BBMP and Karnataka HC 
ಸುದ್ದಿಗಳು

ತನಿಖಾ ಸಂಸ್ಥೆಯಿಂದ ದಾಖಲೆ ಜಪ್ತಿ ಎಂದು ಬಿಬಿಎಂಪಿ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ನಿರಾಕರಿಸಲಾಗದು: ಹೈಕೋರ್ಟ್‌

ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳು ದಾಖಲೆ ಪಡೆಯುವಂತೆ ಇಲಾಖಾ ಮುಖ್ಯಸ್ಥರು ಅಥವಾ ಬಿಬಿಎಂಪಿ ಮುಖ್ಯಸ್ಥರು ವಿಚಾರಣಾಧೀನ ನ್ಯಾಯಾಲಯದಿಂದ ದಾಖಲೆಯ ಪ್ರತಿಗಳನ್ನು ಪಡೆದುಕೊಳ್ಳಬಹುದು ಎಂದಿರುವ ಹೈಕೋರ್ಟ್‌.

Bar & Bench

ತನಿಖಾ ಸಂಸ್ಥೆಗಳು ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿವೆ ಎಂದು ಬಿಬಿಎಂಪಿಯು ಸಿವಿಲ್ ಗುತ್ತಿಗೆದಾರರಿಗೆ ಬಾಕಿ ಇರುವ ಹಣವನ್ನು ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ಸಿವಿಲ್ ಗುತ್ತಿಗೆದಾರರಾದ ಮೆಸರ್ಸ್ ಓಎಂ ಎಸ್‌ಎಲ್ ವಿ ಕನ್ಟ್ರಕ್ಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ಆದೇಶ ಮಾಡಿದೆ.

“ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳು ದಾಖಲೆ ಪಡೆಯುವಂತೆ ಇಲಾಖಾ ಮುಖ್ಯಸ್ಥರು ಅಥವಾ ಬಿಬಿಎಂಪಿ ಮುಖ್ಯಸ್ಥರು ವಿಚಾರಣಾಧೀನ ನ್ಯಾಯಾಲಯದಿಂದ ದಾಖಲೆಯ ಪ್ರತಿಗಳನ್ನು ಪಡೆದುಕೊಳ್ಳಬಹುದು. ಈ ಪ್ರಕರಣದಲ್ಲಿ ಅರ್ಜಿದಾರರು ಆರೋಪಿಯಾಗಿದ್ದು, ಅವರೂ ಸಹ ದಾಖಲೆ ಕೋರಿ ಅರ್ಜಿ ಸಲ್ಲಿಸಬಹುದು. ಆ ರೀತಿ ಅರ್ಜಿ ಸಲ್ಲಿಸುವ ಬದಲು ಪಾಲಿಕೆ ಮತ್ತು ಅರ್ಜಿದಾರರಿಬ್ಬರೂ ಸಹ ಒಬ್ಬರ ಮೇಲೆ ಒಬ್ಬರು ದೋಷಿಸಿಕೊಂಡು, ಕಾಮಗಾರಿ ಬಿಲ್‌ಗಳ ಪ್ರತಿಗಳನ್ನು ಪಡೆದುಕೊಂಡಿಲ್ಲ. ಹೀಗಾಗಿ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

