Ujjwal Nikam 
ಸುದ್ದಿಗಳು

26/11 ದಾಳಿ ಭಾರತೀಯರು ಹಾಗೂ ಜಗತ್ತಿನ ಮೇಲೆ ನಡೆಸಿದ ಭಾವನಾತ್ಮಕ ಆಕ್ರಮಣವಾಗಿತ್ತು: ಖ್ಯಾತ ನ್ಯಾಯವಾದಿ ಉಜ್ವಲ್ ನಿಕಂ

“ಮುಂಬೈನ ಬಾಲಿವುಡ್ ಲೋಕ ಹೇಗಿರುತ್ತದೆ ಎಂದು ನೋಡಲು ಬಂದದ್ದಾಗಿ ಉಗ್ರ ಕಸಾಬ್ ಹೇಳಿಕೆ ನೀಡಿದ್ದ. ಆದರೆ ಸಿಸಿಟಿವಿ ದೃಶ್ಯಗಳಲ್ಲಿ ಆತ ಎಕೆ 47 ಬಂದೂಕು ಹಿಡಿದು ನಗು ನಗುತ್ತ ದಾಳಿಯಲ್ಲಿ ತೊಡಗಿದ್ದು ದಾಖಲಾಗಿತ್ತು” ಎಂದು ನಿಕಂ ವಿವರಿಸಿದರು.

Ramesh DK

“ಮುಂಬೈ ಮೇಲೆ 2008ರ ನವೆಂಬರ್‌ 26ರಂದು ನಡೆದ ದಾಳಿ ನಗರ ಗೆರಿಲ್ಲಾ ಸಮರವಾಗಿತ್ತು. ಮುಂಬೈ ನಗರ ಇದರಿಂದ ಭೌತಿಕವಾಗಿ ದಾಳಿಗೊಳಗಾಯಿತು. ಆದರೆ ಕೋಟ್ಯಂತರ ಭಾರತೀಯರು ಜೊತೆಗೆ ಜಗತ್ತು ಮಾನಸಿಕವಾಗಿ, ಭಾವನಾತ್ಮಕವಾಗಿ ಆಕ್ರಮಣಕ್ಕೆ ತುತ್ತಾಯಿತು” ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ವಿಶೇಷ ಸರ್ಕಾರಿ ಅಭಿಯೋಜಕರಾಗಿ ಸೇವೆ ಸಲ್ಲಿಸಿರುವ ಹಿರಿಯ ನ್ಯಾಯವಾದಿ ಉಜ್ವಲ್‌ ನಿಕಂ ಅಭಿಪ್ರಾಯಪಟ್ಟರು.

ಮುಂಬೈ ದಾಳಿಯ ವಿಚಾರಣೆ ಕುರಿತಂತೆ ಬಿಯಾಂಡ್‌ ಲಾ ಸಿಎಲ್‌ಸಿ, ದಕ್ಷ ಲೀಗಲ್‌ ಚಾರಿಟೆಬಲ್‌ ಟ್ರಸ್ಟ್‌ ಹಾಗೂ ಕ್ರಿಸ್ತು ಜಯಂತಿ ಕಾನೂನು ಕಾಲೇಜು ಶನಿವಾರ ಆಯೋಜಿಸಿದ್ದ ವೆಬಿನಾರ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಘಟನೆ ಕುರಿತಂತೆ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು. “ಮುಂಬೈನಲ್ಲಿ ಹನ್ನೆರಡು ಕಡೆ ದಾಳಿ ನಡೆದಿತ್ತು. ನಗರದ ವಿವಿಧ ಪೊಲೀಸ್‌ ಠಾಣೆಯಲ್ಲಿ ಹನ್ನೆರಡು ಬೇರೆ ಬೇರೆ ಪ್ರಕರಣಗಳು ದಾಖಲಾಗಿದ್ದವು. 3,500ರಷ್ಟು ಸಾಕ್ಷಿಗಳಿದ್ದವು. ಇಂತಹ ದೊಡ್ಡ ಪ್ರಕರಣವನ್ನು ಸಾಧ್ಯವಾದಷ್ಟು ಶೀಘ್ರವಾಗಿ ವಿಚಾರಣೆ ನಡೆಸುವ ಸವಾಲು ನನ್ನ ಎದುರಿಗಿತ್ತು” ಎಂದು ಅವರು ಹೇಳಿದರು.

