ED and Karnataka HC 
ಸುದ್ದಿಗಳು

ಮುಡಾ ಪ್ರಕರಣ: ಇ ಡಿ ಶೋಧಕಾರ್ಯ, ಹೇಳಿಕೆ ಕಾನೂನುಬಾಹಿರ ಎಂದು ಘೋಷಿಸಲು ಕೋರಿದ ಮುಡಾ ಮಾಜಿ ಆಯುಕ್ತ; ನೋಟಿಸ್‌ ಜಾರಿ

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇ ಡಿ ತನ್ನ ಮನೆಯಲ್ಲಿ 2024ರ ಅ.28 ಮತ್ತು 29ರಂದು ಶೋಧ ಕಾರ್ಯ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ. ಇದು ಕಾನೂನು ಬಾಹಿರ ಎಂದು ಘೋಷಿಸಬೇಕು ಎಂದು ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್‌ ಕೋರಿದ್ದಾರೆ.

Bar & Bench

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಅಕ್ರಮ ಆರೋಪ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ತನ್ನ ಮನೆಯಲ್ಲಿ ನಡೆಸಿರುವ ಶೋಧ ಕಾರ್ಯ ಹಾಗೂ ಇದಕ್ಕೆ ಸಂಬಂಧಿಸಿದಂತೆ ದಾಖಲು ಮಾಡಿಕೊಂಡಿರುವ ತನ್ನ ಹೇಳಿಕೆ ಕಾನೂನು ಬಾಹಿರ ಎಂದು ಆದೇಶಿಸುವಂತೆ ಕೋರಿ ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಇ ಡಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ.

ಮುಡಾ ಮಾಜಿ ಆಯುಕ್ತ ಡಿ ಬಿ ನಟೇಶ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಯಾದ ಬೆಂಗಳೂರಿನ ಇ ಡಿ ಪ್ರಾದೇಶಿಕ ಅಧಿಕಾರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದ ನ್ಯಾಯಾಲಯವು ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿತು. ನಟೇಶ್‌ ಪರ ಹಿರಿಯ ವಕೀಲ ಸಂದೇಶ್‌ ಜೆ.ಚೌಟ ಮತ್ತು ಇ ಡಿ ಪರ ಪಿ ಪ್ರಸನ್ನಕುಮಾರ್ ವಾದಿಸಿದರು.

ಅರ್ಜಿಯಲ್ಲಿ ಏನಿದೆ?: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇ ಡಿ ತನ್ನ ಮನೆಯಲ್ಲಿ 2024ರ ಅಕ್ಟೋಬರ್‌ 28 ಮತ್ತು 29ರಂದು ಶೋಧ ಕಾರ್ಯ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ. ಅಂತೆಯೇ, ಇದಕ್ಕೆ ಸಂಬಂಧಿಸಿದಂತೆ ನೋಟಿಸ್ ಕೂಡಾ ಜಾರಿಗೊಳಿಸಿದೆ. ಇದು ಕಾನೂನು ಬಾಹಿರ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಒಂದು ವೇಳೆ ಪೀಠವು ಈ ಅರ್ಜಿಯನ್ನು ಪರಿಗಣಿಸಿ, ಕಾನೂನಾತ್ಮಕವಾದ ರಕ್ಷಣೆ ನೀಡದೇ ಹೋದಲ್ಲಿ ಇ ಡಿ ತನ್ನ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗಬಹುದು ಎಂದು ನಟೇಶ್‌ ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ–2002ರ (ಪಿಎಂಎಲ್‌ಎ) ಸೆಕ್ಷನ್‌ 17ರ ಅನುಸಾರ ದಾಖಲಿಸಿಕೊಂಡಿರುವ ನನ್ನ ಹೇಳಿಕೆಯನ್ನು ಕಾನೂನು ಬಾಹಿರ ಎಂದು ಘೋಷಿಸಬೇಕು. ಈ ನಿಟ್ಟಿನಲ್ಲಿ ಇ ಡಿ 2024ರ ನವೆಂಬರ್‌ 6ರಂದು ನೀಡಿರುವ ನೋಟಿಸ್‌ಗೆ ತಡೆ ನೀಡಬೇಕು ಎಂದು ನಟೇಶ್‌ ಮಧ್ಯಂತರ ಮನವಿ ಮಾಡಿದ್ದಾರೆ.