“ಒಮ್ಮೆ ಕಾಮಗಾರಿ ಪೂರ್ಣಗೊಂಡರೆ ಆ ನಂತರ ಅದರ ಬಿಲ್‌ಗಳನ್ನು ಪಾವತಿಸಲು ಅಗತ್ಯ ಪ್ರಕ್ರಿಯೆಗಳನ್ನು ಬಿಬಿಎಂಪಿ ಮಾಡಬೇಕು. ಏಕೆಂದರೆ ಬಿಬಿಎಂಪಿ ದಾಖಲೆಗಳ ಮೂಲ ವಾರಸುದಾರ. ಅದೇ ನನ್ನ ಬಳಿ ದಾಖಲೆ ಇಲ್ಲ ಎಂದು ನೆಪ ಹೇಳಲಾಗದು. ಒಂದು ವೇಳೆ ದಾಖಲೆಯ ಪ್ರತಿ ಇಲ್ಲದಿದ್ದರೂ ಸಹ ಅದು ಸಂಬಂಧಿಸಿದ ಲೋಕಾಯುಕ್ತ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ, ಪ್ರಮಾಣೀಕೃತ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ತನಿಖಾ ಸಂಸ್ಥೆ ಜಪ್ತಿ ಮಾಡಿರುವ ದಾಖಲೆಗಳನ್ನು ಪಡೆದುಕೊಳ್ಳುವ ಗೋಜಿಗೆ ಹೋಗದೆ, ಅರ್ಜಿದಾರರು ಸಲ್ಲಿಸಿದ್ದ ಬಿಲ್ ಪಾವತಿಗೆ ಪ್ರಕ್ರಿಯೆ ನಡೆಸದ ಬಿಬಿಎಂಪಿ ಕ್ರಮ ಸರಿಯಲ್ಲ ಎಂದೂ ಪೀಠ ಹೇಳಿದೆ.

ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ಬಾಕಿ ಇದೆ ಅದನ್ನು ಪರಿಗಣಿಸಿ ಪಾಲಿಕೆ ಬಿಲ್ ಪಾವತಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಸಿವಿಲ್ ಗುತ್ತಿಗೆದಾರರಾದ ಅರ್ಜಿದಾರರು ಬಿಬಿಎಂಪಿಗೆ 2006ರಲ್ಲಿ 131 ಕಸ ತುಂಬಿಕೊಂಡು ಹೋಗುವ ತಳ್ಳುವ ಗಾಡಿಗಳು, ಎರಡು ಕಾಂಪ್ಯಾಕ್ಟ್ ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಒಂಭತ್ತು ಆಟೊಗಳನ್ನು ಪೂರೈಕೆ ಮಾಡಿದ್ದರು. ಆನಂತರ ಕೆಲಸ ಪೂರ್ಣಗೊಳಿಸಲಾಗಿದೆ ಎಂದು ಬಿಲ್ ಪಾವತಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ, ಆಟೊಗಳನ್ನು ಸರಿಯಾಗಿ ಪೂರೈಕೆ ಮಾಡಿಲ್ಲ ಎಂದು ಎಂಜಿನಿಯರ್ ತಗಾದೆ ತೆಗೆದು, ಗುತ್ತಿಗೆ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದರಿಂದ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಆಗ ನ್ಯಾಯಾಲಯ ಟೆಂಡರ್‌ನಲ್ಲಿ ಅಕ್ರಮಗಳ ಹಿನ್ನೆಲೆಯಲ್ಲಿ ಎಸಿಬಿ ತನಿಖೆಗೆ ಆದೇಶಿಸಿತ್ತು. ತನಿಖೆ ಇನ್ನೂ ಬಾಕಿ ಇರುವಾಗಲೇ ಅರ್ಜಿದಾರರು ಹಣ ಪಾವತಿಸುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು. ಇದರಿಂದ ಕಾಮಗಾರಿಯ ಬಿಲ್ ಸೇರಿದಂತೆ ಎಲ್ಲಾ ದಾಖಲೆಗಳು ತನಿಖಾ ಸಂಸ್ಥೆ ಬಳಿ ಇರುವುದರಿಂದ ಹಣ ಪಾವತಿಸಲಾಗದು ಎಂದು ಬಿಬಿಎಂಪಿ ಹೇಳಿತ್ತು. ಅದನ್ನು ಪ್ರಶ್ನಿಸಿ ಅರ್ಜಿದಾರರು ಮತ್ತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು.

Om SLV Constructions Vs State of Karnataka.pdf
Preview