“1993ರ ಬಾಂಬೆ ಸರಣಿ ಸ್ಫೋಟದ ವಿಚಾರಣೆ ನಡೆಸಿದ ಅನುಭವವಿದ್ದ ನನಗೆ ಅದರ ವಿಚಾರಣೆ ಪೂರ್ಣಗೊಳ್ಳಲು ದಶಕದಷ್ಟು ಕಾಲ ತೆಗೆದುಕೊಂಡಿದ್ದು ಅರಿವಿತ್ತು. ಹಾಗಾಗಿ ಈ ಪ್ರಕರಣದಲ್ಲಿ ಆದಷ್ಟು ಬೇಗ ವಿಚಾರಣೆ ಪೂರ್ಣಗೊಳಿಸುವುದು ಮುಖ್ಯವಾಗಿತ್ತು” ಎಂದರು.

“26/11 ಘಟನೆ ವೇಳೆ ನಡೆದ ಪ್ರತಿದಾಳಿಯಲ್ಲಿ ಒಂಬತ್ತು ಉಗ್ರರು ಮೃತಪಟ್ಟಿದ್ದರು. ಆದರೆ ಅಜ್ಮಲ್‌ ಕಸಬ್‌ ಜೀವಂತವಾಗಿ ಸೆರೆಸಿಕ್ಕ ಏಕೈಕ ಉಗ್ರನಾಗಿದ್ದ. ಅವನೇನೋ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ. ಆದರೆ ಅಷ್ಟಕ್ಕೇ ಸುಮ್ಮನಾಗದೆ ನಾನು ವಿಚಾರಣೆ ಮುಂದುವರೆಸಿದೆ. ಖುದ್ದು ಕಸಬ್‌ ತಪ್ಪೊಪ್ಪಿಕೊಂಡರೂ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ವಿಚಾರಣೆ ಮುಂದುವರೆಸುತ್ತಿರುವುದೇಕೆ ಎಂದು ದೃಶ್ಯ ಮಾಧ್ಯಮಗಳಲ್ಲಿ ದೊಡ್ಡ ಚರ್ಚೆಯಾಯಿತು” ಎಂದು ಅಂದಿನ ದಿನಗಳನ್ನು ಅವರು ಸ್ಮರಿಸಿದರು.

“ದಾಳಿಕೋರರ ಜೊತೆ ಪಾಕಿಸ್ತಾನದಿಂದ ಬಂದದ್ದಾಗಿ ಕಸಬ್‌ ಒಪ್ಪಿಕೊಂಡಿದ್ದ. ತಾನು ದಾಳಿ ಸಂಚಿನಲ್ಲಿ ಭಾಗವಹಿಸಿರಲಿಲ್ಲ, ಬದಲಿಗೆ ಮುಂಬೈನ ಬಾಲಿವುಡ್‌ ಲೋಕ ಹೇಗಿರುತ್ತದೆ ಎಂದು ನೋಡಲು ದಾಳಿಕೋರರ ಜೊತೆ ಬಂದದ್ದಾಗಿ ಆತ ಹೇಳಿಕೆ ನೀಡಿದ್ದ. ಆದರೆ ನಗರದ ಛತ್ರಪತಿ ಶಿವಾಜಿ ಟರ್ಮಿನಸ್‌ನ ಸಿಸಿಟಿವಿ ದೃಶ್ಯವಾಳಿಗಳಲ್ಲಿ ಆತ ಎಕೆ 47 ಬಂದೂಕು ಹಿಡಿದು ನಗು ನಗುತ್ತ ದಾಳಿಯಲ್ಲಿ ತೊಡಗಿದ್ದು ದಾಖಲಾಗಿತ್ತು. ಹಾಗಾಗಿ ಅವನ ತಪ್ಪೊಪ್ಪಿಗೆ ಹೇಳಿಕೆ ಕುರಿತು ಎಚ್ಚರಿಕೆಯಿಂದ ಇದ್ದೆ” ಎಂದು ನಿಕಂ ತಿಳಿಸಿದರು.

