸಮಾಜದಂಚಿನಲ್ಲಿರುವವರ ಮತ್ತು ಗ್ರಾಮೀಣ ಹಿನ್ನೆಲೆಯವರಿಗೆ ಅಲಭ್ಯವಾಗಿರುವುದನ್ನು ಅವರು ಪ್ರಸ್ತಾಪಿಸಿದರು. ಏಕೆಂದರೆ ಅಂತಹವರು ಪ್ರವೇಶ ಪಡೆಯಲು ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬೇಕಾಗುತ್ತದೆ ಎಂದರು.

  • ವಿಶಾಲ ಮತ್ತು ಹೆಚ್ಚು ವೈವಿಧ್ಯಮಯ ಪ್ರತಿಭೆಗಳನ್ನು ಸೆಳೆಯಲು ಸುಪ್ರೀಂ ಕೋರ್ಟ್‌ನ ವಕೀಲ ಗುಮಾಸ್ತಿಕೆ ಯೋಜನೆಯನ್ನು ಈಗ 20ಕ್ಕೂ ಹೆಚ್ಚು ನಗರಗಳಲ್ಲಿ ನಡೆಸಲಾಗುತ್ತಿದೆ.