ಇಡಿ, ಸುಪ್ರೀಂ ಕೋರ್ಟ್
ಇಡಿ, ಸುಪ್ರೀಂ ಕೋರ್ಟ್ 
ಸುದ್ದಿಗಳು

ಇ ಡಿ ಯಾವುದೇ ವ್ಯಕ್ತಿಗೆ ಸಮನ್ಸ್‌ ನೀಡಬಹುದು; ಪಡೆದವರು ಅದನ್ನು ಗೌರವಿಸಿ ಪ್ರತಿಕ್ರಿಯೆ ನೀಡಬೇಕು: ಸುಪ್ರೀಂ ಕೋರ್ಟ್

Bar & Bench

ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆಯ (ಪಿಎಂಎಲ್‌ಎ) ಸೆಕ್ಷನ್ 50ರ ಅಡಿಯಲ್ಲಿ ಸಮನ್ಸ್ ಪಡೆದ ವ್ಯಕ್ತಿ ತನಿಖೆ ವೇಳೆ ಜಾರಿ ನಿರ್ದೇಶನಾಲಯ (ಇ ಡಿ) ಹೊರಡಿಸಿದ ಸಮನ್ಸ್‌ಗಳನ್ನು ಗೌರವಿಸಿ ಅವುಗಳಿಗೆ ಪ್ರತಿಕ್ರಿಯೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ.

ತನಿಖೆಗೆ ಇ ಡಿ ಸಮನ್ಸ್‌ ನೀಡಿದರೆ ಅದನ್ನು ಪಡೆದ ವ್ಯಕ್ತಿ ಹಾಜರಾಗಿ ಪಿಎಂಎಲ್ಎ ಅಡಿಯ ತನಿಖೆಗೆ ಅಗತ್ಯವಿದ್ದರೆ ಅಂತಹ ಪುರಾವೆಗಳನ್ನು ಹಾಜರುಪಡಿಸಬೇಕು ಎಂದು ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮತ್ತು ನ್ಯಾಯಮೂರ್ತಿ ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಒತ್ತಿಹೇಳಿತು.

ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ಮತ್ತು ನ್ಯಾಯಮೂರ್ತಿ ಪಂಕಜ್ ಮಿಥಾಲ್

ಪಿಎಂಎಲ್ಎಯ ಸೆಕ್ಷನ್ 50 ರ ಪ್ರಕಾರ, ತನಿಖೆಯ ಅಗತ್ಯವಿದೆ ಎಂದು ಪರಿಗಣಿಸುವ ಯಾವುದೇ ವ್ಯಕ್ತಿಯ ಸಾಕ್ಷ್ಯ ಪಡೆಯಲು ಅಥವಾ ಕಾಯಿದೆಯಡಿ ಯಾವುದೇ ತನಿಖೆ ಅಥವಾ ವಿಚಾರಣೆಯ ಸಮಯದಲ್ಲಿ ದಾಖಲೆ ಹಾಜರುಪಡಿಸಲು ಸಮನ್ಸ್ ನೀಡುವ ಅಧಿಕಾರ ಇ ಡಿ ಅಧಿಕಾರಿಗಳಿಗೆ ಇದೆ.

ಅಬಕಾರಿ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕನಿಷ್ಠ ಆರು ಸಮನ್ಸ್‌ಗಳನ್ನು ನೀಡಿದ್ದರೂ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಲು ನಿರಾಕರಿಸುತ್ತಿರುವ ಬಗ್ಗೆ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನಿಬಂಧನೆಯ ಕುರಿತಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಮಾಡಿರುವ ಅವಲೋಕನಗಳು ಮಹತ್ವ ಪಡೆದುಕೊಂಡಿವೆ.

ಮರಳು ಗಣಿಗಾರಿಕೆ ಹಗರಣದ ತನಿಖೆಗೆ ಸಂಬಂಧಿಸಿದಂತೆ ತಮಿಳುನಾಡಿನ ಐವರು ಜಿಲ್ಲಾಧಿಕಾರಿಗಳಿಗೆ ನೀಡಿದ್ದ ಸಮನ್ಸ್ ಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿರುವುದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. 

ಜಾರಿ ನಿರ್ದೇಶನಾಲಯದ ಸಮನ್ಸ್ ಪ್ರಶ್ನಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ್ದ ಮದ್ರಾಸ್‌ ಹೈಕೋರ್ಟ್‌ ವಿಭಾಗೀಯ ಪೀಠ ಸಮನ್ಸ್‌ಗೆ ತಡೆಯಾಜ್ಞೆ ನೀಡಿತ್ತು. ಈ ಮಧ್ಯಂತರ ಆದೇಶವನ್ನು ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಇಂದು ತಡೆಯಾಜ್ಞೆ ತೆಗೆದುಹಾಕಿರುವ ಸುಪ್ರೀಂ ಕೋರ್ಟ್‌ ಸಮನ್ಸ್‌ ಅನ್ವಯ ಜಿಲ್ಲಾಧಿಕಾರಿಗಳು ಇಡಿ ಮುಂದೆ ಹಾಜರಾಗಬೇಕು ಎಂದು ಆದೇಶಿಸಿತು.