“ಇಂತಹ ಅಪರೂಪದ ಪ್ರಕರಣವನ್ನು ವಿವಿಧ ಆಯಾಮಗಳಿಂದ ಪರಿಶೀಲಿಸಬೇಕಿತ್ತು. ಇದು ಕೇವಲ ಕೆಲವು ವ್ಯಕ್ತಿಗಳು ಇನ್ನುಳಿದ ವ್ಯಕ್ತಿಗಳ ಮೇಲೆ ನಡೆಸಿದ ಆಕ್ರಮಣವಾಗಿರಲಿಲ್ಲ. ದಾಳಿಕೋರರಿಗೆ ತಾವು ದಾಳಿ ಮಾಡಿದ ಜನಗಳ ಮೇಲೆ ಯಾವ ವೈಯಕ್ತಿಕ ದ್ವೇಷ ಇರಲಿಲ್ಲ” ಎಂದ ಅವರು “ ಇದು ಭಾರತ ಹಾಗೂ ಭಾರತೀಯರ ಮೇಲೆ ನಡೆದ ದಾಳಿಯಾಗಿತ್ತು. ವಿದೇಶಿಯರನ್ನು ಹತ್ಯೆ ಮಾಡಲಾಗಿತ್ತು. ವಿದೇಶಿ ಪ್ರಜೆಗಳಿಂದ ನಡೆದ ಆಕ್ರಮಣ ಇದಾಗಿತ್ತು. ಅವರ ಬಳಿ ನಿಷೇಧಿತ ಆಯುಧಗಳಿದ್ದವು. ಹಾಗೂ ಕಾಶ್ಮೀರ ವಿಮುಕ್ತಿಗಾಗಿ ಭಾರತ ಸರ್ಕಾರದ ವಿರುದ್ಧ ಅವರು ಮುಂಬೈ ಮಾತ್ರವಲ್ಲ ಉಳಿದ ನಗರಗಳ ಮೇಲೂ ದಾಳಿಗೆ ಸಿದ್ಧವಾಗಿದ್ದರು ಎಂಬ ಆಧಾರದ ಮೇಲೆ ಸಾಕ್ಷ್ಯಗಳನ್ನು ಮಂಡಿಸಲಾಯಿತು” ಎಂದು ತಿಳಿಸಿದರು.

“ಇಷ್ಟಕ್ಕೇ ನಾನು ಸುಮ್ಮನಾಗಲಿಲ್ಲ. ಅಮೆರಿಕದಲ್ಲಿ ಬಂಧಿತನಾಗಿದ್ದ ಮತ್ತೊಬ್ಬ ಉಗ್ರ ಡೇವಿಡ್‌ ಹೆಡ್ಲಿಯ ವಿಚಾರಣೆಯನ್ನು ಕೂಡ ನಡೆಸಿದೆ. ದಾಳಿಗೂ ಮುನ್ನ ಆತ ಮುಂಬೈಗೆ ಭೇಟಿ ನೀಡಿದ್ದ. ದಾಳಿ ನಡೆಸಿದ ಸ್ಥಳಗಳ ಛಾಯಾಚಿತ್ರ ತೆಗೆದಿದ್ದ. ಅವುಗಳನ್ನು ಲಷ್ಕರ್‌-ಇ-ತಯ್ಯಬಾ ಉಗ್ರರ ಜೊತೆ ಹಂಚಿಕೊಂಡಿದ್ದ. ಸೇನಾ ಅಧಿಕಾರಿಗಳು ಕೂಡ ಉಗ್ರರ ಜೊತೆ ಕೈಜೋಡಿಸಿದ್ದನ್ನು ವಿಚಾರಣೆ ವೇಳೆ ಹೇಳಿದ್ದ” ಎಂದರು.

