ED & Karnataka HC 
ಸುದ್ದಿಗಳು

ಷೆಡ್ಯೂಲ್‌ ಅಪರಾಧದದಲ್ಲಿ ಆರೋಪಿ ಹೆಸರಿಲ್ಲದಿದ್ದರೂ ವಿಚಾರಣೆಗೆ ಹಾಜರಾಗಲು ಇ ಡಿ ಸಮನ್ಸ್‌ ಜಾರಿ ಮಾಡಬಹುದು: ಹೈಕೋರ್ಟ್‌

ಸಮನ್ಸ್‌ ಜಾರಿಗೊಳಿಸಿದಾಕ್ಷಣ ಅರ್ಜಿದಾರರ ವಿರುದ್ಧ ಯಾವುದೇ ಆರೋಪ ಮಾಡಿದಂತೆ ಅಲ್ಲ. ಸಮನ್ಸ್ ಪಡೆದವರು ಸಕ್ಷಮ ಪ್ರಾಧಿಕಾರದ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಬೇಕು ಅಷ್ಟೇ ಎಂದು ನ್ಯಾಯಾಲಯ ಹೇಳಿದೆ.

Bar & Bench

ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ರೂಪಾಯಿಗಳ ಅವ್ಯವಹಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಆರ್‌ ಎಂ ಮಂಜುನಾಥ್‌ ಗೌಡ ಅವರು ಜಾರಿ ನಿರ್ದೇಶನಾಲಯ (ಇ ಡಿ) ತಮಗೆ ನೀಡಿದ್ದ ಸಮನ್ಸ್‌ ಪ್ರಶ್ನಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ.

“ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ–2002ರ (ಪಿಎಂಎಲ್‌ಎ) ಅನುಸಾರ ಷೆಡ್ಯೂಲ್ಡ್‌ ಅಪರಾಧ ಬಾಕಿ ಇದ್ದರೆ ಷೆಡ್ಯೂಲ್ಡ್‌ ಅಪರಾಧ ಪ್ರಕರಣಗಳಲ್ಲಿ ಆರೋಪಿಯ ಹೆಸರು ಇಲ್ಲದಿದ್ದರೂ ವಿಚಾರಣೆಗೆ ಹಾಜರಾಗುವಂತೆ ಅಂಥವರಿಗೆ ಇ ಡಿ ಸಮನ್ಸ್‌ ಜಾರಿಗೊಳಿಸಬಹುದು” ಎಂದು ನ್ಯಾಯಮೂರ್ತಿಗಳಾದ ವಿ ಕಾಮೇಶ್ವರ ರಾವ್‌ ಮತ್ತು ಎಸ್‌ ರಾಚಯ್ಯ ಅವರ ನೇತೃತ್ವದ ವಿಭಾಗೀಯ ಪೀಠವು ಮಹತ್ವದ ಆದೇಶ ಮಾಡಿದೆ.

“ಸಮನ್ಸ್‌ ಜಾರಿಗೊಳಿಸಿದಾಕ್ಷಣ ಅರ್ಜಿದಾರರ ವಿರುದ್ಧ ಯಾವುದೇ ಆರೋಪ ಮಾಡಿದಂತೆ ಅಲ್ಲ. ಸಮನ್ಸ್ ಪಡೆದವರು ಸಕ್ಷಮ ಪ್ರಾಧಿಕಾರದ ಮುಂದೆ ಹಾಜರಾಗಿ ತಮ್ಮ ಹೇಳಿಕೆಯನ್ನು ದಾಖಲಿಸಬೇಕು ಅಷ್ಟೇ. ಸಮನ್ಸ್‌ ಜಾರಿ ಕ್ರಮವನ್ನು ದೋಷಪೂರಿತ ಎಂದು ಪರಿಗಣಿಸಲು ಆಗದು. ಹೀಗಾಗಿ, ಏಕಸದಸ್ಯ ಪೀಠ ನೀಡಿರುವ ಆದೇಶ ಸರಿಯಾಗಿಯೇ ಇದೆ” ಎಂದು ಆದೇಶಿಸಿದೆ.

ಇ ಡಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ ಕಾಮತ್‌ ಹಾಗೂ ಮಧುಕರ ದೇಶಪಾಂಡೆ ವಾದ ಮಂಡಿಸಿದ್ದರು. ಮೇಲ್ಮನವಿದಾರರ ಪರ ಹಿರಿಯ ವಕೀಲ ಜಯಕುಮಾರ್‌ ಪಾಟೀಲ್‌ ಮತ್ತು ವರುಣ್‌ ಕುಮಾರ್‌ ಪಾಟೀಲ್‌ ವಾದಿಸಿದ್ದರು.

ಪ್ರಕರಣದ ಹಿನ್ನೆಲೆ: ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಗಾಂಧಿ ಬಜಾರ್‌ ಶಾಖೆಯಲ್ಲಿ 2014ರಲ್ಲಿ ನಡೆದ ₹62.77 ಕೋಟಿ ಬಂಗಾರ ಅಡಮಾನ ಸಾಲದ ಹಗರಣಕ್ಕೆ ಸಂಬಂಧಿಸಿದಂತೆ 2014ರಲ್ಲಿ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು 2014ರ ಅಕ್ಟೋಬರ್‌ 18ರಂದು ವಿಚಾರಣಾ ನ್ಯಾಯಾಲಯಕ್ಕೆ ಮೊದಲ ಆರೋಪಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 1997ರಿಂದ 2020ರವೆಗೆ ಶಿವಮೊಗ್ಗ ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿದ್ದ ಆರ್‌ ಎಂ ಮಂಜುನಾಥ ಗೌಡ ಅವರಿಗೆ 2023ರ ಅಕ್ಟೋಬರ್ 6ರಂದು ಇ ಡಿ ಸಮನ್ಸ್‌ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಂಜುನಾಥ ಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ನಟರಾಜ್‌ ಅವರ ಏಕಸದಸ್ಯ ಪೀಠ 2024ರ ಫೆಬ್ರುವರಿಯಲ್ಲಿ ವಜಾಗೊಳಿಸಿತ್ತು.

R M Manjunath Gowda Vs ED.pdf
Preview