ಪರಿಷತ್ತಿನ ಅಧ್ಯಕ್ಷರಾಗಿ ಮುಂದುವರೆಯುವ ತನ್ನ ಹಕ್ಕನ್ನು ಕಳೆದುಕೊಂಡಿರುವುದಾಗಿ ಹೇಳಿರುವ ಸುಪ್ರೀಂ ಕೋರ್ಟ್ ವಕೀಲರ ಪರಿಷತ್ (ಎಸ್‌ಸಿಬಿಎ) ಅಧ್ಯಕ್ಷ ದುಷ್ಯಂತ್ ದವೆ ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಎಸ್‌ಸಿಬಿಎ ಕಾರ್ಯಕಾರಿ ಸಮಿತಿಯ ಅವಧಿಯು ಈಗಾಗಲೇ ಪೂರ್ಣಗೊಂಡಿದ್ದು, ಕೆಲವು ವಕೀಲರು ಅಂತರ ಕಾಯ್ದುಕೊಂಡಿರುವುದರಿಂದ ನಿಗದಿತ ಸಮಯದಲ್ಲಿ ವರ್ಚುವಲ್ ಚುನಾವಣೆ ನಡೆಸುವುದು ಅಸಾಧ್ಯ ಎಂದು ಪತ್ರದಲ್ಲಿ ದವೆ ವಿವರಿಸಿದ್ದಾರೆ.
“ಅವರ (ವಕೀಲರು) ಪರಿಸ್ಥಿತಿ ನನಗೆ ಅರ್ಥವಾಗುತ್ತದೆ. ಅದಕ್ಕಾಗಿ ಯಾವುದೇ ಕಲಹ ನಡೆಸುವುದಿಲ್ಲ. ಇಂಥ ಸಂದರ್ಭದಲ್ಲಿ ಅಧ್ಯಕ್ಷನಾಗಿ ಮುಂದುವರೆಯುವುದು ನನಗೆ ನೈತಿಕವಾಗಿ ಸರಿ ಎನಿಸುವುದಿಲ್ಲ,” ಎಂದು ದವೆ ಹೇಳಿದ್ದಾರೆ.
ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಪರಿಷತ್‌ನ ಸದಸ್ಯರು ಮಾಡಿದ ಸಹಾಯ ಮತ್ತು ಸಹಕಾರಕ್ಕೆ ಧನ್ಯವಾದ ಅರ್ಪಿಸುವುದಾಗಿ ಅವರು ಇದೇ ವೇಳೆ ತಿಳಿಸಿದ್ದಾರೆ. ದವೆ ಅವರಲ್ಲದೆ ಎಸ್‌ಸಿಬಿಎ ಕಾರ್ಯಕಾರಿ ಸದಸ್ಯತ್ವಕ್ಕೆ (ಹಿರಿಯ) ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
“ಎಲ್ಲಾ ಅಡೆತಡೆಗಳನ್ನು ಮೀರಿ ಗಣನೀಯವಾದಷ್ಟು ಮೊತ್ತವನ್ನು ನಾವು ಸಂಗ್ರಹಿಸಿದ್ದೇವೆ. ಆ ಮೂಲಕ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ನಮ್ಮ ಸದಸ್ಯರಿಗೆ ನೆರವಾಗಿದ್ದೇವೆ; ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಸಂತ್ರಸ್ತರಿಗೆ ನೆರವಾಗಲು ಹಿಂದೆಂದೂ ನಡೆಸದಂಥ ಅಭಿಯಾನ ನಡೆಸಿದ್ದೇವೆ; ಹೆಚ್ಚುವರಿ ಚೇಂಬರ್‌ಗಳನ್ನು ನಿರ್ಮಿಸುವ ಸಂಬಂಧ ನ್ಯಾಯಾಮೂರ್ತಿಗಳ ಸಮಿತಿಯಿಂದ ಲಿಖಿತ ಒಪ್ಪಿಗೆ ಪಡೆದಿದ್ದೇವೆ; ನಾವು ಒಂದು ಗ್ರಂಥಾಲಯವನ್ನು ಪರಿಷ್ಕರಿಸಿದ್ದೇವೆ ಮತ್ತು ಎಲ್ಲಾ ಗ್ರಂಥಾಲಯಗಳಲ್ಲಿ ಸಾಕಷ್ಟು ರಿಪೇರಿ ಮಾಡಿದ್ದೇವೆ,” ಎಂದು ಸಿಂಗ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದ ಕೃಷಿ ಕಾಯಿದೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಲಾಗಿದ್ದ ಪ್ರಕರಣದಲ್ಲಿ ದವೆ ಅವರು ಕೆಲವು ರೈತರ ಒಕ್ಕೂಟಗಳನ್ನು ಪ್ರತಿನಿಧಿಸಿದ್ದರು. ಸುಪ್ರೀಂ ಕೋರ್ಟ್ ಮೂರು ಕಾಯಿದೆಗಳನ್ನು ಜಾರಿಗೊಳಿಸದಂತೆ ಮಧ್ಯಂತರ ತಡೆ ನೀಡಿತ್ತು.