ದಾಳಿ ಕುರಿತಂತೆ ಪಾಕಿಸ್ತಾನ ಸಾಕ್ಷ್ಯಗಳನ್ನು ಕೇಳಿದ್ದ ಘಟನೆಯನ್ನು ನೆನೆದ ಅವರು “ಈ ಸಂಬಂಧ ನಿಯೋಗವೊಂದನ್ನು ಕೇಂದ್ರ ಸರ್ಕಾರ ರಚಿಸಿತ್ತು. ನಾನು ಕೂಡ ನಿಯೋಗದ ಸದಸ್ಯನಾಗಿದ್ದೆ. ನಾವೆಲ್ಲಾ ಪಾಕಿಸ್ತಾನಕ್ಕೆ ತೆರಳಿ ಅಲ್ಲಿನ ಗೃಹ ಸಚಿವಾಲಯಕ್ಕೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದೆವು. ಆದರೆ ಅಲ್ಲಿನ ಸರ್ಕಾರ ಸ್ಪಂದಿಸಲಿಲ್ಲ” ಎಂದು ಹೇಳಿದರು.

ಮುಂಬೈ ದಾಳಿ ವೇಳೆ ಮಾಧ್ಯಮಗಳ ಪಾತ್ರ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಅವರು “ಸುಪ್ರೀಂಕೋರ್ಟ್‌ ಸೇರಿದಂತೆ ನ್ಯಾಯಾಲಯಗಳಲ್ಲಿ ಮಾಧ್ಯಮ ನಿಷೇಧ, ನಿಯಂತ್ರಣ ಹಾಗೂ ಸ್ವಯಂ ನಿರ್ಬಂಧ ಕುರಿತಂತೆ ಹಲವು ಚರ್ಚೆಗಳು ನಡೆದಿವೆ. ಆದರೆ ಮುಂಬೈ ದಾಳಿ ಪ್ರಕರಣದಲ್ಲಿ ಸಾಕ್ಷ್ಯಗಳು, ಸರ್ಕಾರದ ಹಿತಾಸಕ್ತಿಗೆ ಧಕ್ಕೆಯಾಗದ ರೀತಿಯಲ್ಲಿ ಮಾಧ್ಯಮಗಳು ವರದಿ ಮಾಡಿದವು” ಎಂದರು.

ಪಬ್ಲಿಕ್‌ ಪ್ರಾಸಿಕ್ಯೂಟರ್‌ಗಳ ಕರ್ತವ್ಯಗಳೇನು ಎಂಬುದನ್ನು ವಿವರಿಸಿದ ಅವರು “ಪ್ರಕರಣಗಳ ಗುಣಾವಗುಣಗಳೆರಡನ್ನೂ ವಕೀಲರಾದವರು ಗಣನೆಗೆ ತೆಗೆದುಕೊಳ್ಳಬೇಕು. ಅವರು ವಿವಿಧ ಮೂಲಗಳಿಂದ ಜ್ಞಾನ ಪಡೆಯಬೇಕು. ಘಟನೆಯೊಂದನ್ನು ವಿವಿಧ ಆಯಾಮಗಳಿಂದ ನೋಡುವುದನ್ನು ಕಲಿಯಬೇಕು” ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಬಿಯಾಂಡ್‌ ಲಾ ಸಿಎಲ್‌ಸಿ ಸಂಸ್ಥೆಯ ವಿಕಾಸ್‌ ಚರತ್‌, ದಕ್ಷ ಲೀಗಲ್‌ ಚಾರಿಟೆಬಲ್‌ ಟ್ರಸ್ಟ್‌ನ ಎಸ್‌ ಬಸವರಾಜ್‌ ಹಾಗೂ ಕ್ರಿಸ್ತು ಜಯಂತಿ ಕಾನೂನು ಕಾಲೇಜಿನ ಪ್ರಾಂಶುಪಾಲ ಮೋಹನ್‌ ಆರ್‌ ಬೊಳ್ಳ ಉಪಸ್ಥಿತರಿದ್ದರು.