ಸುದ್ದಿಗಳು

ತ್ರಿಪುರ ಮುನ್ಸಿಪಲ್ ಚುನಾವಣೆ: ಸ್ಥಳಕ್ಕೆ ಎರಡು ಹೆಚ್ಚುವರಿ ಸಿಎಪಿಎಫ್‌ ತುಕಡಿ ಕಳಿಸಿಕೊಡುವಂತೆ ಸೂಚಿಸಿದ ಸುಪ್ರೀಂ

ಗುರುವಾರ ನಡೆಯಲಿರುವ ಚುನಾವಣೆಯಲ್ಲಿ ಮತ ಚಲಾಯಿಸದಂತೆ ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಸಹಾನುಭೂತಿ ಹೊಂದಿರುವವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಸಿಪಿಐ (ಎಂ) ತನ್ನ ಮನವಿಯಲ್ಲಿ ತಿಳಿಸಿತ್ತು.

Bar & Bench

ತ್ರಿಪುರ ಸ್ಥಳೀಯ ಸಂಸ್ಥೆ ಚುನಾವಣೆ ಮತಗಟ್ಟೆ ಸುರಕ್ಷತೆಗೆ ಸಂಬಂಧಿಸಿದಂತೆ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ ಎರಡು ಹೆಚ್ಚುವರಿ ತುಕಡಿಗಳನ್ನು ಸಾಧ್ಯವಾದಷ್ಟು ಬೇಗ ಸ್ಥಳಕ್ಕೆ ಕಳುಹಿಸಿಕೊಡುವಂತೆ ಸುಪ್ರೀಂಕೋರ್ಟ್‌ ಗೃಹಸಚಿವಾಲಯಕ್ಕೆ ಗುರುವಾರ ಸೂಚಿಸಿದೆ.

ಆಡಳಿತಾರೂಢ ಬಿಜೆಪಿಯು ತಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಿ ಮುಂಬರುವ ತ್ರಿಪುರ ಮುನ್ಸಿಪಲ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ವಿರೋಧ ಪಕ್ಷಗಳಲ್ಲಿ ಒಂದಾದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಹಿಂದೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಎಂಸಿ) ಇದೇ ರೀತಿಯ ಆರೋಪಗಳನ್ನು ಮಾಡಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಸಿಪಿಐ(ಎಂ) ಯತ್ನಿಸಿತ್ತು.

ಗುರುವಾರ ನಡೆಯಲಿರುವ ಚುನಾವಣೆಯಲ್ಲಿ ಮತ ಚಲಾಯಿಸದಂತೆ ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಸಹಾನುಭೂತಿ ಹೊಂದಿರುವವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಪಕ್ಷ ತನ್ನ ಮನವಿಯಲ್ಲಿ ತಿಳಿಸಿತ್ತು. ಸುಪ್ರೀಂಕೋರ್ಟ್‌ ಮಧ್ಯಪ್ರವೇಶಿಸಬೇಕಾದಂತಹ ತುರ್ತು ಪರಿಸ್ಥಿತಿ ರಾಜ್ಯದಲ್ಲಿ ಉದ್ಭವಿಸಿದೆ. ಆಡಳಿತಾರೂಢ ಬಿಜೆಪಿಯ ಆಜ್ಞೆಯ ಮೇರೆಗೆ ಭಾರಿ ಸಂಖ್ಯೆಯಲ್ಲಿ ಕಿಡಿಗೇಡಳು ಆ ಪ್ರದೇಶಗಳಿಗೆ ನುಗ್ಗಿ ಪ್ರತಿಪಕ್ಷದ ಬೆಂಬಲಿಗರನ್ನು ಭಯಭೀತರಾಗುವುದರಲ್ಲಿ ನಿರತರಾಗಿದ್ದಾರೆ ಎಂದು ವಕೀಲ ಸುಭಾಷ್ ಚಂದ್ರನ್ ಕೆಆರ್ ಮತ್ತು ವಕೀಲ ಬಿಜು ಪಿ ರಾಮನ್ ಮೂಲಕ ಸಲ್ಲಿಸಿದ ಮಧ್ಯಸ್ಥಿಕೆ ಅರ್ಜಿಯಲ್ಲಿ, ಪಕ್ಷ ಹೇಳಿತ್ತು.

ಸಿಪಿಐ(ಎಂ) ಅಭ್ಯರ್ಥಿ ಸ್ಮೃತಿ ಸರ್ಕರ್ ಅವರ ಮನೆಗೆ ನುಗ್ಗಿದ ವಿರೋಧಿಗಳು ತಮ್ಮ ಬಂದೂಕುಗಳನ್ನು ಬಹಿರಂಗವಾಗಿ ಪ್ರದರ್ಶಿಸುವ ಮೂಲಕ ಬೆದರಿಕೆ ಹಾಕಿದ್ದಾರೆ. ಇದಕ್ಕೆ ತಡೆ ನೀಡದಿದ್ದರೆ ನವೆಂಬರ್‌ 25ರಂದು ನಡೆಯಲಿರುವ ಚುನಾವಣೆಯಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಸೇರಿದಂತೆ ವಿರೋಧ ಪಕ್ಷದ ಸದಸ್ಯರು, ಕಾರ್ಯಕರ್ತರು, ಸಹಾನುಭೂತಿದಾರರು ಹಾಗೂ ಮತದಾರರು ತಮ್ಮ ಹಕ್ಕುಗಳನ್ನು ಮುಕ್ತವಾಗಿ ಚಲಾಯಿಸಲು ಸಾಧ್ಯವಾಗುವುದಿಲ್ಲ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

ಈ ಹಿಂದೆ, ಟಿಎಂಸಿ ಸಲ್ಲಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ವಿಕ್ರಮ್ ನಾಥ್ ಅವರ ಪೀಠ, ರಾಜ್ಯದಲ್ಲಿ ಮುನ್ಸಿಪಲ್ ಚುನಾವಣೆಯ ಪೂರ್ವದಲ್ಲಿ ನಡೆದ ವಿವಿಧ ರಾಜಕೀಯ ಹಿಂಸಾಚಾರದ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳಿಗೆ ಹಲವು ನಿರ್ದೇಶನಗಳನ್ನು ನೀಡಿತ್ತು. ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ ಗುರುವಾರ ಪ್ರಕರಣದ ವಿಚಾರಣೆ ನಡೆಸಿತು.