ದುರ್ಗಾ ಪೂಜೆಯು ಅತ್ಯಂತ ಜಾತ್ಯತೀತ ಹಬ್ಬವಾಗಿದ್ದು, ಅದು ಸಂಪೂರ್ಣವಾಗಿ ಧಾರ್ಮಿಕ ಹಬ್ಬವಲ್ಲ ಎಂದು ಶುಕ್ರವಾರ ಕಲ್ಕತ್ತಾ ಹೈಕೋರ್ಟ್ ಹೇಳಿದೆ [ಮನಾಬ್ ಜಾತಿ ಕಲ್ಯಾಣ್ ಫೌಂಡೇಶನ್ ವರ್ಸಸ್ ಪಶ್ಚಿಮ ಬಂಗಾಳ].
ನಗರದ ನಿರ್ದಿಷ್ಟ ಸಾರ್ವಜನಿಕ ಆವರಣಗಳಲ್ಲಿ ದುರ್ಗಾ ಪೂಜೆ ನಡೆಸಲು ಸಂಘಟನೆಗೆ ಅನುಮತಿಸುವಂತೆ ಕಲ್ಕತ್ತಾದ ಸ್ಥಳೀಯ ಆಡಳಿತಕ್ಕೆ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಆದೇಶಿಸಿದ್ದಾರೆ.
ಅರ್ಜಿದಾರರು ಸಾರ್ವಜನಿಕ ಉದ್ಯಾನ, ರಸ್ತೆ, ಪಾದಚಾರಿ ಮಾರ್ಗ ಸೇರಿದಂತೆ ಇತ್ಯಾದಿ ಕಡೆಗಳಲ್ಲಿ ಪೂಜೆ ಸಲ್ಲಿಸಲು ಸಂವಿಧಾನದ 25ನೇ ವಿಧಿಯಡಿ ಯಾವುದೇ ಹಕ್ಕು ಹೊಂದಿಲ್ಲ ಎಂಬ ಸ್ಥಳೀಯಾಡಳಿತ ವಾದವನ್ನು ಒಪ್ಪಲು ನ್ಯಾಯಾಲಯವು ನಿರಾಕರಿಸಿದೆ.
“ಜನರ ತಿಳಿವಳಿಕೆಯಂತೆ ದುರ್ಗಾ ಪೂಜಾ ಹಬ್ಬವು ಸ್ತ್ರೀಶಕ್ತಿಗೆ ಪೂಜೆ ಸಲ್ಲಿಸಲು ಸೀಮಿತವಾದ, ಧಾರ್ಮಿಕ ಪ್ರಾರ್ಥನಾ ಹಬ್ಬ ಮಾತ್ರವಲ್ಲ, ಇದು ವಿವಿಧ ಸಂಸ್ಕೃತಿಗಳನ್ನು ತನ್ನ ಮೂಸೆಯಲ್ಲಿರಿಸಿಕೊಂಡಿದೆ… ಹೀಗಾಗಿ, ಇದರಲ್ಲಿ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳು, ಹಬ್ಬ ಮತ್ತು ಧಾರ್ಮಿಕ ಪ್ರಾರ್ಥನೆಗಳ ಸಾಂಪ್ರದಾಯಿಕ ಸಂಭ್ರಮದ ಪ್ರದರ್ಶನ ಅಡಕವಾಗಿದೆ. ಈ ನೆಲೆಯಲ್ಲಿ ದುರ್ಗಾ ಪೂಜಾ ಹಬ್ಬವು ನಿರ್ದಿಷ್ಟ ಸಮುದಾಯದ ಧಾರ್ಮಿಕ ಪ್ರದರ್ಶನಕ್ಕಿಂತ ಜಾತ್ಯತೀತ ಹಬ್ಬವಾಗಿದೆ. ಆದ್ದರಿಂದ ಇದನ್ನು ಒಂದು ಸಮುದಾಯದ ಧಾರ್ಮಿಕ ಪೂಜೆ ಎಂಬುದಕ್ಕೆ ಸೀಮಿತಗೊಳಿಸಲಾಗದು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ವಿವಿಧ ಹಬ್ಬಗಳನ್ನು ನಡೆಸಲಾಗುವ ನ್ಯೂಟೌನ್ ಮೇಳಾ ಆವರಣದಲ್ಲಿ ದುರ್ಗಾ ಉತ್ಸವ 2023 ನಡೆಸಲು ಅನುಮತಿ ನಿರಾಕರಿಸಿದ್ದ ಸರ್ಕಾರದ ಪ್ರಾಧಿಕಾರಿಗಳ ಕ್ರಮ ಪ್ರಶ್ನಿಸಿದ್ದ ಅರ್ಜಿಯನ್ನು ನ್ಯಾಯಾಲಯವು ನಡೆಸಿತು.