Supreme Court, Air Pollution  
ಸುದ್ದಿಗಳು

ದೆಹಲಿ ಮಾಲಿನ್ಯ: 'ರೈತರನ್ನಷ್ಟೇ ದೂಷಿಸುವುದೇಕೆ?' ಸುಪ್ರೀಂ ಪ್ರಶ್ನೆ

ಕೋವಿಡ್ ಸಮಯದಲ್ಲಿಯೂ ಕೃಷಿ ತ್ಯಾಜ್ಯ ಸುಡಲಾಗುತ್ತಿತ್ತು. ಆದರೆ ಆಗ ದೆಹಲಿಯ ಆಕಾಶ ತಿಳಿಯಾಗಿತ್ತು ನಕ್ಷತ್ರಗಳು ಕಾಣುತ್ತಿದ್ದವು ಏಕೆ ಎಂದು ನ್ಯಾಯಾಲಯ ಮಾರ್ಮಿಕವಾಗಿ ಪ್ರಶ್ನಿಸಿತು.

Bar & Bench

ದೆಹಲಿ ವಾಯು ಮಾಲಿನ್ಯ ಬಿಕ್ಕಟ್ಟಿಗೆ ರೈತರು ಕೃಷಿ ತ್ಯಾಜ್ಯ ಸುಡುವುದೊಂದೇ ಕಾರಣವೇ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅನುಮಾನ ವ್ಯಕ್ತಪಡಿಸಿದೆ.

ಕೃಷಿ ತ್ಯಾಜ್ಯ ಹೊರತಾಗಿ ಇತರ ಮಾಲಿನ್ಯಕಾರಕಗಳ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್‌ ಮತ್ತು ನ್ಯಾ. ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ವರದಿ ಕೇಳಿತು.

ರಾಷ್ಟ್ರ ರಾಜಧಾನಿಯಲ್ಲಿನ ವಾಯು ಮಾಲಿನ್ಯ ಬಿಕ್ಕಟ್ಟು ಸೇರಿದಂತೆ ಹಲವಾರು ಪರಿಸರ ಸಮಸ್ಯೆಗಳನ್ನು ನಿಭಾಯಿಸುವ ಸಂಬಂಧ ದೀರ್ಘಕಾಲದಿಂದ ಬಾಕಿ ಉಳಿದಿರುವ ಎಂಸಿ ಮೆಹ್ತಾ ಪ್ರಕರಣದ ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.

ದೆಹಲಿ ಮತ್ತು ಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣಾ ಆಯೋಗ (ಸಿಎಕ್ಯೂಎಂ) ಈ ಪ್ರದೇಶಗಳ ಮಾಲಿನ್ಯ ನಿಭಾಯಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ ಇಂದು ನ್ಯಾಯಾಲಯಕ್ಕೆ ತಿಳಿಸಿದರು.

ತ್ಯಾಜ್ಯ ದಹನ, ವಾಹನ ಮಾಲಿನ್ಯ, ನಿರ್ಮಾಣ ಕಾಮಗಾರಿ ಧೂಳು, ರಸ್ತೆ ಧೂಳು ಮತ್ತು ಜೈವಿಕ ತ್ಯಾಜ್ಯ ದಹನ ಮಾಲಿನ್ಯಕ್ಕೆ ಕಾರಣವಾಗುವ ಅಂಶಗಳೆಂದು ಅದು ಗುರುತಿಸಿದೆ ಎಂದು ಅವರು ಹೇಳಿದರು.

ಕೋವಿಡ್‌ ಸಮಯದಲ್ಲಿಯೂ ಕೃಷಿ ತ್ಯಾಜ್ಯ ಸುಡಲಾಗುತ್ತಿತ್ತು. ಆದರೆ ಆಗ ದೆಹಲಿಯ ಆಕಾಶ ತಿಳಿಯಾಗಿತ್ತು ನಕ್ಷತ್ರಗಳು ಕಾಣುತ್ತಿದ್ದವು ಏಕೆ?
ಸುಪ್ರೀಂ ಕೋರ್ಟ್‌

ಈ ಹಂತದಲ್ಲಿ ಸಿಜೆಐ ಸೂರ್ಯ ಕಾಂತ್‌ ಅವರು ʼನ್ಯಾಯಾಲಯದಲ್ಲಿ ರೈತರನ್ನು ಪ್ರತಿನಿಧಿಸುವವರು ಇಲ್ಲವಾದ್ದರಿಂದ  ಕೃಷಿ ತ್ಯಾಜ್ಯ ಸುಡುವ ರೈತರನ್ನು ದೂಷಿಸುವುದು ಸುಲಭʼ ಎಂದರು.

ಈ ಹಿಂದೆಯೂ ಕೂಡ ಕೃಷಿ ತ್ಯಾಜ್ಯ ದಹನ ನಡೆದಿತ್ತು, ಆದರೆ ದೆಹಲಿಯಲ್ಲಿ ಈಗಿನಂತೆ ಆಗ ಗಾಳಿಯ ಗುಣಮಟ್ಟ ಇಷ್ಟೊಂದು ಕುಸಿದಿರಲಿಲ್ಲ ಎಂದು ಅವರು ಹೇಳಿದರು.

ಕೋವಿಡ್ ಸಮಯದಲ್ಲಿಯೂ ಕೃಷಿ ತ್ಯಾಜ್ಯ ಸುಡಲಾಗುತ್ತಿತ್ತು. ಆದರೆ ಆಗ ದೆಹಲಿಯ ಆಕಾಶ ತಿಳಿಯಾಗಿತ್ತು ನಕ್ಷತ್ರಗಳು ಕಾಣುತ್ತಿದ್ದವು ಏಕೆ? ಇದನ್ನೆಲ್ಲಾ ಯೋಚಿಸಬೇಕು, ಉಳಿದ ಕಾರಣಗಳತ್ತ ಗಮನಹರಿಸಬೇಕು ಎಂದು ಸಿಜೆಐ ಹೇಳಿದರು. ಆ ಬಗ್ಗೆ ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಅವರು ಸೂಚಿಸಿದರು.

ಮಾಲಿನ್ಯ ಸಂಕಷ್ಟ ನಿವಾರಿಸುವ ನಿಟ್ಟಿನಲ್ಲಿ ಈ ಪ್ರಕರಣವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುವುದಾಗಿಯೂ ನ್ಯಾಯಾಲಯ ಇದೇ ವೇಳೆ ತಿಳಿಸಿತು.