ಸುದ್ದಿಗಳು

ಜಾಮೀನು ಪಡೆಯುವುದಕ್ಕಾಗಿ ಮಧುಮೇಹಿ ಕೇಜ್ರಿವಾಲ್ ಉದ್ದೇಶಪೂರ್ವಕವಾಗಿ ಮಾವು, ಸಿಹಿ ತಿನ್ನುತ್ತಿದ್ದಾರೆ: ಇ ಡಿ ಆರೋಪ

Bar & Bench

ಜೈಲಿನಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ವೈದ್ಯಕೀಯ ಆಧಾರದಲ್ಲಿ ಜಾಮೀನು ಪಡೆಯುವುದಕ್ಕಾಗಿ ಉದ್ದೇಶಪೂರ್ವಕವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಿಸಿಕೊಳ್ಳಲು ಮಾವಿನಹಣ್ಣು, ಸಿಹಿ ತಿನಿಸು ಹಾಗೂ ಸಕ್ಕರೆಯುಕ್ತ ಚಹಾ ಸೇವಿಸುತ್ತಿದ್ದಾರೆ ಎಂದು ಇ ಡಿ ಗುರುವಾರ ದೆಹಲಿ ನ್ಯಾಯಾಲಯದಲ್ಲಿ ಆರೋಪಿಸಿದೆ.

ನಿಯಮಿತವಾಗಿ ತಮ್ಮ ದೇಹದ ಸಕ್ಕರೆ ಮಟ್ಟ  ಪರೀಕ್ಷಿಸಲು ಮತ್ತು ವೀಡಿಯೊ ಕಾನ್ಫರೆನ್ಸ್ ಮೂಲಕ ತಮ್ಮ ವೈದ್ಯರೊಂದಿಗೆ ಸಮಾಲೋಚಿಸಲು ಅವಕಾಶ ಮಾಡಿಕೊಡುವಂತೆ  ಕೇಜ್ರಿವಾಲ್‌ ಅವರು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರೆದುರು ಪ್ರಾರ್ಥಿಸಿದರು. ಆಗ ಇ ಡಿ ಪರ ವಕೀಲ ಜೊಹೆಬ್ ಹೊಸೈನ್ ಈ ಪ್ರತಿಕ್ರಿಯೆ ನೀಡಿದರು.

ನ್ಯಾಯಾಂಗ ಬಂಧನದಲ್ಲಿರುವ ಕೇಜ್ರಿವಾಲ್‌ ಅವರು ಮಧುಮೇಹ ಇದೆ ಎಂದು ಹೇಳಿಕೊಂಡ ಕಾರಣ ಅವರಿಗೆ ಮನೆಯಲ್ಲಿ ತಯಾರಿಸಿದ ಆಹಾರ ನೀಡಲಾಗುತ್ತಿತ್ತು. ಆದರೆ ಅವರು ಮಾವು, ಸಿಹಿ ತಿನಿಸು ಹಾಗೂ ಸಕ್ಕರೆಯುಕ್ತ ಚಹಾ ಸೇವಿಸುತ್ತಿದ್ದಾರೆ. ಜಾಮೀನು ಪಡೆಯುವುದಕ್ಕಾಗಿ ಇದನ್ನು ಆಧಾರ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ದೂರಿದರು.

ಕೇಜ್ರಿವಾಲ್‌ ಸೇವಿಸುತ್ತಿರುವ ಆಹಾರ ಹಾಗೂ ಔಷಧಗಳ ಬಗ್ಗೆ ಇ ಡಿ ತಿಹಾರ್‌ ಜೈಲಿಗೆ ಪತ್ರ ಬರೆದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಜ್ರಿವಾಲ್ ಅವರ ಪರ ವಕೀಲ ವಿವೇಕ್ ಜೈನ್, ಕೇವಲ ಮಾಧ್ಯಮಗಳ ಸಲುವಾಗಿ ಇ ಡಿ ಇಂತಹ ಆರೋಪ ಮಾಡುತ್ತಿದೆ ಎಂದರು.

ಕೇಜ್ರಿವಾಲ್‌ ಅವರ ಈ ಅರ್ಜಿಯನ್ನು ಈಗ ಹಿಂಪಡೆಯುತ್ತಿದ್ದು ಇನ್ನೂ ಉತ್ತಮವಾದ ಅರ್ಜಿಯನ್ನು ಸಲ್ಲಿಸುವುದಾಗಿ ಜೈನ್‌ ಈ ಸಂದರ್ಭದಲ್ಲಿ ತಿಳಿಸಿದರು.

ಕೇಜ್ರಿವಾಲ್ ಅವರ ಆಹಾರದ ಮಾಹಿತಿ ನೀಡುವಂತೆ ನ್ಯಾಯಾಲಯ ಇದೇ ವೇಳೆ ತಿಹಾರ್ ಜೈಲು ಅಧಿಕಾರಿಗಳಿಗೆ ಸೂಚಿಸಿತು.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿತ್ತು.